ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಇನ್ನೆರಡು 'ಗ್ಯಾರಂಟಿ': ಈ ಬಾರಿ ರೈತರು, ಯುವಕರೇ ಟಾರ್ಗೆಟ್- ಇಲ್ಲಿದೆ ಇನ್‌ಸೈಡ್ ರಿಪೋರ್ಟ್
ಕಾಂಗ್ರೆಸ್ ಪಕ್ಷವು ಮೂರು ಪ್ರಮುಖ ಭರವಸೆಗಳನ್ನು ಘೋಷಣೆ ಮಾಡಿದೆ. ಇನ್ನೆರಡು ಗ್ಯಾರಂಟಿಗಳನ್ನು ಘೋಷಿಸಲು 'ಕೈ' ನಾಯಕರು ಚಿಂತನೆ ನಡೆಸಿದ್ದಾರೆ. ಈ ಬಾರಿ ರೈತರು ಹಾಗೂ ಯುವಕರೇ ಕಾಂಗ್ರೆಸ್‌ನ ಟಾರ್ಗೆಟ್ ಆಗಿದ್ದಾರೆ.
ಬೆಂಗಳೂರು, ಮಾರ್ಚ್ 02: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕೆಂದು ಕಾಂಗ್ರೆಸ್ ಯತ್ನಿಸುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ಪಕ್ಷವು ಮೂರು ಪ್ರಮುಖ ಭರವಸೆಗಳನ್ನು ಘೋಷಣೆ ಮಾಡಿದೆ. ಇನ್ನೆರಡು ಗ್ಯಾರಂಟಿಗಳನ್ನು ಘೋಷಿಸಲು 'ಕೈ' ನಾಯಕರು ಚಿಂತನೆ ನಡೆಸಿದ್ದಾರೆ. ರೈತರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಎರಡೂ ಗ್ಯಾರಂಟಿಗಳನ್ನು ರೂಪಿಸಲು ಕರ್ನಾಟಕ ಕಾಂಗ್ರೆಸ್ ಘಟಕವು ಮುಂದಾಗಿದೆ.

ಈಗಾಗಲೇ ಮೂರು ಗ್ಯಾರಂಟಿಗಳ ಘೋಷಣೆ
ಕಾಂಗ್ರೆಸ್ ಈಗಾಗಲೇ ಮೂರು ಚುನಾವಣಾ 'ಭರವಸೆ'ಗಳನ್ನು ಘೋಷಿಸಿದೆ. ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2,000 ರೂ ನೀಡುವ ಗೃಹ ಲಕ್ಷ್ಮಿ ಯೋಜನೆ ಹಾಗೂ ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ ಅಕ್ಕಿ ವಿತರಿಸುವ ಅನ್ನ ಭಾಗ್ಯ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಘೋಷಿಸಿದೆ.

ರಾಜ್ಯದ ಬೊಕ್ಕಸದ ಮೇಲೆ ಹೊರೆ
ಕಾಂಗ್ರೆಸ್ ಪಕ್ಷವು ನಿಜವಾಗಿಯೂ ಅಧಿಕಾರಕ್ಕೆ ಬಂದರೆ ಘೋಷಿಸಿದ ‘ಗ್ಯಾರಂಟಿ'ಗಳು ರಾಜ್ಯದ ಬೊಕ್ಕಸದ ಮೇಲೆ ಹೊರೆಯಾಗಲಿವೆ. ಈ ಆರ್ಥಿಕ ಹೊರೆಯ ಬಗ್ಗೆ ಕಾಂಗ್ರೆಸ್ ನಾಯಕರ ಒಂದು ವರ್ಗವು ಈಗಾಗಲೇ ಚಿಂತನೆ ನಡೆಸುತ್ತಿದೆ. ಮೂಲಗಳ ಪ್ರಕಾರ ರೈತರು, ಯುವಕರು ಅಥವಾ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಇನ್ನೆರಡು ‘ಖಾತರಿ'ಗಳನ್ನು ಯೋಜಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಪಕ್ಷದ ಸಲಹೆಗಾರರು ಇವುಗಳ ಸಾಧಕ-ಬಾಧಕಗಳನ್ನು ಅಳೆಯುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದ್ದೇನು?
ಈ ವಿಚಾರವಾಗಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ಮಾತನಾಡಿದ್ದಾರೆ. 'ಈಗಾಗಲೇ ಘೋಷಿಸಿರುವ ‘ಗ್ಯಾರಂಟಿ'ಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವನ್ನು ಹೆಚ್ಚಿಸುತ್ತಿವೆ. ನಮ್ಮ ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಕಾರ್ಡ್‌ಗಳೊಂದಿಗೆ ಮನೆ-ಮನೆಗೆ ಹೋಗುತ್ತಿದ್ದಾರೆ. ಪ್ರತಿ ಊರು-ಕೇರಿಗಳಲ್ಲಿ ನಮಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ನಮ್ಮ ಘೋಷಣೆಗಳ ಕುರಿತು ಮತದಾರರು ಸಂತಸಗೊಂಡಿರುವಂತೆ ಕಾಣುತ್ತಿದೆ. ಅಲ್ಲದೆ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಜನರಿಗೆ ಕೋಪವಿರುವುದು ನಮಗೆ ಸಹಾಯ ಮಾಡುತ್ತದೆ' ಎಂದು ಅವರು ಹೇಳಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯಿಂದ 1.5 ಕೋಟಿ ಮಹಿಳೆಯರಿಗೆ ಅನುಕೂಲ
ಗೃಹ ಲಕ್ಷ್ಮಿ ಯೋಜನೆಯಿಂದ ಕರ್ನಾಟಕದ 1.5 ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಯೋಜನೆಗೆ ಒಂದು ವರ್ಷಕ್ಕೆ ಸರಿಸುಮಾರು 36,000 ಕೋಟಿ ರೂ. ಬೇಕಾಗುತ್ತದೆ. ಗೃಹ ಜ್ಯೋತಿ ಯೋಜನೆಗೆ ಅಂದಾಜು 9,000 ಕೋಟಿ ರೂ. ಬೇಕಾಗುತ್ತದೆ. ಅನ್ನಭಾಗ್ಯ ಯೋಜನೆಗೆ 10,000 ಕೋಟಿ ರೂ. ಬೇಕಾಗುತ್ತದೆ. ಹಾಗಾಗಿ ಮೂರು ಭರವಸೆಗಳನ್ನು ಜಾರಿಗೆ ತರಲು ಒಂದು ವರ್ಷಕ್ಕೆ 55,000 ಕೋಟಿ ರೂ. ಬೇಕಾಗುತ್ತದೆ.

ಆರ್ಥಿಕ ಹೊರೆಯ ಬಗ್ಗೆ ಚಿಂತೆ
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು, 'ನಮ್ಮ ಭರವಸೆಗಳ ಆರ್ಥಿಕ ಹೊರೆಯ ಬಗ್ಗೆ ಚಿಂತೆ ಇದೆ. ನಾವು ನಮ್ಮ ಕೆಲವು ಭರವಸೆಗಳನ್ನು 'ಗ್ಯಾರಂಟಿ' ಎಂದು ಬಿಂಬಿಸುತ್ತಿರುವ ಕಾರಣ, ನಾವು ಅವುಗಳನ್ನು ಪೂರೈಸಲೇಬೇಕಿರುವ ಅನಿವಾರ್ಯತೆ ಇದೆ' ಎಂದು ತಿಳಿಸಿದ್ದಾರೆ. ಅಲ್ಲದೆ, ಪಕ್ಷವು 'ಗ್ಯಾರಂಟಿ' ಎಂದು ಬ್ರಾಂಡ್ ಮಾಡಲು ಸರಿಯಾದ ಚುನಾವಣಾ ಭರವಸೆಯ ಆಯ್ಕೆಯೇ ನಮಗೆ ಕಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿದ್ದು, ಡಿಕೆಶಿ ಸಹಿ ಇರುವ ಗ್ಯಾರಂಟಿ ಕಾರ್ಡ್
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹಿ ಇರುವ ಗ್ಯಾರಂಟಿ ಕಾರ್ಡ್ ಅನ್ನು ಕಾಂಗ್ರೆಸ್ ಮತದಾರರಿಗೆ ನೀಡುತ್ತಿದೆ. ಭಾರತದ ಒಂದು ದೊಡ್ಡ ರಾಜ್ಯವಾಗಿ, ಕರ್ನಾಟಕವು ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಹಣಕಾಸಿನ ನಿರ್ಬಂಧಗಳಿಗೆ ಒಳಗಾಗಿದೆ. ಸಂಬಳ, ಪಿಂಚಣಿ, ಸಬ್ಸಿಡಿಗಳ ಸೇರಿದಂತೆ ಇತ್ಯಾಗಳಿಗೆ ವೆಚ್ಚಗಳು ಹೆಚ್ಚುತ್ತಿವೆ.

ಅಭಿವೃದ್ಧಿ, ಕಲ್ಯಾಣ ಕಾರ್ಯಗಳ ಮೇಲೆ ಹೊಡೆತ
2023-24 ರ ಆರ್ಥಿಕ ವರ್ಷದ, ಬದ್ಧ ವೆಚ್ಚವನ್ನು 2.06 ಲಕ್ಷ ಕೋಟಿ ರೂ ಆಗುತ್ತದೆಂದು ಅಂದಾಜಿಸಲಾಗಿದೆ. ಇದು ರಾಜ್ಯದ ಆದಾಯದ ಶೇ 91.3 ಆಗಿದೆ. 2016-17ರಲ್ಲಿ ಬದ್ದ ವೆಚ್ಚವು ಶೇ.79ರಷ್ಟಿತ್ತು. ಬದ್ಧ ವೆಚ್ಚಗಳ ಮೇಲೆ ವಿಪರೀತವಾಗಿ ವ್ಯಯವಾಗುತ್ತಿರುವುದರಿಂದ ರಾಜ್ಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗೆ ವ್ಯಯಿಸುವುದನ್ನು ಮಿತಿಗೊಳಿಸಬೇಕಾಗುತ್ತದೆ.












Click it and Unblock the Notifications