ಸರ್ಕಾರ ವಿರುದ್ಧ ಜನಧ್ವನಿಯಾಗುವಲ್ಲಿ ಕಾಂಗ್ರೆಸ್ ವಿಫಲ!
ಬೆಂಗಳೂರು, ಜುಲೈ 19: ಪಕ್ಷದ ಆಂತರಿಕ ಸಮೀಕ್ಷೆ 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ಸಾಧ್ಯತೆಯನ್ನು ಹೇಳಿದ್ದು, ಅಲ್ಲಿಂದೀಚೆಗೆ ಕಾಂಗ್ರೆಸ್‌ನ ಸಾಮೂಹಿಕ ಹೋರಾಟ ಹಳ್ಳ ಹಿಡಿದು, ಕೇವಲ ಸಿಎಂ ಅಭ್ಯರ್ಥಿ ವಿಚಾರ ಮುನ್ನಲೆಗೆ ಬಂದು ಅದಕ್ಕಾಗಿ ಗುದ್ದಾಟ ಶುರುವಾಗಿದೆ.
ಯಾವ ಆಧಾರದಲ್ಲಿ ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ವರದಿಯನ್ನು ನೀಡಿದೆಯೋ ಗೊತ್ತಿಲ್ಲ. ಆದರೆ ಇಷ್ಟರಲ್ಲೇ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ಪಕ್ಷದ ವಿರುದ್ಧ ಎದ್ದು ನಿಂತು ಜನಧ್ವನಿಯಾಗಿ ಹೊರಬರಬೇಕಿತ್ತು. ಒಂದು ವೇಳೆ ಹಾಗೆ ಮಾಡಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸಿದ್ದರೆ, ಬಹುಶಃ ಇವತ್ತು ಕಾಂಗ್ರೆಸ್ ನ ನಾಯಕರು ಧೈರ್ಯವಾಗಿ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಗುದ್ದಾಡಬಹುದಿತ್ತು.
ಸರ್ಕಾರದ ವಿರುದ್ಧ ಹೋರಾಡಲು ಹಲವು ವಿಚಾರಗಳು ವಿರೋಧ ಪಕ್ಷಗಳ ಮುಂದಿದೆ. ಹೋರಾಟದ ಮೂಲಕ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ನಿಲ್ಲಬಹುದಿತ್ತು. ಅದನ್ನು ಮಾಡಲೇ ಇಲ್ಲ. ಏಕೆಂದರೆ ಕಾಂಗ್ರೆಸ್ ನಾಯಕರ ನಡುವೆ ಒಗ್ಗಟ್ಟಿನ ಕೊರತೆಯಿದೆ.
ಸಾಮೂಹಿಕ ನಾಯಕತ್ವದ ಹೋರಾಟದ ಜಪ ಮಾಡುವ ನಾಯಕರು. ಒಂದಾಗಿ ಹೋರಾಟ ಮಾಡಿದ್ದು ಅಪರೂಪವೇ. ಜತೆಗೆ ಈಗಾಗಲೇ ರಾಜ್ಯದಲ್ಲಿ ಎದ್ದಿದ್ದ ಹಲವು ವಿವಾದದ ವಿಚಾರದಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪ್ರತ್ಯೇಕ ಹೇಳಿಕೆಗಳನ್ನು ನೀಡುತ್ತಾ ಬಂದರಾದರೂ ಯಾವುದೂ ಕೂಡ ಕಾಂಗ್ರೆಸ್ ಪಕ್ಷದ ನಿಲುವಾಗಲೇ ಇಲ್ಲ.

ಹಿಂದೂ ವಿರೋಧಿ ಎಂದು ಸಿದ್ದರಾಮಯ್ಯ ಬಿಂಬಿತ
ಇತ್ತೀಚೆಗಿನ ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಹಿಂದೂಪರ ಸಂಘಟನೆಗಳ ವಿಚಾರದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಲೇ ಬರುತ್ತಿದ್ದು, ಅವರು ಹಿಂದೂಪರ ಸಂಘಟನೆಗಳ ಬಗ್ಗೆ ಹೇಳಿಕೆ ನೀಡಿದಾಗಲೆಲ್ಲ ಅದು ಮುಸ್ಲಿಂ ಸಮುದಾಯದ ಓಲೈಕೆಯಂತೆಯೇ ಕಾಣುತ್ತದೆಯಲ್ಲದೆ, ಹಿಂದೂ ವಿರೋಧಿ ಎಂಬಂತೆ ಬಿಂಬಿತವಾಗುತ್ತಿದೆ ಅಥವಾ ಹಾಗೆ ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆಯೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕಾಂಗ್ರೆಸ್‌ನಲ್ಲಿನ ಡಿಕೆಶಿ ಬಣ ಸಮರ್ಥನೆ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಒಂದು ವೇಳೆ ಸಮರ್ಥನೆ ಮಾಡಿಕೊಂಡರೆ ಬಹುಸಂಖ್ಯಾತರ ವಿರೋಧ ಕಟ್ಟಿಕೊಳ್ಳಬೇಕೆಂಬ ಭಯವೂ ಅವರನ್ನ ಕಾಡುತ್ತಿದೆ.

ಧರ್ಮದಂಗಲ್ ವೇಳೆ ಡಿಕೆಶಿ ತಟಸ್ಥ
ಹೀಗಾಗಿ ಇತ್ತೀಚೆಗೆ ನಡೆದ ಧರ್ಮ ದಂಗಲ್ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಯಾವುದೇ ರೀತಿಯ ಹೇಳಿಕೆ ನೀಡದೆ ತಟಸ್ಥವಾಗಿ ಉಳಿಯುವ ಪ್ರಯತ್ನ ಮಾಡಿದರು. ಜತೆಗೆ ಸರ್ವ ಧರ್ಮದ ಜಪ ಮಾಡಿಕೊಂಡು ಬಂದರು. ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನಡೆ ಮತ್ತು ಹೇಳಿಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಲಾರಂಭಿಸಿದೆ. ಅದಕ್ಕೆ ಕಾರಣವೂ ಇದೆ.
ಈ ಹಿಂದೆ 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಗೆದ್ದಿದ್ದರಲ್ಲಿ ಯಾವುದೇ ವಿಶೇಷವಿರಲಿಲ್ಲ. ಏಕೆಂದರೆ ಅವತ್ತು ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿತ್ತು. ಭ್ರಷ್ಟಾಚಾರದ ಆರೋಪದಲ್ಲಿ ಮುಖ್ಯಮಂತ್ರಿಗಳು ಜೈಲು ಸೇರಿದ್ದರು, ಮೂರು ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದರು. ಜತೆಗೆ ಬಿಜೆಪಿ ಒಡೆದು ಹೋಳಾಗಿತ್ತು. ಹೀಗಾಗಿ ಜನ ಆಕ್ರೋಶಗೊಂಡಿದ್ದರು. ಪರ್ಯಾಯ ಸರ್ಕಾರಕ್ಕಾಗಿ ಹಾತೊರೆದು ಕೂತಿದ್ದರು. ಹಾಗಾಗಿ ಸುಲಭವಾಗಿಯೇ ಕಾಂಗ್ರೆಸ್ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದು ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದರು.

ಜನವಿರೋಧಿ ಅಲೆಯನ್ನು ಸೃಷ್ಠಿಸುವಲ್ಲಿ ಬಿಜೆಪಿ ಸಕ್ಸಸ್
2018ರ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಹೋಗಲಾಯಿತು. ಆದರೂ ಸ್ವತಃ ಮುಖ್ಯಮಂತ್ರಿಯಾಗಿದ್ದ ಅವರಿಗೆ ಮತ್ತೆ ಅಧಿಕಾರಕ್ಕೆ ಬರಲು ಸಾಧ‍್ಯವಾಗಲಿಲ್ಲ. ಅದಕ್ಕೆ ಕಾರಣ ಅನೇಕವಿದ್ದರೂ ಎಲ್ಲೋ ಒಂದು ಕಡೆ ಜನವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಜೆಡಿಎಸ್ ಕೂಡ ಸಿದ್ದರಾಮಯ್ಯ ಅವರ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಇದಾದ ನಂತರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೋದ ಚುನಾವಣೆಗಳು ಯಶಸ್ಸು ಕಾಣಲೇ ಇಲ್ಲ. ಹೀಗಿರುವಾಗ ಮುಂದಿನ 2023ರ ಚುನಾವಣೆಯಲ್ಲಿ ಮತ್ತೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ತೆರಳಿದರೆ ಬಿಜೆಪಿ ಹಿಂದುತ್ವದ ಅಸ್ತ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಬಹುದು ಎಂಬ ಭಯ ಬಹುತೇಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.

ಸಿದ್ದರಾಮಯ್ಯ ವಿರುದ್ಧ ಹಿಂದೂ-ಒಕ್ಕಲಿಗ ವಿರೋಧ ಅಸ್ತ್ರ
ಸಿದ್ದರಾಮಯ್ಯ ಅವರು ಆಗಾಗ್ಗೆ ಹಿಂದೂಪರ ಸಂಘಟನೆಗಳ ವಿರುದ್ಧ ಮತ್ತು ದೇವೇಗೌಡ, ಕುಮಾರಸ್ವಾಮಿ ಅವರನ್ನು ಟೀಕಿಸುತ್ತಿರುವುದರಿಂದ ಚುನಾವಣೆ ಸಂದರ್ಭ ಅವರನ್ನು ಹಿಂದೂ ಮತ್ತು ಒಕ್ಕಲಿಗ ವಿರೋಧಿಯಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗೆ ಆದರೆ ಅದರ ಪರಿಣಾಮವನ್ನು ಕಾಂಗ್ರೆಸ್ ನ ಇತರ ನಾಯಕರು ಎದುರಿಸಬೇಕಾಗುತ್ತದೆ.
ಚುನಾವಣೆ ಸಂದರ್ಭ ಮತದಾರರು ಅಭಿವೃದ್ಧಿ ವಿಚಾರವನ್ನಷ್ಟೆ ನೋಡುವುದಿಲ್ಲ. ಭಾವನಾತ್ಮಕವಾಗಿ ಚಿಂತನೆ ಮಾಡುತ್ತಾರೆ. ನಾಯಕರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬುದನ್ನು ಹಿಂದಿನ ಚುನಾವಣೆಗಳು ನಮಗೆ ತೋರಿಸಿಕೊಟ್ಟಿವೆ. ಹೀಗಿರುವಾಗ ಕಾಂಗ್ರೆಸ್ ನಾಯಕರು ಜನಪರ ಹೋರಾಟಗಳಿಗೆ ಒತ್ತು ನೀಡಿ ಜನಸಾಮಾನ್ಯರ ಧ್ವನಿಯಾಗಿ ನಿಲ್ಲುವ ಪ್ರಯತ್ನ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರು ಮಾಡುತ್ತಿರುವುದೇನು?

ಭವಿಷ್ಯದ ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪೈಪೋಟಿ
ಕೇವಲ ಹೈಕಮಾಂಡ್ ಗಮನ ಸೆಳೆಯಲು, ನಾಯಕತ್ವದ ಶಕ್ತಿಪ್ರದರ್ಶನ ಮಾಡುತ್ತಾ ದಿನಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಭವಿಷ್ಯದ ಸಿಎಂ ಸ್ಥಾನಕ್ಕಾಗಿ ಈಗಲೇ ಟವಲ್ ಎಸೆದು ಹೋರಾಟ ನಡೆಸುತ್ತಿದ್ದಾರೆ. ಇದನ್ನು ಜನ ಯಾವ ರೀತಿಯನ್ನು ನೋಡುತ್ತಿದ್ದಾರೆ ಎಂಬ ಅರಿವು ಕಾಂಗ್ರೆಸ್ ನಾಯಕರಿಗೆ ಇರುವಂತೆ ಕಾಣುತ್ತಿಲ್ಲ.
ಕೇವಲ ಪಕ್ಷಕ್ಕೆ ಸದಸ್ಯತ್ವ ನೋಂದಣಿ ಮಾಡಿಸಿದ ಕೂಡಲೇ ಅವರೆಲ್ಲರೂ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವುದು ಸುಳ್ಳು. ಏಕೆಂದರೆ ಈಗಾಗಲೇ ಕಾಂಗ್ರೆಸ್ ಆತ್ಮಸಾಕ್ಷಿಯ ಮತ ಹಾಕುವ ಬಗೆಗೂ ಪರಿಚಯ ಮಾಡಿಕೊಟ್ಟಿದೆ. ಅದು ಮುಂದಿನ ಚುನಾವಣೆಯಲ್ಲಿ ಕಾರ್ಯರೂಪಕ್ಕೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಜನರ ಧ್ವನಿಯಾಗಬೇಕಿದ್ದ ಕಾಂಗ್ರೆಸ್ ಮಾಡುತ್ತಿರುವುದೇನು?
ಇವತ್ತು ಕಾಂಗ್ರೆಸ್ ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ನೋವು ಆಲಿಸಿ ಅವರ ಸಂಕಷ್ಟಕ್ಕೆ ನೆರವಾಗಿದ್ದರೆ. ಬೆಲೆ ಏರಿಕೆ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದರೆ, ಆಡಳಿತ ಪಕ್ಷದ ಅಂಕು ಡೊಂಕುಗಳನ್ನು ಹೊರಗೆಳೆದು ಜನರ ಮುಂದಿಡುವ ಕೆಲಸ ಮಾಡಿದ್ದರೆ, ಜನ ಒಪ್ಪಿಕೊಳ್ಳುತ್ತಿದ್ದರು. ಆದರೆ ಅದ್ಯಾವುದನ್ನು ಮಾಡದೆ ಕೋಟ್ಯಂತರ ರೂ. ಖರ್ಚು ಮಾಡಿ ಸಮಾವೇಶ ಮಾಡುವುದರಿಂದ ಯಾರಿಗೆ ಲಾಭ?
ಚುನಾವಣೆಗೆ ಇನ್ನು ಒಂಬತ್ತು ತಿಂಗಳಿದೆ. ಈಗಲೇ ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಭ್ರಮೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ನಾಯಕರು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವಲ್ಲಿ ಮತ್ತು ಜನರ ಧ್ವನಿಯಾಗುವಲ್ಲಿ ವಿಫಲರಾಗುತ್ತಿರುವುದು ಎದ್ದು ಕಾಣುತ್ತಿದೆ.












Click it and Unblock the Notifications