ಕಾವೇರಿ ತೀರ್ಪಿಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿರುವ ಕರ್ನಾಟಕ
ಬೆಂಗಳೂರು, ಫೆಬ್ರವರಿ 16 : ಕಾವೇರಿ ತೀರ್ಪು ಸುಪ್ರೀಂ ಕೋರ್ಟಿನಲ್ಲಿ ಇಂದು ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರೀ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ತೀರ್ಪು ಯಾವುದೇ ಕಡೆ ಆದರೂ ಗಲಭೆ ಆಗುವುದನ್ನು ಅಲ್ಲಗಳೆಯುವಂತಿಲ್ಲ.
ಸರಿಯಾಗಿ ಒಂದೂ ವರ್ಷದ ಹಿಂದೆ 2016ರ ಸೆಪ್ಟೆಂಬರ್ 12ರಂದು, ತೀರ್ಪು ಕರ್ನಾಟಕದ ವಿರುದ್ಧವಾಗಿ ಬರುತ್ತಿದ್ದಂತೆ ಇಡೀ ಬೆಂಗಳೂರು ಹೊತ್ತಿ ಉರಿದಿತ್ತು. ದೊಂಬಿ, ಕಲ್ಲು ತೂರಾಟ, ನೂರಾರು ವಾಹನಗಳಿಗೆ ಬೆಂಕಿ ಬಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು ಮತ್ತು ಕೋಟ್ಯಂತರ ನಷ್ಟವೂ ಸಂಭವಿಸಿತ್ತು.
ಮುನ್ನೆಚ್ಚರಿಕೆಯಾಗಿ ಕರ್ನಾಟಕದ ಪೊಲೀಸರು ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಬಾರೀ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಬಸ್ಸುಗಳು ಬೆಳಿಗ್ಗೆಯೇ ಸ್ಥಗಿತಗೊಂಡಿವೆ.

ತೀರ್ಪು ಏನೇ ಬರಲಿ, ಅಸಲಿಗೆ ಕಾವೇರಿ ಕೊಳ್ಳದಲ್ಲಿ ತಮಿಳುನಾಡಿಗೆ ಬಿಡಲು ನೀರಾದರೂ ಇದೆಯಾ? ಕೆಆರ್‌ಎಸ್ ನಲ್ಲಿ ಪ್ರಸ್ತುತ 92.39 ಅಡಿ ಮಾತ್ರ ನೀರಿದ್ದು, ಭರ್ತಿ ನಾಲ್ಕು ತಿಂಗಳ ಬೇಸಿಗೆ ಸ್ವಾಗತ ಮಾಡಿಕೊಂಡು ನಿಂತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಅಂತಹ ಮಳೆ ಸುರಿದಿಲ್ಲ.
2007ರಲ್ಲಿ ನ್ಯಾಯಾಧೀಕರಣ ನೀಡಿದ್ದ ಆದೇಶ ಹೀಗಿದೆ. ಲಭ್ಯವಿರುವ 740 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ 270, ತಮಿಳುನಾಡಿಗೆ 419, ಕೇರಳಕ್ಕೆ 30 ಮತ್ತು ಪಾಂಡಿಚೇರಿಗೆ 7 ಮತ್ತು 14 ಪರಿಸರಕ್ಕಾಗಿ ಬಳಕೆಯಾಗಬೇಕು ಆದೇಶ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೇಲ್ಮನವಿ ಸಲ್ಲಿಸಿದ್ದವು.
ಚಾಮರಾಜನಗರವಂತೂ ಭಾರೀ ಬರಗಾಲ ಎದುರಿಸುತ್ತಿದೆ. ರಾಸುಗಳಿಗೆ ಮೇವಿಲ್ಲ, ಕುಡಿಯಲು ನೀರಿಲ್ಲ. ಬೆಂಗಳೂರಿನಲ್ಲಿ ಈಗಾಗಲೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಂತರ್ಜಲ ತಳಮುಟ್ಟಿದೆ. ಇನ್ನು ಕಾವೇರಿ ನೀರನ್ನೂ ತಮಿಳುನಾಡಿಗೆ ಹರಿಯಬಿಟ್ಟರೆ, ಬೆಂಗಳೂರಿನ ಜನರ ಸ್ಥಿತಿ ದೇವರಿಗೇ ಪ್ರೀತಿ.
ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಜನರು, ರಾಜಕಾರಣಿಗಳು ಉಸಿರು ಬಿಗಿಬಿಡಿದು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ. ದೇವರೇ, ತೀರ್ಪು ಕರ್ನಾಟಕದ ಪರವಾಗಿ ಬರಲಪ್ಪ ಎಂದು ಮಂಡ್ಯದ ರೈತರು ಕೈಮುಗಿದು ದೇವರನ್ನು ಕೇಳಿಕೊಳ್ಳುತ್ತಿದ್ದಾರೆ.
ಶಾಂತಿ ಕಾಪಾಡಬೇಕಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಜನರು ಅತ್ಯಂತ ಸಂಯಮದಿಂದ ವರ್ತಿಸಬೇಕಾಗಿದೆ. ಯಾರ ಮೇಲೂ ದೈಹಿಕವಾಗಿ ಹಲ್ಲೆ ಮಾಡಬೇಕಿಲ್ಲ, ಒಂದು ಬೆಂಕಿ ಹಚ್ಚುವ ಕಾಮೆಂಟ್ ಸಾಕು ಎರಡೂ ರಾಜ್ಯಗಳು ಮತ್ತೆ ಹೊತ್ತಿ ಉರಿಯಲು.












Click it and Unblock the Notifications