Karnataka Elections: ಅಂದಿನಿಂದ ಇಂದಿನವರೆಗೆ ರಾಜಕೀಯ ಪಕ್ಷಗಳ ಏರಿಳಿತದ ಗ್ರಾಫ್
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬರುವ ಬುಧವಾರದಂದು (ಮೇ 10) ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಇದುವರೆಗೆ ಬಂದಿರುವ ಚುನಾವಣಾಪೂರ್ವ ಸಮೀಕ್ಷೆಗಳು ಬಹುತೇಕ ಒಂದೋ ಅತಂತ್ರ, ಇಲ್ಲವೇ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.
1952 ರಿಂದ 2018ರ ವರೆಗೆ ಕರ್ನಾಟಕದಲ್ಲಿ (ಹಿಂದಿನ ಮೈಸೂರು ಪ್ರಾಂತ್ಯವೂ ಸೇರಿ) ರಾಜಕೀಯ ಪಕ್ಷಗಳ ಏರಿಳಿತದ ಗ್ರಾಫ್ ಅನ್ನು ಫ್ಲೋರಿಷ್ ಟೆಕ್ನಾಲಜಿ ಮೂಲಕ ಇಲ್ಲಿ ನೀಡಲಾಗಿದೆ. ಜನತಾದಳ, ಜನತಾ ಪಕ್ಷ, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮುಂತಾದ ಪಕ್ಷಗಳ ರಾಜಕೀಯ ಚಿತ್ರಣ ಹೇಗೆ ಬದಲಾಗುತ್ತಾ ಬಂತು ಎನ್ನುವುದನ್ನು ಗ್ರಾಫ್ ಮೂಲಕ ನೀಡಲಾಗಿದೆ.

18 ಜೂನ್ 1952 ರಂದು, ಹೊಸದಾಗಿ ರಚನೆಯಾದ ಮೈಸೂರು ವಿಧಾನಸಭೆಯ ಮೊದಲ ಅಧಿವೇಶನವು ಬೆಂಗಳೂರಿನ ಹಳೆಯ ಸಾರ್ವಜನಿಕ ಕಚೇರಿ ಕಟ್ಟಡದ ಸಮ್ಮೇಳನ ಸಭಾಂಗಣದಲ್ಲಿ (ಇಂದಿನ ಹೈಕೋರ್ಟ್ ಕಟ್ಟಡ ) ನಡೆದಿತ್ತು. ಮೊದಲ ವಿಧಾನಸಭೆಯಲ್ಲಿ 99 ಚುನಾಯಿತ ಮತ್ತು ಒಬ್ಬ ನಾಮನಿರ್ದೇಶಿತ ಸದಸ್ಯರಿದ್ದರು.
ರಾಜ್ಯ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ವಿ.ವೆಂಕಟಪ್ಪ ಅವರು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ ಗೌರವಾಧ್ಯಕ್ಷರಾಗಿದ್ದರು. ಮೈಸೂರು ರಾಜ್ಯದ ಮರು ಸಂಘಟನೆಯ ನಂತರ, 1 ನವೆಂಬರ್ 1956 ರಂದು ಹಿಂದಿನ ಬಾಂಬೆ ರಾಜ್ಯದಿಂದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ರಾಜ್ಯದ ಮೂರು ಜಿಲ್ಲೆಗಳು, ಹಳೆಯ ಮದ್ರಾಸ್ ರಾಜ್ಯದ ಕೂರ್ಗ್‌ನ ಒಂದು ಜಿಲ್ಲೆ ಸೇರಿ1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ನೂತನ ವಿಧಾನಸಭೆಯ ಮೊದಲ ಸಭೆಯು 19 ಡಿಸೆಂಬರ್ 1956 ರಂದು ಹೊಸದಾಗಿ ನಿರ್ಮಿಸಲಾದ ವಿಧಾನಸೌಧದಲ್ಲಿ ನಡೆಯಿತು. 1957 ರಲ್ಲಿ 208 ರಷ್ಟಿದ್ದ ವಿಧಾನಸಭೆಯ ಬಲವು 1967 ರಲ್ಲಿ 216 ಕ್ಕೆ ಮತ್ತು 1978 ರಲ್ಲಿ ನಾಮನಿರ್ದೇಶಿತ ಸದಸ್ಯರ ಜೊತೆಗೆ 224ಕ್ಕೆ ಏರಿತು. ಕೆ ಎಸ್ ನಾಗರತ್ನಮ್ಮ ಅವರು 24 ಮಾರ್ಚ್ 1972 ರಿಂದ 3 ಮಾರ್ಚ್ 1978 ರವರೆಗೆ ರಾಜ್ಯದ ಏಕೈಕ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.
ಇದುವರೆಗೆ ಒಟ್ಟು ಹದಿನೈದು ಅಸೆಂಬ್ಲಿಗಳು ನಡೆದಿವೆ ಮತ್ತು ಈಗ ನಡೆಯುತ್ತಿರುವುದು ಹದಿನಾರನೇ ವಿಧಾನಸಭೆಗೆ ಚುನಾವಣೆ. 18.06.1952 ರಿಂದ ಇದುವರೆಗೆ ರಾಜ್ಯ ಹಲವು ಮುಖ್ಯಮಂತ್ರಿಗಳನ್ನು, ಬೇರೆ ಬೇರೆ ಪಕ್ಷದ ಸರಕಾರವನ್ನು ಕಂಡಿದೆ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ಹಲವರು ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದಾರೆ.
1957 ರಿಂದ 1978ರ ಅವಧಿಯಲ್ಲಿ ಪಿಎಸ್‌ಪಿ, ಜೆಎನ್‌ಪಿ, ಐಎನ್‌ಸಿ(ಐ) ಮುಂತಾದ ಪಕ್ಷಗಳೂ ಸ್ಪರ್ಧಾ ಕಣದಲ್ಲಿದ್ದವು. ಈ ಪಕ್ಷಗಳು ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿಯನ್ನು ನೀಡಿದ್ದವು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ (ಮಾಹಿತಿ: ವಿಕಿಪಿಡಿಯಾ)












Click it and Unblock the Notifications