ರಾಜ್ಯದಲ್ಲಿ ರಾಜಕೀಯ ಆಟ: ಮತದಾರರನ್ನು ಸೆಳೆಯಲು ಪಕ್ಷಗಳ ಸೆಣಸಾಟ
ಮೈಸೂರು, ಜನವರಿ 13: ಒಂದೆಡೆ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಕಸರತ್ತು ಕೂಡ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಕರೆದ ಕಾರಣ ನಿಖರವಾದ ಸಂಖ್ಯೆ ಪಕ್ಷದ ನಾಯಕರಿಗೆ ಮತ್ತು ರಾಜ್ಯದ ಜನತೆಗೆ ಗೊತ್ತಾಗಿದೆ. ಆದರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರೂ ಅದು ಬಹಿರಂಗವಾಗುತ್ತಿಲ್ಲ. ಜೆಡಿಎಸ್ ಈಗಾಗಲೇ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಕೆಲವು ಕ್ಷೇತ್ರಗಳಲ್ಲಿ ಮೇಲಿಂದ ಮೇಲೆ ಒಬ್ಬರೇ ಗೆಲುವು ಪಡೆಯುತ್ತಿದ್ದು, ಅವರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್ ನೀಡುವ ಪರಿಸ್ಥಿತಿಯಲ್ಲಿ ಮೂರು ಪಕ್ಷಗಳಿಲ್ಲ. ಹೀಗಾಗಿ ಗೆದ್ದ ಅಭ್ಯರ್ಥಿಯೇ ಮತ್ತೊಮ್ಮೆ ಗೆಲುವು ಪಡೆಯುತ್ತಿದ್ದರೆ, ಅವರ ನಂತರದ ನಾಯಕರು ಅವಕಾಶ ಸಿಗದೆ ಕೇವಲ ಪಕ್ಷ ಸಂಘಟನೆಗಷ್ಟೆ ಸೀಮಿತವಾಗಿ ಮುಖಂಡರು ಎಂಬ ಹೆಸರಿಗಷ್ಟೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇಂತಹ ಎರಡನೇ ಹಂತದ ನಾಯಕರು ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳಲ್ಲಿದ್ದು, ಅವರೆಲ್ಲರೂ ಪ್ರತಿ ಬಾರಿ ಚುನಾವಣೆ ಬಂದಾಗಲೂ ಟಿಕೆಟ್‌ಗಾಗಿ ಹಾತೊರೆದು ಬಳಿಕ ನಿರಾಸರಾಗುವುದು ಮಾಮೂಲಿಯಾಗಿದೆ.
ಕೆಲವು ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರ ಮುಂದೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಮತ್ತೆ ಕೆಲವು ಕ್ಷೇತ್ರಗಳಲ್ಲಿ ಪ್ರಭಾವಿಗಳನ್ನೇ ಬದಿಗೆ ಸರಿಸಿ ಗೆಲುವು ಪಡೆದವರು ಇದ್ದಾರೆ. ಜನ ಯಾವುದನ್ನು ಆಯ್ಕೆ ಮಾಡಿ ಮತ ಹಾಕುತ್ತಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಕೆಲವು ನಾಯಕರು ತಮ್ಮ ವರ್ಚಸ್ಸಿನಿಂದ ಮತದಾರರನ್ನು ಸೆಳೆಯುವ ಶಕ್ತಿ ಹೊಂದಿದ್ದು ಅವರು ಪಕ್ಷ, ಕ್ಷೇತ್ರ ಮೀರಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದು ಅಂಥವರು ಕೆಲವೇ ಕೆಲವು ಮಂದಿ ಮಾತ್ರ ಇದ್ದಾರೆ.

ಅಭ್ಯರ್ಥಿಯ ಜಾತಿ, ವರ್ಚಸ್ಸು, ಪಕ್ಷ ಮತದಾರರ ಮಾನದಂಡ
ಮತದಾರರ ಮತ ನೀಡುವಾಗ ಯಾವ ಮಾನದಂಡ ಅನುಸರಿಸುತ್ತಾರೆ ಎಂಬುದನ್ನು ಅಷ್ಟು ಸುಲಭವಾಗಿ ಹೇಳಲಾಗದು. ಇಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ಜಾತಿ, ವರ್ಚಸ್ಸು, ಕಾರ್ಯವೈಖರಿ, ಪಕ್ಷ ಹೀಗೆ ಎಲ್ಲವೂ ಮುಖ್ಯವಾಗುತ್ತದೆ. ಕೆಲವೊಮ್ಮೆ ಮತದಾರರಿಂದ ಮತ ಪಡೆಯುವ ಅಭ್ಯರ್ಥಿ ಮತ ಪಡೆಯುವ ಯೋಗ್ಯತೆಯನ್ನು ಕೂಡ ಹೊಂದಿರಬೇಕಾಗುತ್ತದೆ. ಆದರೆ ಎಲ್ಲದರ ನಡುವೆಯೂ ಆಮಿಷಕ್ಕೊಳಗಾಗಿ ಮತ ಚಲಾಯಿಸುವ ಮತದಾರರು ಇದ್ದಾರೆ.
ಚುನಾವಣೆಯ ಮತ್ತೊಂದು ಮುಖದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಒಂದಷ್ಟು ಮತವನ್ನು ಹಣ, ಉಡುಗೊರೆ ಸೇರಿದಂತೆ ಕೆಲವೊಂದು ಆಮಿಷಗಳನ್ನು ಒಡ್ಡಿದರಷ್ಡೆ ಪಡೆಯಲು ಸಾಧ್ಯ ಎಂಬುದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೂ ಗೊತ್ತಿದೆ. ಹೀಗಾಗಿಯೇ ಉಡುಗೊರೆಗಳನ್ನು ನೀಡುವುದು, ಯಾತ್ರೆಗಳಿಗೆ ಕಳಿಸುವುದು ಹೀಗೆ ಹಲವು ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದೆ. ಅವು ಯಾವುದೂ ಈಗ ಗುಟ್ಟಾಗಿ ಉಳಿದಿಲ್ಲ. ಜೊತೆಗೆ ಕಳೆದ ಬಾರಿಯ ಚುನಾವಣೆಗಿಂತಲೂ ಈ ಬಾರಿ ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವುದರಿಂದ ಎಷ್ಟೇ ಗುಟ್ಟಾಗಿ ಮಾಡಿದರೂ ಒಂದಲ್ಲ ಒಂದು ರೀತಿಯಲ್ಲಿ ವೈರಲ್ ಆಗಿಯೇ ಆಗುತ್ತದೆ.

ದಿನಕಳೆದಂತೆ ಜೋರಾದ ರಾಜಕೀಯ ಚಟುವಟಿಕೆ
ಇದೀಗ ರಾಜ್ಯದಾದ್ಯಂತ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷದ ನಾಯಕರನ್ನು ಸೆಳೆದು ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿರುವ ದೃಶ್ಯಗಳು ಮತ್ತು ಅವುಗಳಿಂದ ಪ್ರಚಾರ ಪಡೆದು ಪಕ್ಷದ ಪ್ರಮುಖ ನಾಯಕರ ಕೃಪೆಗೆ ಪಾತ್ರರಾಗಲು ಮಾಡುತ್ತಿರುವ ಸರ್ಕಸ್ ಪ್ರತಿ ದಿನವೂ ಕಾಣಸಿಗುತ್ತಿದೆ. ಈ ವಿಚಾರದಲ್ಲಿ ಪ್ರತಿಕ್ಷೇತ್ರದಲ್ಲಿ ಹಳಬರು ಮತ್ತು ಹೊಸಬರ ನಡುವೆ ಪೈಪೋಟಿ ಬಹಳ ಜೋರಾಗಿಯೇ ನಡೆಯುತ್ತಿದೆ. ದಿನಕಳೆದಂತೆಯೇ ರಾಜಕೀಯ ಚಟುವಟಿಕೆ ಇನ್ನಷ್ಟು ಜೋರಾಗಲಿದ್ದು, ಕೆಲವು ಶಾಸಕರು ತಮ್ಮ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಕಾರಣ ಅವರನ್ನು ಹಿಂದಿಕ್ಕಿ ಮುಂದೆ ಸಾಗುವುದು ಸ್ವಪಕ್ಷದ ನಾಯಕರಿಗೆ ಅಸಾಧ್ಯವಾಗಿರುವುದರಿಂದ ತಾವು ರಾಜಕೀಯದಲ್ಲಿ ಬೆಳೆಯುವ ಸಲುವಾಗಿ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವುದು ಹೊಸತೇನು ಅಲ್ಲ.

ಟಿಕೆಟ್ ಘೋಷಣೆ ಬಳಿಕ ಪಕ್ಷಾಂತರ
ಮುಂದಿನ ದಿನಗಳಲ್ಲಿ ಅದರಲ್ಲೂ ಪಕ್ಷಗಳು ಟಿಕೆಟ್ ಘೋಷಣೆ ಮಾಡಿದ ಬಳಿಕ ಮುನಿಸಿಕೊಂಡು ಒಂದಷ್ಟು ನಾಯಕರು ಪಕ್ಷಾಂತರ ಮಾಡುವುದು, ಅಥವಾ ಪಕ್ಷೇತರರಾಗಿ ಸ್ಪರ್ಧಿಸುವಂತಹ ಬೆಳವಣಿಗೆಗಳು ನಡೆದರೂ ಅಚ್ಚರಿಯಿಲ್ಲ. ಹೀಗಾಗಿ ತಮ್ಮದೇ ಪಕ್ಷದ ನಾಯಕರಿಂದ ಆಗುವ ಅನಾಹುತ ತಪ್ಪಿಸಲು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯನ್ನು ತಡೆಹಿಡಿದು ಕೊನೆಯ ಹಂತದಲ್ಲಿ ಘೋಷಣೆ ಮಾಡುವ ತಂತ್ರಕ್ಕೆ ಮಾರು ಹೋದರೂ ಅಚ್ಚರಿಯಿಲ್ಲ. ಅದು ಏನೇ ಇರಲಿ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಮತವನ್ನು ಸೆಳೆಯಲು ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಮಾಡುವುದಂತು ನಿಜ.

ರಾಷ್ಟ್ರೀ ಪಕ್ಷಗಳಿಗೆ ಟಕ್ಕರ್ ಕೊಡಲು ಜೆಡಿಎಸ್ ಭರ್ಜರಿ ಸಿದ್ಧತೆ
ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಧಿಕಾರ ಸ್ಥಾಪನೆಗಾಗಿ ರಣಕಹಳೆ ಮೊಳಗಿಸುತ್ತಿರುವ ಜೆಡಿಎಸ್ ಈಗಾಗಲೇ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಈಗಾಗಲೇ ಪಂಚರತ್ನರಥಯಾತ್ರೆ ಮೂಲಕ ಮತದಾರರ ಬಳಿಗೆ ಹೋಗುತ್ತಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಜೆಡಿಎಸ್ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ ಮತದಾರರ ಮನೆಗೆ ತಲುಪುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಅಬ್ಬರದ ನಡುವೆ ಎಸ್‌ಡಿಪಿಐ, ಎಎಪಿ, ಬಿಎಸ್‌ಪಿ, ಕೆಆರ್‌ಎಸ್ ಹೀಗೆ ಹಲವು ಪಕ್ಷಗಳು ಚುನಾವಣೆ ಸ್ಪರ್ಧಿಸಲು ಹವಣಿಸುತ್ತಿರುವುದು ಕಂಡು ಬರುತ್ತಿದೆ.











Click it and Unblock the Notifications