ವರುಣಾ ಜೊತೆಗೆ ಕೋಲಾರ ಕ್ಷೇತ್ರವನ್ನು ಕೇಳಿದ್ದೇನೆ: ಎರಡು ಕ್ಷೇತ್ರದ ಸ್ಪರ್ಧೆ ಹಿಂದಿದ್ಯಾ ಸಿದ್ದರಾಮಯ್ಯ ಲೆಕ್ಕಾಚಾರ?
ಬೆಂಗಳೂರು, ಮಾರ್ಚ್ 25: 2023 ರ ವಿಧಾನಸಭಾ ಚುನಾವಣೆ ರಣಕಣ ಜೋರಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಇನ್ನೂ 124 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
ಇನ್ನೂ ಸಾಕಷ್ಟು ಕುತೂಹಲಕ್ಕೆ ಹಾಗೂ ಗೊಂದಲಕ್ಕೆ ಕಾರಣವಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಾರೆ ಎಂದು. ಈಗಾಗಲೇ ಹೈಕಮಾಂಡ್ ನಾಯಕರ ಜೊತೆ ಸಿದ್ದರಾಮಯ್ಯ ಕ್ಷೇತ್ರ ಕುರಿತು ಚರ್ಚೆ ನಡೆಸಿದ್ದು, ಹೈಕಮಾಂಡ್ ಕಾಂಗ್ರೆಸ್ ನ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.

ಈ ಕುರಿತು ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಸಿದ್ದರಾಮಯ್ಯ ಮಾತನಾಡಿ, ನಾನು ಕೋಲಾರ ಮತ್ತು ವರುಣಾದಲ್ಲಿ ನಿಂತುಕೊಳ್ಳುತ್ತೇನೆ ಎಂದಿದ್ದೆ. ಆದರೆ ಹೈಕಮಾಂಡ್ ವರುಣಾದಲ್ಲಿ ನಿಲ್ಲಿ ಎಂದಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ಕೋಲಾರ ಕ್ಷೇತ್ರವನ್ನ ಕೇಳಿದ್ದೇನೆ, ಅವರು ಒಪ್ಪಿದರೆ ಎರಡೂ ಕಡೆಗಳಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಸೂಚನೆ ಬೆನ್ನಲ್ಲೇ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ರು, ಸಹ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಸೆ ಮಾತ್ರ ಕಡಿಮೆ ಆಗಿಲ್ಲ. ಈಗಾಗಾಲೇ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ವಿರುದ್ದ ಬಿಜೆಪಿ ನಾಯಕರು ಸಾಕಷ್ಟು ಟೀಕೆ ಟಿಪ್ಪಣಿಗಳನ್ನ ನಡೆಸಿದರು. ಇದೀಗ ಕೋಲಾರ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಹೈಕಮಾಂಡ್ ಘೋಷಣೆ ಮಾಡದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೆ ರೆಡಿಯಾಗಿದ್ದ ಸಿದ್ದರಾಮಯ್ಯ ಗೆ ವರುಣಾ ಕ್ಷೇತ್ರ ಸೇಫ್ ಎಂದು ಹೈಕಮಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ಇದೀಗ ಕೋಲಾರ ಕ್ಷೇತ್ರದಿಂದಲೂ ಸ್ಪರ್ಧೆ ನಡೆಸಲು ಸಿದ್ದರಾಮಯ್ಯ ಹೈಕಮಾಂಡ್ ನಾಯಕರಿಗೆ ಟಿಕೆಟ್ ಕೇಳಿದ್ದಾರೆ. ಈಗಾಗಲೇ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ನಡೆಸಲ್ಲ ಎಂಬ ಸುದ್ದಿಯಿಂದಾಗಿ ಕೋಲಾರ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿಯಲು ಹೈಕಮಾಂಡ್ ಮುಂದೆ ಟಿಕೆಟ್ ಗಾಗಿ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಈಗಾಗಲೇ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದ್ದು, ಸಿದ್ದರಾಮಯ್ಯ ಅವರ ಬೇಡಿಕೆಯಂತೆ ವರುಣಾ ಜೊತೆಗೆ ಕೋಲಾರ ಕ್ಷೇತ್ರದಿಂದ ಹೈಕಮಾಂಡ್ ಟಿಕೆಟ್ ನೀಡುವುದು ಎಂದು ಹೇಳಲಾಗಿದ್ದು, ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಟಿಕೆಟ್ ಬಿಡುಗಡೆಯಾಗಲಿದೆ.
ಸಿದ್ದರಾಮಯ್ಯ ಗೆಲುವಿಗಾಗಿ ಸುರಕ್ಷಿತವಾದ ಕ್ಷೇತ್ರವನ್ನ ನೋಡಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದ್ದು, ಇನ್ನೊಂದು ಕಡೆ ಪುತ್ರನ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡ ಸಿದ್ದರಾಮಯ್ಯ ಕೋಲಾರದಿಂದಲೂ ಟಿಕೆಟ್ ಕೇಳಿದ್ದಾರೆ. ಕೊನೆ ಕಣದಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದರೇ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕಾರಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತಮ್ಮ ಆಕಾಂಕ್ಷೆಯ ಬಗ್ಗೆ ಹೈಕಮಾಂಡ್‌ಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.
ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದಾಗ ಒಂದು ವೇಳೆ ಎರಡು ಕ್ಷೇತ್ರಗಳಲ್ಲೂ ಗೆದ್ದರೆ ಆಗ ವರುಣಾ ಕ್ಷೇತ್ರವನ್ನು ಮತ್ತೆ ಡಾ.ಯತೀಂದ್ರಗೆ ಬಿಟ್ಟುಕೊಡುವ ಚಿಂತನೆಯನ್ನ ಸಿದ್ದರಾಮಯ್ಯ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಕೋಲಾರದಲ್ಲಿ ಸ್ಪರ್ಧೆ ಮಾಡದೇ ಇದ್ದಲ್ಲಿ ಸಾಕಷ್ಟು ವಿರೋಧಗಳು ಕೇಳಿ ಬರುತ್ತವೆ ಅದೇ ಅಲ್ಲದೇ ಅಲ್ಲಿ ಬೇರೆ ಅಭ್ಯರ್ಥಿಯನ್ನ ಕಣಕ್ಕಿಳಿಸಿದರು ಗೆಲುವು ಮಾತ್ರ ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿಕೊಂಡು ಕೋಲಾರದಿಂದ ಕಣಕ್ಕಿಳಿಯಲು ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ.
ಇನ್ನೂ ಮೊದಲ ಪಟ್ಟಿ ಬಿಡುಗಡೆ ಕುರಿತು ಸಿದ್ದರಾಮಯ್ಯ ಮಾತನಾಡಿ, ಮೊದಲನೇ ಪಟ್ಟಿ ಬಿಡುಗಡೆ ಆಗಿದೆ. ಯಾವುದೇ ಗೊಂದಲವಿಲ್ಲದ ಕ್ಷೇತ್ರಗಳನ್ನು ಹೈಕಮಾಂಡ್ ಅವರು ಒಪ್ಪಿ ಬಿಡುಗಡೆ ಮಾಡಿದ್ದಾರೆ. ಯಾಕೆಂದರೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಮೀಟಿಂಗ್ ಆಗಿತ್ತು. ಅಲ್ಲದೇ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಕೂಡಾ ನಡೆದಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ಏನು ಚರ್ಚೆಗಳಾಗಿದ್ದವೋ ಅದು ಸೆಂಟ್ರಲ್ ಕಮಿಟಿಯಲ್ಲಿ ಚರ್ಚೆಯಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಗೊಂದಲಗಳಿಲ್ಲದೆ ಪಟ್ಟಿ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications