ಕರ್ನಾಟಕ ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಮೂರು ಸೂತ್ರ ಕಂಡುಕೊಂಡ ಕಾಂಗ್ರೆಸ್- ಏನವು ನೋಡಿ
ಬೆಂಗಳೂರು, ಡಿಸೆಂಬರ್ 05: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಸರತ್ತು ಶುರುವಾಗಿದೆ. ರಾಜ್ಯದಲ್ಲಿ ಪ್ರಮುಖವಾಗಿ ಮೂರು ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಲವು ಪ್ರಚಾರ ತಂತ್ರಗಳಿಗೆ ಮೊರೆಹೋಗಿವೆ. ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ, ಕಾಂಗ್ರೆಸ್‌ನಿಂದ ಪ್ರಜಾಧ್ವನಿ ಯಾತ್ರೆ ಹಾಗೂ ಜೆಡಿಎಸ್‌ನಿಂದ ಪಂಚರತ್ನ ಯಾತ್ರೆಗಳು ನಡೆಯುತ್ತಿವೆ.

ಜನವರಿ 11 ರಿಂದ ಆರಂಭವಾಗಲಿದೆ ಪ್ರಜಾಧ್ವನಿ ಯಾತ್ರೆ
ಕರ್ನಾಟಕದಲ್ಲಿ ಮತ್ತೊಂದು ಸಾರಿ ಅಧಿಕಾರ ಗದ್ದುಗೆ ಹಿಡಿಯಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 17 ದಿನಗಳ ಕಾಲ ನಡೆಯಿತು. ಈಗ ಮತ್ತೊಂದು ಯಾತ್ರೆಗೆ ಕಾಂಗ್ರೆಸ್ ಸಜ್ಜಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬಸ್ ಯಾತ್ರೆ ಕೈಗೊಳ್ಳಲಿದ್ದಾರೆ. ಜನವರಿ 11 ರಿಂದ 17ರ ವರೆಗೆ ಬಸ್ ಯಾತ್ರೆ ನಡೆಯಲಿದೆ. ಈ ಯಾತ್ರೆ ಮುಗಿಯುತ್ತಿದ್ದಂತೆ ಅಥವಾ ಮುಗಿಯುದರೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ಸಿದ್ದತೆ ನಡೆಸಿದ್ದಾರೆ. ಇದೇ ವೇಳೆ, ಪಟ್ಟಿಯನ್ನು ಅಂತಿಮಗೊಳಿಸಲು ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಮೇಲೆ ಒತ್ತಡಗಳು ಹೆಚ್ಚಾಗಿವೆ. ಹೀಗಾಗಿ, ಜನವರಿ ಕೊನೆಯಾಗುವುದರೊಳಗೆ ಕಾಂಗ್ರೆಸ್ ಪಕ್ಷದ ಸುಮಾರು 150 ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಮೂರು ಸೂತ್ರ
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಟಿಕೆಟ್ ಕೋರಿ ಪ್ರತಿ ಕ್ಷೇತ್ರದಲ್ಲಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಹಳಬರು ಹಾಗೂ ಹೊಸಬರು ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ನಾಯಕರು ದೊಡ್ಡ ಕಸರತ್ತನ್ನೇ ನಡೆಸುವ ಅನಿವಾರ್ಯತೆ ಬಂದೊಂದಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಮೂರು ಸೂತ್ರಗಳನ್ನು ಕಾಂಗ್ರೆಸ್ ಕಂಡುಕೊಂಡಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಈ ರೀತಿಯಾಗಿವೆ ಮೂರು ಸೂತ್ರಗಳು
ಮೊದಲ ಸೂತ್ರವೆಂದರೆ, ಈಗಿರುವ ಎಲ್ಲ ಹಾಲಿ ಶಾಸಕರು ಹಾಗೂ ಕಳೆದ ಬಾರಿಯ ಚುನಾವಣೆಯಲ್ಲಿ 5 ಸಾವಿರಕ್ಕೂ ಕಡಿಮೆ ಮತಗಳ ಅಂತರದಲ್ಲಿ ಸೋತವರಿಗೆ ಟಿಕೆಟ್ ನೀಡುವುದು.
ಎರಡನೇ ಸೂತ್ರವೆಂದರೆ, ಪಕ್ಷವು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಮತದಾರರ ಒಲವು ಗಳಿಸಿ ಜಯಸಾಧಿಸುವ ಅಭ್ಯರ್ಥಿಗಳೆಂದು ಗುರುತಿಸಿಕೊಂಡವರಿಗೆ ಟಿಕೆಟ್ ನೀಡುವುದು.
ಮೂರನೇ ಸೂತ್ರವೆಂದರೆ, ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯತೆ, ಸಾಮಾರ್ಥ್ಯ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವ ಛಾತಿ ಹೊಂದಿದವರಿಗೆ ಟಿಕೆಟ್ ನೀಡುವುದು.

ಅಭ್ಯರ್ಥಿಗಳ ಆಯ್ಕೆ ಬಳಿಕ ಬಂಡಾಯದ ಸಾಧ್ಯತೆ
ಈಗಾಗಲೇ ಒಂದು ಕ್ಷೇತ್ರದಲ್ಲಿ ಹಲವರು ಮುಖಂಡರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ಆಕಾಂಕ್ಷಿಗಳಲ್ಲಿ ಹೊಸಬರು ಹಾಗೂ ಹಳಬರು ಸೇರಿಕೊಂಡಿದ್ದಾರೆ. ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳು ಬಂಡಾಯ ಏಳುವ ಸಾಧ್ಯತೆಗಳೂ ಹೆಚ್ಚಿವೆ. ಹೊರನೋಟಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅನ್ಯೋನ್ಯವಾಗೇ ಕಾಣುತ್ತಾರೆ. ಆದರೆ, ಈ ಇಬ್ಬರು ನಾಯಕರ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ವೈಮನಸ್ಸಿದೆ ಎಂಬ ಮಾತುಗಳು ಈಗಾಗಲೇ ಕೇಳಿಬಂದಿವೆ. ಈ ಇಬ್ಬರು ನಾಯಕರಿಗೆ ತಮ್ಮದೇ ಆದ ಬೆಂಬಲಿಗರು ಹಾಗೂ ಹಿಂಬಾಲಕರಿದ್ದಾರೆ. ಈ ಎರಡೂ ಬಣಗಳ ನಡುವೆ ಪೈಪೋಟಿ ಇರುವುದಂತೂ ಹೌದು. ಇನ್ನು ಕೆಲ ಕ್ಷೇತ್ರಗಳಲ್ಲಿ ಹಳೆಯ ನಾಯಕರು ಹಾಗೂ ಹೊಸಬರ ನಡುವೆ ನಡುವೆ ಸಂಘರ್ಷ ಏರ್ಪಟ್ಟಿದೆ. ಪಕ್ಷದ ಆಂತರಿಕ ಬೆಳವಣಿಗೆಗಳನ್ನು ನೋಡುವುದಾದರೆ, ಕೆಲ ಹೊಸಬರಿಗೆ ಕೈ ನಾಯಕರು ಮಣೆ ಹಾಕಲಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಉಂಟು ಮಾಡುವ ಸಾಧ್ಯತೆ ಇದೆ.












Click it and Unblock the Notifications