ಟಿಕೆಟ್‌ಗಾಗಿ ಭವಾನಿ ರೇವಣ್ಣ ಪಟ್ಟು: ಕುಮಾರಸ್ವಾಮಿಗೆ ಅಗ್ನಿಪರೀಕ್ಷೆಯಾಗಲಿದೆಯಾ ವಿಧಾನಸಭಾ ಚುನಾವಣೆ?
ಜೆಡಿಎಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸಿಎಂ ಕನಸು ಕಾಣುತ್ತಿರುವ ಎಚ್.ಡಿ.ಕುಮಾರಸ್ವಾಮಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅಗ್ನಿಪರೀಕ್ಷೆಯಾಗುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ವರದಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 27: ರಾಜಕೀಯದಲ್ಲಿ ಚಿಕ್ಕ ಚಿಕ್ಕ ವಿಚಾರಗಳು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ದೊಡ್ಡ ಬದಲಾವಣೆಗೆ ಕಾರಣವಾಗಿ ಬಿಡುತ್ತದೆ. ಜತೆಗೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮುಳುಗು ನೀರು ತರುವ ಸಾಧ್ಯತೆಯೂ ಇರುತ್ತದೆ. ಇದೀಗ ಜೆಡಿಎಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸಿಎಂ ಕನಸು ಕಾಣುತ್ತಿರುವ ಎಚ್.ಡಿ.ಕುಮಾರಸ್ವಾಮಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅಗ್ನಿಪರೀಕ್ಷೆಯಾಗುವುದರಲ್ಲಿ ಎರಡು ಮಾತಿಲ್ಲ.
ಜೆಡಿಎಸ್ ರಾಜ್ಯದಲ್ಲಿ ಎಷ್ಟೇ ಹೋರಾಟ ಮಾಡಿದರೂ ಅದರ ಮೇಲೆ ಇರುವ ಕುಟುಂಬ ರಾಜಕಾರಣದ ಆರೋಪವನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಪಕ್ಷದಲ್ಲಿ ಹೆಚ್ಚಿನ ಸ್ಥಾನಗಳನ್ನು ಅಲಂಕರಿಸಿದವರು ಕುಟುಂಬದ ಸದಸ್ಯರೇ. ಇದು ವಿರೋಧಿಗಳ ಟೀಕೆಗೆ ತುಪ್ಪ ಸುರಿದಂತೆ ಆಗಿದೆ.

ಮುಂದಿನ ವಿಧಾನಸಭಾ ಚುನಾವಣೆಗೆ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಅವರು ಕಣದಿಂದ ಹಿಂದೆ ಸರಿದು ಮಗ ನಿಖಿಲ್ ಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟರೆ, ಅತ್ತ ಹಾಸನದಲ್ಲಿ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಟಿಕೆಟ್‌ಗಾಗಿ ಪಟ್ಟು ಹಿಡಿದು ಕುಳಿತಿರುವುದು ಹೊಸ ಬೆಳವಣಿಗೆಯಾಗಿದೆ.
ಸ್ವರೂಪ್ ಅವರಿಗೆ ಈ ಹಿಂದೆಯೇ ಹಾಸನದ ಟಿಕೆಟ್ ನೀಡುವುದಾಗಿ ವಾಗ್ದಾನ ಮಾಡಲಾಗಿತ್ತು. ಆದರೆ ಈಗ ಭವಾನಿ ರೇವಣ್ಣ ಅವರು ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕುರಿತಂತೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯತ್ತ ಇಡೀ ರಾಜ್ಯ ಕುತೂಹಲದಿಂದ ನೋಡುತ್ತಿದೆ. ಈಗಾಗಲೇ ಜೆಡಿಎಸ್ ಪಕ್ಷ ನಾಯಕರ ಕೊರತೆಯನ್ನು ಅನುಭವಿಸುತ್ತಿದೆ. ಕುಮಾರಸ್ವಾಮಿ ಸೇರಿದಂತೆ ಕೆಲವೇ ಕೆಲವು ನಾಯಕರು ಮಾತ್ರ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

ಎಚ್.ಡಿ,ರೇವಣ್ಣ ಸೇರಿದಂತೆ ಅವರ ಕುಟುಂಬದ ಸದಸ್ಯರು ಹಾಸನ ಜಿಲ್ಲೆಯನ್ನು ಬಿಟ್ಟು ಹೊರ ಬರುವಂತೆ ಕಾಣುತ್ತಿಲ್ಲ. ಈ ಬಾರಿ ಬಹುಮತ ಪಡೆದು ಜೆಡಿಎಸ್‌ಅನ್ನು ಅಧಿಕಾರಕ್ಕೆ ತರಲೇ ಬೇಕೆಂಬ ಹಠದಲ್ಲಿರುವ ಕುಮಾರಸ್ವಾಮಿ ಅವರಿಗೆ ತಮ್ಮ ಕುಟುಂಬದಲ್ಲಿ ಎದ್ದಿರುವ ಟಿಕೆಟ್ ವಿಚಾರದ ಜಟಾಪಟಿಗೆ ಇತಿಶ್ರೀ ಹಾಡುವುದು ಹೇಗೆ ಎಂಬುದು ಗೊತ್ತಾಗದೆ ಪರದಾಡುವಂತಾಗಿದೆ.
ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಸೆಡ್ಡು ಹೊಡೆದಿದ್ದ ಜೆಡಿಎಸ್ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಕುಟುಂಬದಲ್ಲಿ ಎದ್ದಿರುವ ಟಿಕೆಟ್ ರಗಳೆಯಿಂದ ನಲುಗುವಂತಾಗಿದೆ. ಜೊತೆಗೆ ವಿರೋಧಿಗಳ ಮುಂದೆ ಮುಜುಗರ ಪಡುವಂತಾಗಿದೆ. ಈ ನಡುವೆ ಜೆಡಿಎಸ್‌ನಲ್ಲಿ ಎದ್ದಿರುವ ಟಿಕೆಟ್ ರಗಳೆಯನ್ನು ವಿರೋಧ ಪಕ್ಷಗಳು ಬಳಸಿಕೊಳ್ಳಲು ಆರಂಭಿಸಿವೆ.
ಮೊದಲೇ ಕುಟುಂಬ ರಾಜಕಾರಣದ ಆರೋಪ ಹೊತ್ತಿರುವ ಪಕ್ಷಕ್ಕೆ ಈಗ ಶುರುವಾಗಿರುವ ಟಿಕೆಟ್ ರಗಳೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದನ್ನು ಜೆಡಿಎಸ್ ವಿರುದ್ಧ ಅಸ್ತ್ರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆಯಲ್ಲಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಮೇಲೆ ಮೃಧುಧೋರಣೆ ತಾಳಿದ್ದ ಬಿಜೆಪಿ ಈ ಬಾರಿ ಪ್ರಬಲ ಪೈಪೋಟಿ ನಡೆಸಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಕೂಡ ಜೆಡಿಎಸ್‌ಅನ್ನು ಸೋಲಿಸಲೇ ಬೇಕೆಂಬ ತೀರ್ಮಾನಕ್ಕೆ ಬಂದಿದೆ.
ಜೆಡಿಎಸ್ ಸೋಲಿಸಲು ರಣತಂತ್ರ
ಜೆಡಿಎಸ್ ಗೆಲುವಿನ ಸಾಮರ್ಥ್ಯ ಹೆಚ್ಚಿಸಿಕೊಂಡಷ್ಟು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಹುಮತ ಪಡೆಯಲು ಕಷ್ಟವಾಗುವುದರಿಂದ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಟಾರ್ಗೆಟ್ ಮಾಡಿ ಸೋಲಿಸಲು ರಣತಂತ್ರ ರೂಪಿಸಿವೆ. ಇಷ್ಟರಲ್ಲೇ ಹೊಸ ವರಸೆ ಆರಂಭಿಸಿದ್ದು, ದೇವೇಗೌಡರ ಕುಟುಂಬದಲ್ಲಿ ಟಿಕೆಟ್ ಸಂಬಂಧ ಎದ್ದಿರುವ ಸಮಸ್ಯೆಯನ್ನು ಮೊದಲು ಬಗೆಹರಿಸಿ ಆಮೇಲೆ ರಾಜ್ಯವಾಳುವ ಬಗ್ಗೆ ಯೋಚಿಸಲಿ ಎಂದು ಬಿಜೆಪಿ ನಾಯಕರು ವ್ಯಂಗ್ಯ ಆರಂಭಿಸಿದ್ದಾರೆ.
ಚುನಾವಣೆ ಹತ್ತಿರವಾದಂತೆಲ್ಲ ದೇವೇಗೌಡರ ಕುಟುಂಬದಲ್ಲಿ ಆಗುತ್ತಿರುವ ರಾಜಕೀಯ ವಿದ್ಯಮಾನವನ್ನು ರಾಜಕೀಯ ವಿರೋಧಿಗಳು ಚುನಾವಣಾ ಅಸ್ತ್ರಗಳನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ದೇವೇಗೌಡರಿಗೆ ವಯಸ್ಸಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅವರು ಪ್ರಚಾರ ನಡೆಸುವುದು ಕಷ್ಟವಾಗಲಿದೆ.
ಜೆಡಿಎಸ್‌ನಲ್ಲಿ ನಾಯಕರ ಕೊರತೆ
ಏನಿದ್ದರೂ ಎಲ್ಲ ಕ್ಷೇತ್ರಗಳಿಗೂ ಕುಮಾರಸ್ವಾಮಿ ತೆರಳವುದು ಅನಿವಾರ್ಯವಾಗಲಿದೆ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಸ್ವತಂತ್ರವಾಗಿ ಚುನಾವಣಾ ಪ್ರಚಾರ ನಡೆಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ವರ್ಚಸ್ಸು ಇರುವ ನಾಯಕರ ಕೊರತೆ ಪಕ್ಷದಲ್ಲಿದೆ. ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ 2023ರ ವಿಧಾನಸಭಾ ಚುನಾವಣೆ ಅಗ್ನಿ ಪರೀಕ್ಷೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕುಟುಂಬದೊಳಗೆ ಎದ್ದಿರುವ ಭಿನ್ನಾಭಿಪ್ರಾಯ ಹಾಗೂ ಮುಂದೆ ಪಕ್ಷದೊಳಗೆ ಎದುರಾಗಲಿರುವ ಸಮಸ್ಯೆಗಳನ್ನು ಬಗೆಹರಿಸಿ, ತಮ್ಮ ಕ್ಷೇತ್ರ ಚನ್ನಪಟ್ಟಣ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿನಿಧಿಸಲಿರುವ ರಾಮನಗರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಇಡೀ ರಾಜ್ಯ ಸುತ್ತಿ, ಪ್ರಚಾರ, ಸಮಾವೇಶ ಮಾಡುವ ಮೂಲಕ ಪಕ್ಷದ ಇತರೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕಾಗಿದೆ. ಇದು ಅಷ್ಟೊಂದು ಸುಲಭವಲ್ಲ. ಆದರೆ ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಎಲ್ಲರಲ್ಲಿರುವ ಕುತೂಹಲವಾಗಿದೆ.
-
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications