Government employee; ಆರೋಗ್ಯ ಸಂಜೀವಿನಿ ಯೋಜನೆಯ ಪ್ರಮುಖ ಮಾಹಿತಿ
ಬೆಂಗಳೂರು, ಆಗಸ್ಟ್ 20: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗಾಗಿಯೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಘೋಷಣೆ ಮಾಡಿದೆ. ಹಂತ-ಹಂತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಸರ್ಕಾರಿ ನೌಕರರಿಗೆ ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ಸಂಘದ ರಾಜ್ಯ ಕಾರ್ಯದರ್ಶಿ ಡಾ. ನೆಲ್ಕುದ್ರಿ ಸದಾನಂದಪ್ಪ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕಟಣೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ರಾಜ್ಯ ಸರ್ಕಾರಿ ಅಧಿಕಾರಿ/ ನೌಕರರು ಹಾಗೂ ತಮ್ಮ ಅವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು ಹೆಚ್. ಆರ್. ಎಂ. ಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ಎಂಬ ವಿಚಾರ ಒಳಗೊಂಡಿದೆ.
ನೌಕರರಿಗೆ ಮಾಹಿತಿ ಏನು?; ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸೆಪ್ಟೆಂಬರ್ 15ರಿಂದ ಜಾರಿಗೊಳಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿರುತ್ತದೆ. ಈ ಯೋಜನೆಗೆ ಒಳಪಡುವ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರು ಮತ್ತು ತಮ್ಮ ಅವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳಲು ಹೆಚ್. ಆರ್. ಎಂ. ಎಸ್. ತಂತ್ರಾಂಶ ಹಾಗೂ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ ಎಂದು ಮಾಹಿತಿ ನೀಡಲಾಗಿದೆ.
ಎಲ್ಲಾ ರಾಜ್ಯ ಸರ್ಕಾರಿ ಅಧಿಕಾರಿ/ ನೌಕರರು ತಮ್ಮ ಇಲಾಖೆಯ ಡಿಡಿಓರವರ ಮೂಲಕ ತಮ್ಮ ಹಾಗೂ ಅವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು ನೋಂದಣಿ ಮಾಡಿಸಿಕೊಳ್ಳಲು ಈ ಹಿಂದೆ ತಿಳಿಸಲಾಗಿತ್ತು.
ಸರ್ಕಾರಿ ನೌಕರರು ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಯೋಜನೆಯನ್ನು ಜಾರಿಗೊಳಿಸಲು ಅಡ್ಡಿಯುಂಟಾಗಿರುತ್ತದೆ. ಆದ್ದರಿಂದ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಹೊರಡಿಸಲಾಗಿರುವ ದಿನಾಂಕ 10/8/2013ರ ಸುತ್ತೋಲೆಯ ನಿರ್ದೇಶನದಂತೆ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರು ತಾವುಗಳು ಕರ್ತವ್ಯ ನಿರ್ವಹಿಸುವ ಇಲಾಖೆಗಳ ಡಿಡಿಓ ಗಳನ್ನು ಸಂಪರ್ಕಿಸಿ ಎಂದು ಪ್ರಕಟಣೆ ಹೇಳಿದೆ.
ತಮ್ಮ ಹಾಗೂ ಆವಲಂಬಿತ ಕುಟುಂಬದ ಸದಸ್ಯರುಗಳ ಮಾಹಿತಿಯನ್ನು 2023ನೇ ಸೆಪ್ಟೆಂಬರ್ 15ರೊಳಗಾಗಿ ನೋಂದಾಯಿಸಿಕೊಳ್ಳಲು ಕೋರಿದೆ. ನೋಂದಾವಣಿಗೆ ಈ ಲಿಂಕ್‌ಗಳನ್ನು ಬಳಕೆ ಮಾಡಿ https://hrms.karnataka.gov.in/ ಹಾಗೂ ಮೊಬೈಲ್ ಅಪ್ಲಿಕೇಶನ್ https://hrmsenroll.karnataka.gov.in/.
ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ಪದಾಧಿಕಾರಿಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದ ಕುರಿತು ಸುವರ್ಣ ಆರೋಗ್ಯ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕಿ ವಿನುತ್ ಪ್ರಿಯ ಅವರ ಜೊತೆ ಚರ್ಚಿಸಿದ್ದರು. ಆಗ ಸೆಪ್ಟೆಂಬರ್ 15ರೊಳಗೆ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಮುಖ್ಯಮಂತ್ರಿಗಳ ಉತ್ತರ; ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಕುರಿತು ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರವು ರೂಪಿಸಿರುವ ನಗದು ರಹಿತ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನ (KASS)' ಯನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ಭಾಗವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದ್ದರು.
ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದಿನಾಂಕ 17/8/2021ರ ಸರ್ಕಾರಿ ಆದೇಶದಂತೆ ನಿರ್ದೇಶನ/ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿದೆ ಎಂದು ಹೇಳಿದ್ದರು. ಯೋಜನೆಯಿಂದ ರಾಜ್ಯದ ಅಂದಾಜು 5 ಲಕ್ಷಕ್ಕೂ ಹಚ್ಚಿನ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಒಂದಕ್ಕೆ ಸರಾಸರಿ 5 ಸದಸ್ಯರಂತೆ ಸುಮಾರು 25 ರಿಂದ 30 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದ್ದರು.
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಜಾರಿಗೊಳಿಸಲಿದೆ. ಯೋಜನೆಗಾಗಿಯೇ ರಾಜ್ಯ ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಒಂದು ವಿಶೇಷ ಕೋಶವನ್ನು (KASS Cell) ಸೃಜಿಸಿದ್ದು, ಈ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದರು.











Click it and Unblock the Notifications