'ಪಾಟೀಲ್' ಸರ್‌ನೇಮ್ ಹೊಂದಿರುವ 20 ಮಂದಿ ಶಾಸಕರಾಗಿ ಆಯ್ಕೆ- ಇಲ್ಲಿದೆ ಕುತೂಹಲಕರ ಮಾಹಿತಿ
ಬೆಂಗಳೂರು, ಮೇ 18: ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಯಶಸ್ಸು ಕೊಂಡಿದೆ. ಆಡಳಿತರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಈ ಚುನಾವಣೆಯಲ್ಲಿ 'ಪಾಟೀಲ್' ಸರ್‌ನೇಮ್ ಹೊಂದಿರುವ 20 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಜಯಭೇರಿ ಭಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ 'ಪಾಟೀಲ್' ಉಪನಾಮೆಯು ಇದ್ದಕ್ಕಿದ್ದಂತೆ ಸುದ್ದಿಯಲ್ಲಿದೆ. ಈ ವರದಿಯನ್ನು 'ಟೈಮ್ಸ್ ಆಫ್ ಇಂಡಿಯಾ' ಪ್ರಕಟಿಸಿದೆ.
ಪಾಟೀಲ್ ಉಪನಾಮೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಬಳಸಲಾಗುವ ಉಪನಾಮವಾಗಿದೆ. ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರ ಪ್ರದೇಶದಲ್ಲಿ ಪಾಟೀಲರು ಗ್ರಾಮದ ಲೆಕ್ಕಾಧಿಕಾರಿಗಳು ಅಥವಾ ನಾಯಕರೆಂದು ಗುರುತಿಸಲ್ಪಡುತ್ತಾರೆ.

ಉತ್ತರ ಕರ್ನಾಟಕದಲ್ಲಿ ಅವರನ್ನು 'ಗೌಡ್ರು' ಎಂದು ಜನರು ಕರೆಯುವುದುಂಟು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಾಟೀಲ ಉಪನಾಮ ಹೊಂದಿರುವ 87 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 20 ಮಂದಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ 12, ಬಿಜೆಪಿಯಿಂದ 7 ಮತ್ತು ಜೆಡಿಎಸ್‌ನಿಂದ ಒಬ್ಬರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ ಪ್ರಕಾರ, 'ಪಾಟೀಲ' ಎಂಬುದು ಬ್ರಿಟಿಷರು, ಪೇಶ್ವೆಗಳು ಮತ್ತು ನಿಜಾಮರು ಹಳ್ಳಿಗಳನ್ನು ನೋಡಿಕೊಳ್ಳಲು ಸ್ಥಳೀಯ ನಾಯಕರಿಗೆ ನಿಯೋಜಿಸಿದ ಹುದ್ದೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಪಾಟೀಲರು ಲಿಂಗಾಯತರು ಎಂದು ನುಗಡೋಣಿ ಹೇಳಿದರು. 'ಬ್ರಾಹ್ಮಣರು, ಕುರುಬರು ಮತ್ತು ಮರಾಠ ಸಮುದಾಯಗಳಲ್ಲಿ ಪಾಟೀಲ್ ಉಪನಾಮವು ಸ್ವಲ್ಪ ಮಟ್ಟಿಗೆ ಇದೆ' ಎಂದು ಅವರು ಹೇಳಿದ್ದಾರೆ.
'ಪಾಟೀಲ್ ಉಪನಾಮವನ್ನು ಮೇಲ್ಜಾತಿಗಳಿಗೆ ನೀಡಲಾಯಿತು. ಆರ್ಥಿಕವಾಗಿ ಅವರು ಸಾಕಷ್ಟು ಸುಸ್ಥಿತಿಯಲ್ಲಿದ್ದರು. ಬ್ರಿಟಿಷರು, ಪೇಶ್ವೆಗಳು ಮತ್ತು ನಿಜಾಮರು ಗ್ರಾಮದ ಮುಖಂಡರಿಗೆ 'ಇನಾಮಗಳು' ಮತ್ತು 'ಜಹಗೀರು'ಗಳನ್ನು ನೀಡುತ್ತಿದ್ದರು. ಆದ್ದರಿಂದ, 'ಇನಾಮದಾರ' ಮತ್ತು 'ಜಹಗೀರದಾರ' ಉಪನಾಮಗಳು ಪಾಟೀಲರಿಗೆ ಸಮಾನಾಂತರವಾಗಿ ಉಳಿದುಕೊಂಡಿವೆ. ಅವರು ಆಡಳಿತಗಾರರ ಪ್ರತಿನಿಧಿಗಳಾಗಿ ಪಂಚಾಯಿತಿಗಳನ್ನು ನಿರ್ವಹಿಸುತ್ತಾರೆ' ಎಂದು ಅವರು ತಿಳಿಸಿದ್ದಾರೆ.
ನಾಲ್ಕು ಬಾರಿ ಕಾಂಗ್ರೆಸ್‌ನಿಂದ ರೋಣ ಶಾಸಕರಾಗಿರುವ ಜಿ.ಎಸ್.ಪಾಟೀಲ ಅವರು ಈ ಕುರಿತು ಮಾತನಾಡಿದರು. ನಮ್ಮ ಪೂರ್ವಜರನ್ನು 'ಪೊಲೀಸ್‌ಪಾಟೀಲ' ಎಂದು ಕರೆಯುತ್ತಿದ್ದರು. ಅವರೇ ಗ್ರಾಮವನ್ನು ನೋಡಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ 'ಪೊಲೀಸ್‌ಪಾಟೀಲ' ಹುದ್ದೆ ರದ್ದಾದಾಗ ಪೊಲೀಸ್ ಪದವನ್ನು ತೆಗೆದು ಹಾಕಿದ್ದೇವೆ. ಮತ್ತು ನಮ್ಮ ಉಪನಾಮವಾಗಿ 'ಪಾಟೀಲ್' ಅನ್ನು ಮಾತ್ರ ಉಳಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications