ಗುರುವಾರದ ವಿಧಾನಸಭೆ ಕಲಾಪದಲ್ಲಿ ಏನೇನಾಯ್ತು?
ಬೆಂಗಳೂರು, ಫೆ.5 : ಬೆಂಗಳೂರಿಗೆ ಆಗಮಿಸದಂತೆ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ವಿಧಿಸಿರುವ ಪ್ರಕರಣ ಇಂದು ಸಹ ಉಭಯ ಸದನಗಳಲ್ಲಿ ಚರ್ಚೆಗೆ ಕಾರಣವಾಯಿತು. ನಿಷೇಧ ಹಾಕಿರವ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯ ಯಾವುದೇ ಬೆದರಿಕೆಗಳಿಗೆ ಮಣಿದು ನಿರ್ಬಂಧ ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
'ಇವರೇನು ಕುಡಿದಿದ್ದಾರೇನ್ರೀ' ಎಂದು ಆಡಳಿತ ಪಕ್ಷದ ಕಡೆ ಕೈತೋರಿಸಿ ಪ್ರತಿಪಕ್ಷದ ನಾಯಕ ಈಶ್ವರಪ್ಪ ಪರಿಷತ್ತಿನಲ್ಲಿ ರೇಗಿದರು. 'ಕೆ.ಎಸ್.ಈಶ್ವರಪ್ಪ ಅವರು ಯಾವಾಗಲೂ ಮದುವೆ ಮೂಡಿನಲ್ಲಿರ್ತಾರೆ' ಎಂದು ಸಿಎಂ ಸಿದ್ದರಾಮಯ್ಯ ಕೀಚಾಯಿಸಿದರು. 'ಚಿನ್ನದ ಬಗ್ಗೆ ಪ್ರಶ್ನೆಗಳಿವೆಯೇ ಶರವಣ?' ಎಂದು ಪರಿಷತ್ತಿನಲ್ಲಿ ಶರವಣ ಅವರನ್ನು ಪ್ರಶ್ನಿಸಿದ ಸಿಎಂ ಸದನದಲ್ಲಿ ನಗುವಿನ ಅಲೆ ಮೂಡುವಂತೆ ಮಾಡಿದರು. ಇಂದಿನ ಕಲಾಪದ ಮುಖ್ಯಾಂಶಗಳು ಇಲ್ಲಿವೆ.

ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನ : ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಪ್ರಾರಂಭಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಹೇಳಿದರು.[ತೊಗಾಡಿಯಾಗೆ ನಿಷೇಧ ಯಾರು, ಏನು ಹೇಳಿದರು?]
ಬಿಜೆಪಿಯ ವಿ. ಸುನೀಲ್‌ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕ್ರಿಯೆ ಪ್ರಾರಂಭವಾದಾಗ ಈಗಾಗಲೇ ಪಡಿತರ ಚೀಟಿ ರದ್ದುಪಡಿಸಿದವರೂ ಹೊಸದಾಗಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ನಮ್ಮ ಸರ್ಕಾರ ಇದುವರೆಗೂ 1.6 ಲಕ್ಷ ಹೊಸ ಕಾರ್ಡ್‌ಗಳನ್ನು ನೀಡಿದೆ. ನಕಲಿ ಕಾರ್ಡ್ ತಡೆಯುವ ಆಂದೋಲನ ಮುಂದುವರೆದಿದೆ ಎಂದು ತಿಳಿಸಿದರು.
ಚಿನ್ನದ ಬಗ್ಗೆ ಪ್ರಶ್ನೆ ಇದೇಯೇ ಶರವಣ : 'ಚಿನ್ನದ ಬಗ್ಗೆ ಪ್ರಶ್ನೆ ಇದೆಯೇ ಶರವಣ?' ಎಂದು ಸಿಎಂ ಸಿದ್ದರಾಮಯ್ಯ ಪರಿಷತ್ ಸದಸ್ಯ ಟಿ.ಎ.ಶರವಣ ಅವರನ್ನು ಕೀಚಾಯಿಸಿದ ಘಟನೆ ಇಂದು ನಡೆಯಿತು. ನೀರಿನ ಕುರಿತು ಶರವಣ ಅವರು ಪ್ರಶ್ನೆ ಕೇಳಿದ ನಂತರ ಸಿಎಂ ಉತ್ತರಿಸಲು ಆರಂಭಿಸಿದರು. ಕುಳಿತುಕೊಳ್ಳಿ ಎಂದು ಸಿಎಂ ಹೇಳಿದರು. ಆದರೂ ಶರವಣ ನಿಂತೇ ಇದ್ದದ್ದು ಕಂಡ ಸಿಎಂ ಚಿನ್ನದ ಬಗ್ಗೆ ಪ್ರಶ್ನೆಗಳಿವೆಯೇ? ಎಂದು ಪ್ರಶ್ನಿಸಿದರು. ಇದನ್ನು ಕೇಳಿದ ಸದನದಲ್ಲಿ ನಗುವಿನ ಅಲೆ ಮೂಡಿತು.

ಲಾಟರಿ ಆರಂಭವಿಲ್ಲ : ರಾಜ್ಯದಲ್ಲಿ ಲಾಟರಿಯನ್ನು ಪುನಃ ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಬಸವರಾಜ ಹೊರಟ್ಟಿಯವರ ಪ್ರಸ್ತಾಪಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು ಲಾಟರಿ ಪುನರಾರಂಭಿಸುವಂತೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದರು.[ಲಾಟರಿ ನಿಷೇಧವಿಲ್ಲ : ವಿರಗಳು ಇಲ್ಲಿವೆ]
ಮೀಸಲಾತಿ ಪ್ರಮಾಣ ಶೇ 33ಕ್ಕೆ ಏರಿಕೆ? : ರಾಜ್ಯ ಸರ್ಕಾರದ ಉದ್ಯೋಗದ ನೇಮಕದಲ್ಲಿ ಮಹಿಳೆಯರ ಮೀಸಲು ಪ್ರಮಾಣವನ್ನು ಶೇ. 33ಕ್ಕೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯೆ ಡಾ.ಜಯಮಾಲಾ ಅವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. 1996ರಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಹುದ್ದೆ ನೀಡಬೇಕು ಎಂಬ ನಿಯಮ ಮಾಡಲಾಗಿದೆ. 5 ಲಕ್ಷ 39 ಸಾವಿರ ನೌಕರರ ಪೈಕಿ 1 ಲಕ್ಷದ 63 ಸಾವಿರ 395 ಮಂದಿ ಮಹಿಳೆಯರು ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.
ಹಣ ದುರುಪಯೋಗ ಮಾಡಿಕೊಂಡರೆ ಕ್ರಮ : ಜಲಮಂಡಳಿ ಅಧಿಕಾರಿಗಳು ಮತ್ತು ನೌಕರರು ಗ್ರಾಹಕರ ಠೇವಣಿ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣದ ಬಗ್ಗೆ ದೂರು ದಾಖಲಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದರು.
ಯಾವುದೇ ಕಾರ್ಖನೆ ಸ್ಥಳಾಂತರವಿಲ್ಲ : ರಾಜ್ಯದಲ್ಲಿ ಸ್ಥಾಪನೆ ಆಗಬೇಕಾಗಿರುವ ಯಾವುದೇ ಕೈಗಾರಿಕೆಗಳು ರಾಜ್ಯ ಬಿಟ್ಟು ನೆರೆ ರಾಜ್ಯಗಳಿಗೆ ಹೋಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ವರ್ಷದ ಅವಧಿಯಲ್ಲಿ 356 ಕಂಪನಿಗಳು ಮುಂದೆ ಬಂದಿವೆ. ಏಕಗವಾಕ್ಷಿ ಯೋಜನೆಯಡಿ 124 ಕಂಪನಿಗಳು ಸ್ವೀಕೃತಿಗೊಂಡಿದೆ. ಹಿರೋ ಮೋಟಾರ್ಸ್ ಕಂಪನಿ ಮಾತ್ರ ರಾಜ್ಯದಿಂದ ಹೊರ ಹೋಗಿದೆ ಎಂದು ಹೇಳಿದರು.












Click it and Unblock the Notifications