Karnataka Assembly Live : 2nd Day CM HD Kumaraswamy Floor Test 2019 | BS Yeddyuppa
ಬೆಂಗಳೂರು, ಜುಲೈ 19: ವಿಶ್ವಾಸಮತ ಯಾಚನೆಯನ್ನು ವ್ಯವಸ್ಥಿತವಾಗಿ ಮುಂದೂಡಲು ಯಶಸ್ವಿಯಾಗಿರುವ ಆಡಳಿತ ಪಕ್ಷದ ಸದಸ್ಯರು ಶುಕ್ರವಾರವಾದರೂ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ನಿನ್ನೆ ನಡೆದ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮೇಲೆ ಭಾಷಣ ಆರಂಭಿಸಿದ್ದಾಗ ಕಾರ್ಯಲೋಪವನ್ನು ಎತ್ತಿದ ಸಿದ್ದರಾಮಯ್ಯ ಅವರು ಸುಪ್ರೀಂತೀರ್ಪಿನಿಂದಾಗಿ ಪಕ್ಷದ ಹಾಗೂ ಶಾಸಕಾಂಗ ಪಕ್ಷದ ನಾಯಕನಿಗೆ ಇದ್ದ ಹಕ್ಕುಗಳ ಉಲ್ಲಂಘನೆ ಆಗಿದೆ, ಈ ಪ್ರಕರಣ ಇತ್ಯರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಬೇಡವೆಂದು ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ಎತ್ತಿದ ಪಾಯಿಂಟ್ ಆಫ್ ಆರ್ಡರ್ (ಕಾರ್ಯಲೋಪ)ದ ಬಗ್ಗೆ ಸದನದಲ್ಲಿ ಅಷ್ಟು ಸುದೀರ್ಘವಾಗಿ ಚರ್ಚೆ ನಡೆದಿದ್ದು ವಿರಳವಾದುದ್ದಾಗಿತ್ತು, ಪಾಯಿಂಟ್ ಆಫ್ ಆರ್ಡರ್ ಬಗ್ಗೆ ಇಷ್ಟು ಸುಧೀರ್ಘವಾದ ಚರ್ಚೆ ಬಿಜೆಪಿಯಲ್ಲಿ ಅಸಮಾಧಾನ ಮೂಡಿಸಿ ಪದೇ-ಪದೇ ವಿಶ್ವಾಸಮತ ಯಾಚನೆಗೆ ಒತ್ತಾಯಿಸಿದರು.
ಭೋಜನ ವಿರಾಮದ ನಂತರ ಬಿಜೆಪಿ ಸದಸ್ಯರು ಸ್ಪೀಕರ್ ಅವರ ವಿರುದ್ಧ ಅಸಮಾಧಾನ ಹೊರಹಾಕಿ, ರಾಜ್ಯಪಾಲರಿಗೆ ಮನವಿ ನೀಡಿದರು. ಅಂತೆಯೇ ರಾಜ್ಯಪಾಲರು ಸ್ಪೀಕರ್ ಅವರಿಗೆ ಸಂದೇಶ ರವಾನಿಸಿ ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಿ ಎಂದರು. ಇದು ಆಡಳಿತ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಯಿತು.
ಅಂತಿಮವಾಗಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಸದನದಲ್ಲಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದ ಕಾರಣ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಆಡಳಿತ ಪಕ್ಷದ ಉದ್ದೇಶಪೂರ್ವಕ ವಿಳಂಬ ನೀತಿ ಖಂಡಿಸಿ ಬಿಜೆಪಿ ಸದಸ್ಯರು ರಾತ್ರಿಪೂರ್ತಿ ವಿಧಾನಸೌಧದಲ್ಲಿಯೇ ಕಳೆದರು.
ಇಂದು 11 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಇಂದು ಮಧ್ಯಾಹ್ನ 1:30 ರ ಒಳಗಾಗಿ ವಿಶ್ವಾಸಮತ ಯಾಚನೆ ಮುಗಿಸುವುದಾಗಿ ಹೇಳಿರುವ ಕಾರಣ ಇಂದಾದರೂ ವಿಶ್ವಾಸಮತ ಯಾಚನೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಲಾಪವನ್ನು ಮುಗಿಸುವ ಕುರಿತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಸಲಹೆ ಕೇಳಿದ ಸ್ಪೀಕರ್ ರಮೇಶ್ ಕುಮಾರ್, 'ರಾಜ್ಯಪಾಲರು ಬರೆದಿರುವ ಪತ್ರಕ್ಕೆ ಅಗೌರವ ತೋರಿಸುವುದಿಲ್ಲ. ಹಾಗೆಯೇ ಸದಸ್ಯರ ಹಕ್ಕು ಮೊಟಕುಗೊಳಿಸುವ ಉದ್ದೇಶವೂ ಇಲ್ಲ. ಸೋಮವಾರ ಇದಕ್ಕೆಲ್ಲ ತೆರೆ ಎಳೆಯೋಣ, ಮತದಾನ ಅಂದು ಮುಗಿಸೋಣ" ಎಂದು ಸಿದ್ದರಾಮಯ್ಯ ಹೇಳಿದರು.
Jul 19, 2019, 8:14 pm IST
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕರೆಸಿ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸಂಸದೀಯ ವ್ಯವಹಾರ ಸಚಿವರಿಗೆ ಮನವಿ ಮಾಡಿದರು.
Jul 19, 2019, 8:13 pm IST
ಕಲಾಪವನ್ನು ಸೋಮವಾರಕ್ಕೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರಿಂದ ಮತ್ತೆ ಒತ್ತಾಯ
Jul 19, 2019, 8:08 pm IST
"ಕುದುರೆ ವ್ಯಾಪಾರ, ಆಪರೇಷನ್ ಕಮಲ ಮುಖೇನ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂವಿಧಾನದ ಪಾಠವನ್ನು ನಿನ್ನೆ ಮತ್ತು ಇಂದು ಕರ್ನಾಟಕ ವಿಧಾನಸಭೆ ಮಾಡಿದೆ. ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ರಚನೆಯಾದ ಸರ್ಕಾರಗಳನ್ನು ಅಸ್ಥಿರಗೊಳಿಸುವುದು ಬಿಜೆಪಿಗೆ ವ್ಯಾಪಾರದಂತಾಗಿದೆ" ಎಂದು ಕಾಂಗ್ರೆಸ್ ಆರೋಪ ಮಾಡಿದೆ.
Jul 19, 2019, 7:58 pm IST
"ಇವತ್ತು ರಾತ್ರಿ 12 ಗಂಟೆಯ ತನಕ ನಾವು ಕಾಯಲು ಸಿದ್ಧ. ಮಾತನಾಡುವವರಿಗೆ ಎಲ್ಲಾ ಅವಕಾಶಕೊಡಿ. ಬಳಿಕ ಮುಖ್ಯಮಂತ್ರಿಗಳು ಮಾತನಾಡಲಿ. ಆ ಮೇಲೆ ಮತಕ್ಕೆ ಹಾಕಿ" ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.
Jul 19, 2019, 7:46 pm IST
ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಸದನಲ್ಲಿ ಮಾತನಾಡಿ, "ನಾವು ಕಷ್ಟಪಟ್ಟು ಶಾಸಕರಾಗಿದ್ದೇನೆ. ಮೊದಲ ಬಾರಿಗೆ ಶಾಸಕರಾದ ನಮಗೆ ಮಾತನಾಡಲು ಅವಕಾಶಕೊಡಿ. ನಾವು ಶಾಸಕರು ಮಾರಾಟದ ಸರಕಾಗಿದ್ದೇವೆ. ನಾವು ಕ್ಷೇತ್ರಕ್ಕೆ ಹೋದರೆ ಜನರು ಮಂಗಳಾರತಿ ಮಾಡುತ್ತಾರೆ" ಎಂದು ಹೇಳಿದರು
Jul 19, 2019, 7:43 pm IST
"ಪಕ್ಷಕ್ಕೆ ಚೂರಿ ಹಾಕಿದ್ದಾರೆ, ನಮ್ಮ ಪಕ್ಷದಿಂದ ಗೆದ್ದು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿಯವರು ಭಂಡತನ ಮಾಡಿದ್ದಾರೆ. ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದರು" ಎಂದು ಬೆಳಗಾವಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
Jul 19, 2019, 7:33 pm IST
ಸೋಮವಾರಕ್ಕೆ ಕಲಾಪ ಮುಂದೂಡುವಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರಿಂದ ಮತ್ತೆ ಒತ್ತಾಯ.
Jul 19, 2019, 6:56 pm IST
"ಅವಿಶ್ವಾಸ ನಿರ್ಣಯದ ಮೇಲೆ ದಿನಗಟ್ಟಲೇ ಚರ್ಚೆ ನಡೆದಿದೆ. ವಿಶ್ವಾಸ ನಿರ್ಣಯದ ಮೇಲೆ ಒಂದೇ ದಿನದಲ್ಲಿ ಚರ್ಚೆ ಮುಗಿದಿದೆ. ದಯಮಾಡಿ ಇಂದೇ 8 ಗಂಟೆಯಾಗಲಿ ಚರ್ಚೆಯನ್ನು ಮುಗಿಸಿ" ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಹೇಳಿದರು.
Jul 19, 2019, 6:53 pm IST
"ಸೋಮವಾರ ಕಲಾಪವನ್ನು ಮಗಿಸೋಣ ಎಂದು ನಾನು ಕೃಷ್ಣ ಬೈರೇಗೌಡ ಅವರಿಗೆ ಹೇಳಿದೆ. ಮುಖ್ಯಮಂತ್ರಿಗಳಿಗೆ ಇದನ್ನು ತಿಳಿಸಲು ಹೇಳಿದ್ದೇನೆ. ಇದಕ್ಕೆ ನೀವು ಒಪ್ಪಿಗೆ ಕೊಡಬೇಕು" ಎಂದು ಸಿದ್ದರಾಮಯ್ಯ ಹೇಳಿದರು.
Jul 19, 2019, 6:51 pm IST
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಸದನ ಎಷ್ಟು ಹೊತ್ತಿಗೆ ಮುಗಿಸಬೇಕು ಎಂದು ನೀವು ತೀರ್ಮಾನಿಸಿ. ಶುಕ್ರವಾರ ಬೇಗ ಕಲಾಪ ಮುಗಿಸಬೇಕು, ಆದರೆ, ಮಹತ್ವದ ವಿಚಾರವಾದ ಕಾರಣ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲು ಆಗುವುದಿಲ್ಲ. ಒಂದು, ಎರಡು, ಮೂರು ದಿನದಲ್ಲಿ ವಿಶ್ವಾಸಮತ ಮುಗಿಯಬೇಕು ಎಂದು ಎಲ್ಲಿಯೂ ನಿಯಮಗಳಿಲ್ಲ. ಯಾರು ಯಾರು ಮಾತನಾಡುತ್ತಾರೆ ಎಂದು ಪಟ್ಟಿ ಕೊಡುತ್ತಾರೆ. ಸೋಮವಾರ ಆ ಕಡೆಯವರು ಮಾತನಾಡಲಿ. ಎಲ್ಲರೂ ಮಾತನಾಡಿದ ಮೇಲೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟ ಮೇಲೆ ಮತಕ್ಕೆ ಹಾಕೋಣ" ಎಂದರು
Jul 19, 2019, 6:47 pm IST
"ಸಭಾನಾಯಕರು, ಶಾಸಕಾಂಗ ಪಕ್ಷದ ನಾಯಕರು, ಉಪ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. 7.30ರ ತನಕ ಕಲಾಪ ನಡೆಸಲು ನಾವು ಒಪ್ಪಿಗೆ ಕೊಡುತ್ತೇವೆ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Jul 19, 2019, 6:43 pm IST
"ಸದನದಲ್ಲಿ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಮಂಡಿಸಿದ್ದೇವೆ. ಸದನಕ್ಕೆ ಒಳಪಟ್ಟ ಯಾವುದೇ ವಿಷಯದಲ್ಲಿ ರಾಜ್ಯಪಾಲರಿಗೂ ಹಸ್ತಕ್ಷೇಪ ಮಾಡುವ ಅಧಿಕಾರವಿರುವುದಿಲ್ಲ. ಸಭಾಧ್ಯಕ್ಷರು ಸದನದ ಸರ್ವಾರ್ಧ್ಯಕ್ಷರು. ಅವರ ನಿರ್ಣಯವೇ ಅಂತಿಮ. ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಬಿಜೆಪಿ ಗೌರವ ನೀಡಬೇಕು" ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಟ್ವೀಟ್ ಮಾಡಿದ್ದಾರೆ.
Jul 19, 2019, 6:41 pm IST
"ನಮ್ಮ ಶಾಸಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದೆವು. ಶಾಸಕರು ಖುದ್ದಾಗಿ ಸಿಎಂಗೆ ಕರೆ ಮಾಡಿ ಮಾಹಿತಿ ನೀಡಿದರು. ಅದಕ್ಕಾಗಿ ನಾವು ತುರ್ತಾಗಿ ಮುಂಬೈಗೆ ಹೋದೆವು. ನಮ್ಮ ಶಾಸಕರಿಗೆ ರಕ್ಷಣೆ ಕೊಡುವ ಬಗ್ಗೆ ನಿರ್ಣಯಿಸಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
Jul 19, 2019, 6:29 pm IST
ಸದನದಲ್ಲಿ ಗದ್ದಲ, ಗಲಾಟೆ ಜೋರಾಗಿದೆ. ಬಿಜೆಪಿಯ ಮಾಧುಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಗದ್ದಲ ಉಂಟಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ ಎಲ್ಲರನ್ನೂ ಸಮಾಧಾನ ಮಾಡುತ್ತಿದ್ದಾರೆ.
Jul 19, 2019, 6:22 pm IST
ಸಂಜೆ 7.30ರ ತನಕ ಮಾತ್ರ ಕಲಾಪ ನಡೆಯಲಿದೆ. ಯಾರು ಮಾತನಾಡಬೇಕು ಎಂದು ತೀರ್ಮಾನಿಸಿ ಹೇಳಿ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
Jul 19, 2019, 6:11 pm IST
"ಬೇರೆ ಸದಸ್ಯರು ಮಾತನಾಡಲು ಅವಕಾಶ ಕೊಡಿ. ಅವರೆಲ್ಲರೂ ಮಾತನಾಡಿದ ಮೇಲೆ ನಾನು ಪುನಃ ಮೈತ್ರಿ ಸರ್ಕಾರದ ಕೆಲವು ಕಾರ್ಯಕ್ರಮಗಳ ಮೇಲೆ ಮಾತನಾಡಿ ಮತಕ್ಕೆ ಹಾಕುವ. ಸೋಮವಾರ ಅವಕಾಶ ಕೊಡಿ" ಎಂದು ಸಭಾನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
Jul 19, 2019, 6:09 pm IST
"ಇಂದೇ ಚರ್ಚೆಯನ್ನು ಮುಗಿಸೋಣ. ತಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಲು ಅವರು ಬಯಸಿದ್ದಾರೆ. ನಾವು ಇಂತಹ ಚರ್ಚೆಯನ್ನು ಎಂದೂ ನೋಡಿಲ್ಲ. ಮುಖ್ಯಮಂತ್ರಿಗಳಿಗಿಂತ ಹೆಚ್ಚು ಶಾಸಕರೇ ಮಾತನಾಡುತ್ತಿದ್ದಾರೆ. ಕಾಲಹರಣ ಮಾಡಲು ತೀರ್ಮಾನಿಸಿದ್ದಾರೆ" ಎಂದು ಬಿಜೆಪಿ ಶಾಸಕ ಜೆ.ಸಿ.ಮಾಧಸ್ವಾಮಿ ಹೇಳಿದರು.
Jul 19, 2019, 6:07 pm IST
ಸೋಮವಾರ ಪೂರ್ತಿ ಚರ್ಚೆ ನಡೆಯಲಿ. ಮಂಗಳವಾರ ಮತಕ್ಕೆ ಹಾಕಿ ಎಂದು ಕಾಂಗ್ರೆಸ್ ಶಾಸಕರ ಒತ್ತಾಯ. ಮಂಗಳವಾರದ ತನಕ ಇದನ್ನು ನಡೆಸಲು ಇಷ್ಟ ಪಡುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ.
Jul 19, 2019, 6:01 pm IST
ನಾವು ಹೊಸ ಸದಸ್ಯರು, ನಮಗೂ ದೇವಾಲಯದಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್, "ದೇವಾಲಯದಲ್ಲಿ ದುರಸ್ಥಿ ಕೆಲಸ ನಡೆಯುತ್ತಿದೆ. ಹೊಸಬರಿಗೆ ಗರ್ಭಗುಡಿಗೆ ಬರಲು ಬಳಿಕ ಅವಕಾಶ ನೀಡಲಾಗುತ್ತದೆ. ಭಕ್ತಾದಿಗಳು ಹೆಚ್ಚು ಜನರು ಇದ್ದಾರೆ. ದಯವಿಟ್ಟು ಸಹಕಾರ ನೀಡಬೇಕು" ಎಂದರು.
Jul 19, 2019, 5:58 pm IST
ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, "ವಿಶ್ವಾಸಮತದ ಏಲೆ ಚರ್ಚೆ ನಡೆಯಲಿ. ಇಷ್ಟು ಸಮಯದಲ್ಲೇ ಮುಗಿಸಬೇಕು ಎಂದು ಏನಿಲ್ಲ. ಇನ್ನೂ ಒಂದು ಗಂಟೆ ಚರ್ಚೆಗಳನ್ನು ಮುಂದುವರೆಸೋಣ" ಎಂದರು.
Jul 19, 2019, 5:58 pm IST
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, "ಈ ನಿರ್ಣಯದ ಬಗ್ಗೆ ಮಾತನಾಡಲು ಹಲವು ಸದಸ್ಯರು ಆಸಕ್ತಿ ತೋರಿದ್ದಾರೆ. ನಾವು ತರಾತುರಿ ಮಾಡುವುದು ಬೇಡ. ಶುಕ್ರವಾರ ಮಧ್ಯಾಹ್ನ ಸದನ ಮುಂದೂಡುವುದು ವಾಡಿಕೆ. ಇರುವಂತಹ ಸನ್ನಿವೇಶದಲ್ಲಿ ಶಿವಲಿಂಗೇಗೌಡರು ಮಾತನಾಡಲಿ" ಎಂದು ಹೇಳಿದರು.
Jul 19, 2019, 5:54 pm IST
ಕಲಾಪವನ್ನು ಸೋಮವಾರಕ್ಕೆ ಮುಂದೂಡಿ. ಒಂದು ವಾರ ಆಗಿದೆ ನಾವು ಊರು ಬಿಟ್ಟು. ಬರಗಾಲವಿದೆ, ಅಲ್ಲಿನ ಕೆಲಸಗಳನ್ನು ನೋಡಬೇಕು ಎಂದು ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಅವರಿಗೆ ಮನವಿ ಮಾಡಿದ ಶಾಸಕರು
Jul 19, 2019, 5:40 pm IST
"ಎಷ್ಟು ರಾಜ್ಯದಲ್ಲಿ ನಿಮ್ಮ ಅಧಿಕಾರವಿದೆ. ಇದೊಂದು ಇರ್ತಿತ್ತಪ್ಪ ಅದನ್ನು ಉರುಳಿಸಲು ಹೊರಟಿದ್ದೀರಿ. ಇದನ್ನು ಭಗವಂತ ಮೆಚ್ಚುತ್ತಾನೆಯೇ?. ಅದು ಶಾಸಕರನ್ನು ಹೊತ್ತುಕೊಂಡು ಬಾಂಬೆಗೆ ಕರೆದುಕೊಂಡು ಹೋಗಿ ಸರ್ಕಾರ ಮಾಡಲು ಹೊರಟಿದ್ದೀರಿ" ಎಂದು ಶಿವಲಿಂಗೇಗೌಡ ಹೇಳಿದರು.
Jul 19, 2019, 5:34 pm IST
ರಾಜ್ಯಪಾಲರು ನೀಡಿದ ಗಡುವಿಗೆ 30 ನಿಮಿಷಗಳು ಬಾಕಿ ಇದೆ. ವಿಶ್ವಾಸಮತದ ಮೇಲಿನ ಚರ್ಚೆ ಇನ್ನೂ ಪೂರ್ಣಗೊಂಡಿಲ್ಲ. ಸಂಜೆ 6 ಗಂಟೆಗೆ ವಿಶ್ವಾಸಮತ ಸಾಬೀತು ಮಾಡಲಾಗುತ್ತದೆಯೇ? ಕಾದು ನೋಡಬೇಕು.
Jul 19, 2019, 5:29 pm IST
ವಿಶ್ವಾಸಮತಯಾಚನೆ ಬಗ್ಗೆ ರಾಜ್ಯಪಾಲರು ನಿರ್ದೇಶನ ನೀಡುವಂತಿಲ್ಲ ಎಂದು ಜೆಡಿಎಸ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜೂನ್ 19ರ 1.30ರೊಳಗೆ ವಿಶ್ವಾಸಮತಯಾಚನೆ ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದರು.
Jul 19, 2019, 5:24 pm IST
ವಿಧಾನಸಭೆಯಲ್ಲಿ ಎಚ್. ಡಿ. ಕುಮಾರಸ್ವಾಮಿ, ಸಚಿವ ಡಿ. ಕೆ. ಶಿವಕುಮಾರ್ ಗಹನ ಚರ್ಚೆ. ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ತಂದುಕೊಟ್ಟು ಆಪ್ತ ಸಹಾಯಕ. ಶಿವಲಿಂಗೇಗೌಡ ಭಾಷಣದ ನಡುವೆಯೇ ಉಭಯ ನಾಯಕರ ಚರ್ಚೆ ಮುಂದುವರೆದಿದೆ.
Jul 19, 2019, 5:13 pm IST
"15 ಜನರನ್ನು ಕರೆದುಕೊಂಡು ಹೋಗಿದ್ರೆ ಸಾಕಿತ್ತಲ್ಲ. ಶಾಸಕ ಶ್ರೀಮಂತ ಪಾಟೀಲ್ ಪಾಪ ಅಜ್ಜ ಅದು ಹೆಂಗೆ ಹೊಡ್ಕೊಂಡು ಹೋದ್ರೋ ಏನೋ ಅದೇನೋ ಎದೆ ಬಸ್ಟ್ ಆಗಿ ಬಿಡ್ತಂತೆ. ಹೋಗಿ ಮುಂಬೈ ಆಸ್ಪತ್ರೆಗೆ ಆಡ್ಮಿಟ್ ಆಗಿದಾರೆ. ನಮ್ಮಲ್ಲಿ ಎಂತಹ ಆಸ್ಪತ್ರೆಗಳಿವೆ. ವಿದೇಶದವರೂ ಬಂದು ಚಿಕಿತ್ಸೆ ಪಡೆಯುತ್ತಾರೆ" ಎಂದು ಶಿವಲಿಂಗೇಗೌಡ ಹೇಳಿದರು.
Jul 19, 2019, 5:09 pm IST
ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲುತ್ತಿದೆ. "ಅರಸೀಕೆರೆಯಿಂದ ಹೊರಟಾಗ ಎಂ.ಟಿ.ಬಿ.ನಾಗರಾಜ್ ಸಂಧಾನ ಸಫಲ ಎಂಬ ಸುದ್ದಿ ಬಂತು. ದಾರಿಯಲ್ಲಿ ಗುಳ್ಳೇನರಿ ಎಡದಿಂದ ಬಲಕ್ಕೆ ಹೋಯಿತು. ಶಾಸಕ ಮಿತ್ರರಿಗೆ ಫೋನ್ ಮಾಡಿ ನರಿ ಎಡದಿಂದ ಬಲಕ್ಕೆ ಹೋಯಿತು ಕುಮಾರಣ್ಣ ಉಳಿದುಕೊಳ್ಳುತ್ತಾರೆ ಎಂದು ಹೇಳಿದೆ. ಅಷ್ಟರಲ್ಲೇ ಎಂ.ಟಿ.ಬಿ.ನಾಗರಾಜ್ ವಿಮಾನ ಹತ್ತಿದರು ಎಂದರು, ಹೆಂಗಾಯಿತು ನರಿ ಶಾಸ್ತ್ರ" ಎಂದರು.
READ MORE
8:25 AM, 19 Jul
ಶುಕ್ರವಾರ ಬಿಜೆಪಿಗೆ ಒಳ್ಳೆಯ ದಿನ, ಇಂದು ಸರ್ಕಾರದ ಅಂತ್ಯ ಆಗಲಿದೆ. ನಿನ್ನೆ ಕಾಂಗ್ರೆಸ್ ಸದಸ್ಯರು ಉದ್ದೇಶಪೂರ್ವಕವಾಗಿ ಒಂದು ದಿನ ವ್ಯರ್ಥ ಮಾಡಿದ್ದಾರೆ. ಆದರೆ ಸರ್ಕಾರ ಉರುಳಲಿದೆ. ರೈತರ ಸಾಲಮನ್ನಾ ಮಾಡುತ್ತೇವೆಂಬ ಸುಳ್ಳು ಭರವಸೆ ನೀಡುತ್ತೇವೆಂದ ಸುಳ್ಳು ಸರ್ಕಾರ ಇಂದು ಅಂತ್ಯವಾಗಲಿದೆ ಎಂದು ಯಡಿಯೂರಪ್ಪ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಹೇಳಿದರು.
8:27 AM, 19 Jul
ಸಿಎಂ ಕುಮಾರಸ್ವಾಮಿ ಅವರಿಗೆ ನಿನ್ನೆ ಪತ್ರ ಬರೆದಿರುವ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1:30 ರ ಒಳಗಾಗಿ ವಿಶ್ವಾಸಮತ ಪೂರ್ಣಗೊಳಿಸಬೇಕು ಎಂದು ಸೂಚಿಸಿರುವುದು ಬಹುವಾಗಿ ಮಹತ್ವ ಪಡೆದುಕೊಂಡಿದ್ದು. ಇಂದು ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುತ್ತಾರೆಯೋ ಅಥವಾ ನಿನ್ನೆಯಂತೆ ಇಂದೂ ಕಾಲಹರಣ ಮಾಡುತ್ತಾರೆಯೇ ಕಾದು ನೋಡಬೇಕಿದೆ.
9:05 AM, 19 Jul
ಜೆಪಿ ನಗರ ನಿವಾಸದಿಂದ ಹೊರಟ ಸಿಎಂ ಕುಮಾರಸ್ವಾಮಿ, ಪದ್ಮನಾಭನಗರದಲ್ಲಿನ ದೇವೇಗೌಡ ಅವರ ನಿವಾಸಕ್ಕೆ ತೆರಳಿದ್ದು, ದೇವೇಗೌಡ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
9:15 AM, 19 Jul
9:30 ಕ್ಕೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯನ್ನು ಯಡಿಯೂರಪ್ಪ ಅವರು ಕರೆದಿದ್ದು, ಕಲಾಪದಲ್ಲಿ ಇಂದಿನ ರಣತಂತ್ರದ ಬಗ್ಗೆ ಚರ್ಚೆ ನಡೆಯಲಿದೆ. ವಿಶ್ವಾಸಮತ ಯಾಚನೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿಯಲಿದ್ದಾರೆ ಎನ್ನಲಾಗಿದೆ.
9:18 AM, 19 Jul
ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಹಾಗೂ ಸರ್ಕಾರದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾಡಿದ್ದಾರೆ. ಮೈಸೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
9:38 AM, 19 Jul
ಎಚ್ಡಿ.ರೇವಣ್ಣ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಪತ್ರದ ಬಗ್ಗೆ ಸ್ಪೀಕರ್ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
10:05 AM, 19 Jul
ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ದೊಮ್ಮಲೂರಿನ ನಿವಾಸದಿಂದ ವಿಧಾನಸಭೆ ಕಡೆಗೆ ಹೊರಟಿದ್ದಾರೆ. ರಮೇಶ್ ಕುಮಾರ್ ಅವರಿಗೆ ಎದುರಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿಯೇ ಉತ್ತರ ನೀಡುತ್ತೇನೆ ಎಂದು ಹೇಳಿದರು.
10:09 AM, 19 Jul
ತಮ್ಮ ಅವರ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಾರಿರುವ ಬಗ್ಗೆ ಮಾತನಾಡಿರುವ ರಮೇಶ್ ಕುಮಾರ್ ಅವರು, ಅವರು ಮಹಿಳೆ, ಸಂಸದೆ, ಕೆಲವರು ಬೆಳೆದು ಬಂದ ಸಂಸ್ಕೃತಿಯಂತೆ ಅವರ ಭಾಷೆ ಇರುತ್ತದೆ. ಅವರಿಗೆ ನನಗೆ ಕಲಿಯಲಿಕ್ಕೆ ಏನೂ ಇಲ್ಲ, ನನಗೆ ಇನ್ನೂ ಉತ್ತಮ ಆದರ್ಶಗಳಿದ್ದಾರೆ ಎಂದು ಸೌಮ್ಯವಾಗಿಯೇ ಛಾಟಿ ಬೀಸಿದರು.
10:14 AM, 19 Jul
ರಾಜ್ಯಪಾಲರ ವಿಶ್ವಾಸ ಸೂಚನೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ಸಿದ್ಧತೆ.
10:32 AM, 19 Jul
ನನ್ನ ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ ಎಂದು ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ
10:38 AM, 19 Jul
ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ತಂಗಿರುವ ಮುಂಬೈ ಆಸ್ಪತ್ರೆಗೆ ಕರ್ನಾಟಕ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ದೂರು ನೀಡಿರುವ ಕಾರಣ ಪೊಲೀಸರು ಭೇಟಿ ನೀಡಿದ್ದು, ಶ್ರೀಮಂತ ಪಾಟೀಲ್ ಅವರ ವಿಚಾರಣೆ ನಡೆಸಲಿದ್ದಾರೆ.
10:39 AM, 19 Jul
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತ ಯಾಚಿಸಬೇಕು ಎಂದು ರಾಜ್ಯಪಾಲರು ನೀಡಿರುವ ಸೂಚನೆ ವಿರುದ್ಧವಾಗಿ ವಕೀಲ ರಾಜೀವ್ ಧವನ್ ಸುಪ್ರೀಂ ಮೆಟ್ಟಿಲೇರಲಿದ್ದಾರೆ.
10:46 AM, 19 Jul
32 ವರ್ಷಗಳಿಂದ ವಿಧಾನಸಭೆಯ ಕಲಾಪಗಳಲ್ಲಿ ಪಾಳ್ಗೊಳ್ಳುತ್ತಿದ್ದೇನೆ ಆದರೆ ಎಂದೂ ರಾಜ್ಯಪಾಲರು ವಿಧಾನಸಭೆಗೆ ಸಂದೇಶ ಕಳುಹಿಸಿದ್ದು ನಾನು ನೋಡಿಲ್ಲ ಎಂದು ಆರ್.ವಿ.ದೇಶಪಾಂಡೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು.
10:49 AM, 19 Jul
ಸಮ್ಮಿಶ್ರ ಸರ್ಕಾರ ಸಂಖ್ಯಾಬಲ ಕಳೆದುಕೊಂಡಿದೆ, ಹಾಗಾಗಿ ಸಮಯವನ್ನು ಕೊಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಅದರಲ್ಲಿ ಸಫಲವಾಗವುದಿಲ್ಲ. ಯಾವ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆಯೋ ಆ ರಾಜ್ಯಪಾಲರ ಸೂಚನೆಗೆ ಮನ್ನಣೆ ಕೊಡುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಸುರೇಶ್ ಕುಮಾರ್ ಹೇಳಿದರು.
ಸಿಎಂ ಅವರ ಅಧಿಕಾರ ವ್ಯಾಪ್ತಿಯಲ್ಲಿ ಹಾಗೂ ಸಚಿವ ಸಂಪುಟದ ವ್ಯಾಪ್ತಿಯೊಳಗೆ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಗಳು ಈ ಹಿಂದೆಯೇ ಬಂದಿವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಶ್ವಾಸಮತ ನಿರ್ಣಯ ಚರ್ಚೆಗೆ ಬಂದಿದೆ. ಚರ್ಚೆ ಆಗಲಿ ಆದರೆ ಅದಕ್ಕೆ ನಿಗದಿತ ಸಮಯ ವಿಧಿಸುವುದು ಬೇಡ ಎಂದು ಡಿಕೆಶಿ ಹೇಳಿದರು.
10:59 AM, 19 Jul
ಬಿಜೆಪಿ ಪಕ್ಷವೂ ಸಹ ಸುಪ್ರೀಂಕೋರ್ಟ್ ಮೊರೆ ಹೋಗಲು ನಿಶ್ಚಯಿಸಿದೆ. ವಿಶ್ವಾಸಮತ ಯಾಚನೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿ ಬಿಜೆಪಿಯು ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
11:00 AM, 19 Jul
ವಿಶ್ವಾಸಮತ ಕುರಿತಾದ ರಾಜ್ಯಪಾಲರ ನಿರ್ದೇಶನ ಪ್ರಶ್ನಿಸಿ ಮೈತ್ರಿ ಸರ್ಕಾರದ ಮುಖಂಡರು ಸುಪ್ರೀಂ ಮೆಟ್ಟಿಲೇರಿದ್ದಾರೆ. ಪ್ರತ್ಯೇಕ ಮೂರು ಅರ್ಜಿ ಸಲ್ಲಿಸಲಾಗಿದ್ದು, ವಿಪ್ ಜಾರಿ ಕುರಿತು ಸಿದ್ದರಾಮಯ್ಯ ಪರ ಅರ್ಜಿ, ರಾಜ್ಯಪಾಲರ ಆದೇಶ ಕ್ಕೆ ತಡೆ ಕೋರಿ ಮತ್ತೊಂದು ಅರ್ಜಿ, ಸ್ಪೀಕರ್ ಪರವಾಗಿ ಇನ್ನೊಂದು ಅರ್ಜಿ ಯನ್ನು ಹಾಕಲಾಗಿದೆ. ಹಿರಿಯ ವಕೀಲ ರಾಜೀವ್ ಧವನ್ ಅರ್ಜಿ ಅವರು ವಾದ ಮಂಡಿಸಲಿದ್ದಾರೆ.
11:03 AM, 19 Jul
ಅತೃಪ್ತ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜು ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋನಲ್ಲಿ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದ ವಿಷಯದ ಬಗ್ಗೆ ಮಾತನಾಡಿದ್ದಾರೆ.
11:07 AM, 19 Jul
ವಿಧಾನಸಭೆಯ ಕಲಾಪ ಆರಂಭವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ಸದನಕ್ಕೆ ಬಂದಿದ್ದಾರೆ, ಶಾಸಕರು ಒಬ್ಬೊಬ್ಬರಾಗಿ ಸದನಕ್ಕೆ ಆಗಮಿಸುತ್ತಿದ್ದಾರೆ.
11:09 AM, 19 Jul
ಸ್ಪೀಕರ್ ಅವರು ಮತದಾನಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಯಾರಾದರೂ ಮಾತನಾಡಿದರೆ ಅವರ ಬಗ್ಗೆ ಅನುಕಂಪ ಇಟ್ಟುಕೊಳ್ಳುತ್ತೇನೆ ಅಷ್ಟೆ, ಬೇರೆ ಯಾವ ವಿಷಯದ ಚರ್ಚೆಗೂ ಅವಕಾಶ ಇಲ್ಲ, ಸಭಾನಾಯಕರು (ಸಿಎಂ) ಅವರು ತಮ್ಮ ಮಾತು ಮುಂದುವರೆಸಬೇಕು ಎಂದು ರಮೇಶ್ ಕುಮಾರ್ ಅವರು ಸೂಚಿಸಿದರು.
11:11 AM, 19 Jul
ನನ್ನ ಚಾರಿತ್ರ್ಯ ವಧೆ ಮಾಡಬೇಕು ಎಂದು ಯೋಚಿಸುತ್ತಿರುವವರು ನಿಮ್ಮ ಹಿನ್ನೆಲೆ ನೋಡಿಕೊಳ್ಳಿ ಎಂದು ರಮೇಶ್ ಕುಮಾರ್ ಅವರು ಎಚ್ಚರಿಸಿದರು.
11:12 AM, 19 Jul
ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ನಿರ್ಣಯದ ಬಗ್ಗೆ ಮಾತು ಆರಂಭಿಸಿದರು. ಕುಮಾರಸ್ವಾಮಿ ಅವರು ಸುಧೀರ್ಘವಾಗಿ ಮಾತನಾಡುವ ಸೂಚನೆಯನ್ನು ಆರಂಭದಲ್ಲಿಯೇ ನೀಡಿದ್ದಾರೆ.
11:18 AM, 19 Jul
ತಾವು ವಿಧಾನಸಭೆಗೆ ಬಂದ ಮೊದಲ ಸಂದರ್ಭವನ್ನು ಸಿಎಂ ಕುಮಾರಸ್ವಾಮಿ ಅವರು ನೆನಪಿಸಿಕೊಂಡರು. 'ಇಷ್ಟು ವರ್ಷದಲ್ಲಿ ರಾಜ್ಯದ ರಾಜಕಾರಣದಲ್ಲಿ ಆದ ಬದಲಾವಣೆಗೆ ನಾನೂ ಅಲ್ಪ ಕಾರಣವೇ' ಎಂದು ಕುಮಾರಸ್ವಾಮಿ ಹೇಳಿದರು.
11:22 AM, 19 Jul
ಬೈಬಲ್ನ 'ಜಡ್ಜ್ಮೆಂಟ್ ಡೇ' ಚಾಪ್ಟರ್ ಉಲ್ಲೇಖಿಸಿದ ಕುಮಾರಸ್ವಾಮಿ, ನ್ಯಾಯ ನಿರ್ಣಯದ ಬಂದು ದೇವರ ಮುಂದೆ ನಿಂತಾಗ ಎಲ್ಲರೂ ಅವರ ಪಾಲಿನ ಲೆಕ್ಕವನ್ನು ಕೊಡಬೇಕು. ಆಗ ನಮ್ಮ ಪರ ವಾದಿಸಲು ಯಾರೂ ಇರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
11:23 AM, 19 Jul
ಯಡಿಯೂರಪ್ಪ ಅವರೇ ನನಗೆ ಅಂದು (2007) ರಲ್ಲಿ ಚೀಟಿ ಕಳುಹಿಸಿ ಭೇಟಿಗೆ ಕೋರಿದ್ದರು. ಅಂದು ಏನು ಚರ್ಚೆ ಆಯಿತು ಎಂದು ನಾನು ಹೇಳುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹಳೇಯ ದಿನಗಳನ್ನು ನೆನಪಿಸಿಕೊಂಡರು.
11:24 AM, 19 Jul
ಧರ್ಮಸಿಂಗ್ ಮತ್ತು ಸಿದ್ದರಾಮಯ್ಯ ಅವರ ಮೈತ್ರಿ ಸರ್ಕಾರದ ವಿರುದ್ಧ ದೇವೇಗೌಡ ಅವರು ಕಾಂಗ್ರೆಸ್ನ ಹೈಕಮಾಂಡ್ಗೆ ದೂರು ನೀಡಿ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗೋಣವೆಂದು ನಿರ್ಣಯಿಸಿದ್ದರು. ನಮ್ಮ ಬಳಿ ಹಣ ಇರಲಿಲ್ಲ, ಚುನಾವಣೆ ಎದುರಿಸಲು ಹಣವಿಲ್ಲ ಎಂದು ದೇವೇಗೌಡ ಅವರು ಹೇಳಿದ್ದರು: ಕುಮಾರಸ್ವಾಮಿ
11:26 AM, 19 Jul
ಸಿಎಂ ಉದಾಸಿ, ಗೋವಿಂದ ಕಾರಜೋಳ (ಈಗ ಬಿಜೆಪಿಯಲ್ಲಿದ್ದಾರೆ) ಅವರುಗಳು ನನ್ನನ್ನು ಭೇಟಿ ಮಾಡಿ, ಚುನಾವಣೆ ಬೇಡ ಎಂದು ಹೇಳಿದರು. ಆಗ ನಾನು ನಿರ್ಣಯಿಸಿದ ಪರಿಣಾಮವಾಗಿ ಅಂದು ಜೆಡಿಎಸ್-ಬಿಜೆಪಿ ಸರ್ಕಾರವಾಯಿತು, ಅದು ಕೇವಲ ನನ್ನೊಬ್ಬನ ಆಸೆ ಮಾತ್ರವೇ ಆಗಿರಲಿಲ್ಲ, ನನ್ನ ತಂದೆಯ ಆಸೆಗೆ ವಿರುದ್ಧವಾಗಿ ಅಂದು ನಾನು ನಿರ್ಣಯ ತೆಗೆದುಕೊಂಡೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
11:31 AM, 19 Jul
38 ಶಾಸಕರು ನನ್ನ ಜೊತೆ ಬಂದರು, ಬಿಜೆಪಿಯ 79 ಶಾಸಕರು ಸೇರಿ ರಾಜ್ಯದ ಮೊದಲ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಆಯಿತು. 20 ತಿಂಗಳು ಆಡಳಿತ ನಡೆಸಿದ ನಂತರ ಅಧಿಕಾರ ಹಸ್ತಾಂತರ ಮಾಡಲು ನಾನು ತಯಾರಾಗಿದ್ದೆ: ಕುಮಾರಸ್ವಾಮಿ
11:33 AM, 19 Jul
2008 ರಲ್ಲಿ ಬಿಜೆಪಿಯ 108 ಜನ ಗೆದ್ದರು, ಅದಕ್ಕೂ ಪಕ್ಷೇತರರು ಮತ್ತು ಕಾಂಗ್ರೆಸ್ನ ರೆಬಲ್ ಶಾಸಕರು ಸೇರಿಕೊಂಡು ಸರ್ಕಾರ ಮಾಡಿದರು. ಆದರೆ ಸರ್ಕಾರ ಆದ ಒಂದೇ ತಿಂಗಳಲ್ಲಿ ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಮತ್ತು ಇನ್ನೂ ಕೆಲವರು ನನ್ನ ಬಳಿ ಬಂದು ಕಾಂಗ್ರೆಸ್ ಜೊತೆ ಸರ್ಕಾರ ಮಾಡೋಣವೆಂದು ಕೇಳಿದರು ಆದರೆ ನಾನು ಅವರಿಗೆ ಪ್ರೋತ್ಸಾಹ ನೀಡಲಿಲ್ಲ: ಕುಮಾರಸ್ವಾಮಿ
11:35 AM, 19 Jul
14 ತಿಂಗಳಿನಿಂದಲೂ ಸರ್ಕಾರ ಅಭದ್ರವೆಂದು ಬಿಜೆಪಿ ಹೇಳುತ್ತಲೇ ಬಂದಿದ್ದೇವೆ. ಇವತ್ತು ಅಂತಿಮ ಹಂತಕ್ಕೆ ಬಂದಿದೆ. ಮೈತ್ರಿ ಸರ್ಕಾರದ ವಿಷಯದ ಬಗ್ಗೆ ಆ ನಂತರ ಬರುತ್ತೇನೆ: ಕುಮಾರಸ್ವಾಮಿ
Karnataka Assembly Floor Test Live Updates of Friday in Kannada. Congress-JDS members successfully wasted Thursday's time so Governor instructed to CM to prove majority on Friday before 1:30.