ಮಾದರಿ ನೀತಿ ಸಂಹಿತೆ; ವಾಹನ ಮಾಲೀಕರಿಗೆ ಖಡಕ್ ಸೂಚನೆ
ಬೆಂಗಳೂರು, ಏಪ್ರಿಲ್ 09; ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರಿಗೆ ಸೂಚನೆಗಳನ್ನು ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆಟೋರಿಕ್ಷಾ, ಟ್ಯಾಕ್ಸಿ, ಬಸ್ ಹಾಗೂ ಇತರೆ ಯಾವುದೇ ವಾಹನಗಳ ಮೇಲೆ, ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಅಥವಾ ಪಕ್ಷಗಳನ್ನು ಬಿಂಬಿಸುವ ಬ್ಯಾನರ್ಸ್, ಭಿತ್ತಿಪತ್ರಗಳು ಹಾಗೂ ಇತರೇ ಚಿತ್ರಗಳನ್ನು ಪೂರ್ವಾನುಮತಿ ಇಲ್ಲದೆ ಪ್ರದರ್ಶಿಸುವಂತಿಲ್ಲ ಹಾಗೂ ಪ್ರದರ್ಶನದ ಬ್ಯಾನರ್ಸ್/ ಕಟೌಟ್ಸ್ ಇತರೆ ಚಿತ್ರಗಳನ್ನು 24 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.
ಯಾವುದೇ ವಾಹನಗಳ ಮಾಲೀಕರು ಬ್ಯಾನರ್ ಮುಂತಾದವುಗಳನ್ನು ತೆರವುಗೊಳಿಸದಿದ್ದಲ್ಲಿ ಅಂತಹ ವಾಹನಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.
ಅನುಮತಿ ಪಡೆಯುವುದು ಕಡ್ಡಾಯ; ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ವಾಹನ ಪರವಾನಿಗೆ ಹಾಗೂ ಕಾರ್ಯಕ್ರಮ ಆಯೋಜನೆಗೆ ಪರವಾನಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ ಸುವಿಧಾ ಪೋರ್ಟಲ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. 24 ಗಂಟೆಗಳ ಪೂರ್ವದಲ್ಲಿ ಮನವಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಾಗಿದೆ. ಇದೇ ರೀತಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಹೀರಾತು ಪ್ರಸಾರ ಮಾಡುವ ಪೂರ್ವದಲ್ಲಿಯೂ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಜಾಹೀರಾತುಗಳ ಮೇಲೆ ಕಣ್ಗಾವಲು ಇಡಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ನಿಗದಿಪಡಿಸಲಾದ ಜಾಹೀರಾತು ದರ ಅಥವಾ ಆಯಾ ಮಾಧ್ಯಮಗಳ ವಾಸ್ತವಿಕ ವಾಣಿಜ್ಯ ಜಾಹೀರಾತು ದರ ಪರಿಗಣಿಸಿ ಅದರ ಮೊತ್ತವನ್ನು ಪಕ್ಷ ಅಥವಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಸೂಚನೆ ನೀಡಲಾಗಿದೆ.
ಅಭ್ಯರ್ಥಿಯ ಅಥವಾ ಪಕ್ಷದ ಒಪ್ಪಿಗೆಯಿಂದ ನೀಡಲಾಗಿರುವ ಜಾಹೀರಾತುಗಳ ವೆಚ್ಚವನ್ನು ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಗಳ ಒಪ್ಪಿಗೆ ಇಲ್ಲದೇ ಚುನಾವಣಾ ಜಾಹೀರಾತು ನೀಡುವ ಮೂರನೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ.
ಚುನಾವಣೆ ಸಂಬಂಧ ಸಂಭಾವ್ಯ ಅಭ್ಯರ್ಥಿಗಳು, ಅಭ್ಯರ್ಥಿಗಳು ಅಥವಾ ಸ್ವತಂತ್ರ ಸ್ಪರ್ಧಿಗಳು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯ ಆಧಾರಿತ ಜಾಹೀರಾತು ಪ್ರಕಟಿಸುವವರು ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ (ಎಂಸಿಎಂಸಿ) ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಚಿಹ್ನೆ ಬಳಸಿ ಜಾಹೀರಾತು ಪ್ರಚಾರ ಮಾಡಬೇಕಾದರೆ ಪೂರ್ವ ಅನುಮತಿ ಪಡೆಯಬೇಕಿದೆ. ಇದು ಸಾಮಾಜಿಕ ಮಾಧ್ಯಮಗಳಿಗೂ ಅನ್ವಯವಾಗಲಿದೆ.
ಬೆಂಗಳೂರು ನಗರದಲ್ಲಿ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಆಟೋಗಳ ತಪಾಸಣೆ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಬ್ಯಾನರ್ ಇದ್ದರೆ ಅವುಗಳನ್ನು ತೆರವುಗೊಳಿಸುತ್ತಿದ್ದಾರೆ ಮತ್ತು ಆಟೋ ಚಾಲಕರಿಗೆ ದಂಡವನ್ನು ವಿಧಿಸುತ್ತಿದ್ದಾರೆ. ಈ ಕಾರ್ಯಾಚರಣೆಗೆ ಆಟೋ ಚಾಲಕರುವ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ನಾಯಕರ ಫೆಕ್ಸ್ ನೀತಿ ಸಂಹಿತೆ ಜಾರಿಗೆ ಬಂದಾಗ ತೆರವುಗೊಳಿಸಿ ಎಂದು ನಮಗೆ ಹೇಳಿಲ್ಲ. ಈಗ ಪೊಲೀಸರು ನಮಗೆ ದಂಡ ವಿಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications