ಕಾಂಗ್ರೆಸ್‌ನ 50ಕ್ಕೂ ಹೆಚ್ಚು ಲಿಂಗಾಯತ ನಾಯಕರ ತಡ ರಾತ್ರಿ ಸಭೆ: ಸಿಎಂ ಸ್ಥಾನ, 75 ಕ್ಷೇತ್ರಗಳ ಟಿಕೆಟ್ ಬೇಡಿಕೆ- Inside Report
ಭಾನುವಾರ (Feb 12) ತಡರಾತ್ರಿವರೆಗೂ ಕಾಂಗ್ರೆಸ್ 50ಕ್ಕೂ ಹೆಚ್ಚು ಲಿಂಗಾಯತ ನಾಯಕರು ಬೆಂಗಳೂರಿನ ಬಸವ ಭವನದಲ್ಲಿ ಸಭೆ ನಡೆಸಿದ್ದಾರೆ. ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದವರು ಯಾರು? ಈ ವರದಿ ಓದಿ
ಬೆಂಗಳೂರು, ಫೆಬ್ರವರಿ 14: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ತೀವ್ರ ಪೈಪೋಟಿ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಕುರಿತು ಕಾಂಗ್ರೆಸ್ ನಾಯಕರಷ್ಟೇ ಅಲ್ಲದೇ, ಬಿಜೆಪಿ ನಾಯಕರೂ ಸಹ ಮಾತನಾಡಿದ್ದಾರೆ. ಈಗ ಕರ್ನಾಟಕ ಕಾಂಗ್ರೆಸ್ ಮತ್ತೊಂದು ಸಂಕಷ್ಟ ಎದುರಾಗಿದೆ. ವೀರಶೈವ- ಲಿಂಗಾಯರ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆನ್ನುವ ಕೂಗು ಜೋರಾಗಿ ಕೇಳಿಬಂದಿವೆ.
ಇದೇ ಕಾರಣಕ್ಕೆ ನಿನ್ನೆ (ಭಾನುವಾರ) ತಡರಾತ್ರಿವರೆಗೂ ಕಾಂಗ್ರೆಸ್ 50ಕ್ಕೂ ಹೆಚ್ಚು ಲಿಂಗಾಯತ ನಾಯಕರು ಬೆಂಗಳೂರಿನ ಬಸವ ಭವನದಲ್ಲಿ ಸಭೆ ನಡೆಸಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರ ವಾದವಾಗಿದೆ.

ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಸಭೆ
ಬೆಂಗಳೂರಿನ ಬಸವ ಸಮಿತಿಯ ಸಭಾಂಗಣದಲ್ಲಿ ನಿನ್ನೆ ರಾತ್ರಿ ಮಹತ್ವದ ನಡೆದಿರುವ ಸಭೆಯೊಂದು ನಡೆದಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಲಿಂಗಾಯತ ಸಿಎಂ ಬೇಡಿಕೆ ಇಡುವಂತೆ ಚರ್ಚೆ ನಡೆದಿದೆ.
ಕಾಂಗ್ರೆಸ್‌ನಲ್ಲಿ ವೀರೇಂದ್ರ ಪಾಟೀಲ ಅವರ ಬಳಿಕ ಲಿಂಗಾಯತ ಸಮುದಾಯದ ಯಾವುದೇ ನಾಯಕರಿಗೆ ಸಿಎಂ ಪಟ್ಟ ಸಿಕ್ಕಿಲ್ಲ. ಇನ್ನು ಎಷ್ಟು ವರ್ಷಗಳ ಕಾಲ ಲಿಂಗಾಯತ ಸಮುದಾಯದ ನಾಯಕರು ಸಿಎಂ ಪಟ್ಟದಿಂದ ದೂರ ಇರಬೇಕು?' ಎಂಬ ಪ್ರಶ್ನೆ ಕೇಳಲಾಗಿದೆ.

ಲಿಂಗಾಯತ ಸಿಎಂ ಬೇಡಿಕೆ
ಕಾಂಗ್ರೆಸ್ ಹೈಕಮಾಂಡ್ ಎದುರು ಈ ತಕ್ಷಣವೇ ಲಿಂಗಾಯತ ಸಿಎಂ ಬೇಡಿಕೆ ಇಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಟಿಕೆಟ್ ಆಕಾಂಕ್ಷಿಗಳು, ಸಮುದಾಯದ ನಾಯಕರು ಆಗ್ರಹಿಸಿದ್ದಾರೆ. ಜೊತೆಗೆ ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದ 210 ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ಅದರಲ್ಲಿ ಸುಮಾರು 73 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಜಯಗಳಿಸುವ ಸಾಮರ್ಥ್ಯ ಹೊಂದಿದ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಲೇಬೇಕು. ಲಿಂಗಾಯತ ಸಮುದಾಯದ ಒಳಪಂಗಡಗಳನ್ನೂ ಒಟ್ಟಿಗೆ ಸೇರಿಸಿ ಕಾಂಗ್ರೆಸ್‌ಗೆ ಬೆಂಬಲ ಕೊಡಿಸಲು ಪ್ರಯತ್ನ ಮಾಡಬೇಕು.
ಎಲ್ಲಾ ಲಿಂಗಾಯತ, ವೀರಶೈವ ಹಿರಿಯ ಮುಖಂಡರು ಶೀಘ್ರದಲ್ಲೇ ಪಟ್ಟಿ ತಯಾರಿಸಬೇಕು. ಈ ಬಗ್ಗೆ ಹೈಕಮಾಂಡ್ ಹಾಗೂ ಉಸ್ತುವಾರಿಗಳ ಗಮನ ಸೆಳೆಯಬೇಕು ಎಂದು ಒತ್ತಾಯಿಸಲಾಗಿದೆ.

ಎಐಸಿಸಿಯಲ್ಲೂ ಉತ್ತಮ ಸ್ಥಾನಮಾನಕ್ಕೆ ಒತ್ತಾಯ
ಕರ್ನಾಟಕದ ಲಿಂಗಾಯತ ಸಮುದಾಯದ ನಾಯಕರಿಗೆ ಎಐಸಿಸಿಯಲ್ಲಿಯೂ ಉತ್ತಮ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ 50ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
ಎಐಸಿಸಿ ಉನ್ನತ ಹುದ್ದೆಗಳಿಗೆ ಲಿಂಗಾಯತ ನಾಯಕರನ್ನು ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಲಾಗಿದೆ. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಮಾಡುವ ಸಾಧ್ಯತೆಗಳಿವೆ.

ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಯಾರು?
ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕರಾದ ಡಾ. ಶರಣ ಪ್ರಕಾಶ್ ಪಾಟೀಲ್, ಬಿ ಆರ್ ಪಾಟೀಲ್ ವಿನಯ್ ಕುಲಕರ್ಣಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಬಸವ ಭವನದಲ್ಲಿ ತಡ ರಾತ್ರಿವರೆಗೂ ಈ ಸಭೆಯನ್ನು ಮಾಡಲಾಗಿದೆ. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಸಭೆಯಲ್ಲಿ ಈ ಮಹತ್ವ ಚರ್ಚೆಗಳನ್ನು ಮಾಡಲಾಗಿದೆ. ಇದು ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಚುನಾವಣೆ ಹೊಸ್ತಿಲಲ್ಲೇ ನಡೆದಿರುವ ಕಾಂಗ್ರೆಸ್‌ನ ಲಿಂಗಾಯತ ನಾಯಕರ ಸಭೆಯು ಹಲವು ಚರ್ಚೆಗಳನ್ನು ಹುಟ್ಟುಹಾಕಿರುವುದಂತೂ ಸತ್ಯ.












Click it and Unblock the Notifications