Rain Alert: ಕರ್ನಾಟಕದ 28 ಜಿಲ್ಲೆಗಳಲ್ಲಿ 5 ದಿನ ವ್ಯಾಪಕ ಮಳೆ: ಹವಾಮಾನ ಮುನ್ಸೂಚನೆ
ಬೆಂಗಳೂರು, ಜೂನ್ 04: ಕರ್ನಾಟಕದಾದ್ಯಂತ ಮುಂಗಾರು ಮಳೆ ವಿಸ್ತರಣೆಯಾಗುವ ಮುನ್ಸೂಚನೆ ನೀಡಿದೆ. ಈಗಾಗಲೇ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಸುರಿದಿದ್ದ ಮುಂಗಾರು ಕೆಲವು ದಿನಗಳಿಂದ ಕೊಂಚ ತಣ್ಣಗಾಗಿದೆ. ಇದೀಗ ಮತ್ತೆ ಚುರುಕಾಗುವ ಸಾಧ್ಯತೆ ಇದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಬುಧವಾರ ಹವಾಮಾನ ಇಲಾಖೆ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಜೂನ್ 5ರಿಂದ ಜೂನ್ 09ರವರೆಗೆ ಮುಂಗಾರು ಮಳೆ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿ ಚುರುಕಾಗಲಿದೆ. ನಾಳೆ ಗುರುವಾರ ಹಾಗೂ ನಾಡಿದ್ದು ಶುಕ್ರವಾರದಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗಲಿದೆ. ಬಿರುಗಾಳಿ ಸಹಿತ ಸಾಧಾರಣ ಮಳೆ ಆಗಲಿದೆ. ಇಲ್ಲಿ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂಬ ಮುನ್ಸೂಚನೆ ಇದೆ.

ಉತ್ತರ ಒಳನಾಡಿನ ಜೊತೆಗೆ ಮೂರು ಮತ್ತು ನಾಲ್ಕನೇ ದಿನ (ಜೂನ್ 7 & 8ರಂದು) ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಹೊರತುಪಡಿಸಿ ಉಳಿದೆಲ್ಲ 28 ಜಿಲ್ಲೆಗಳಿಗೂ ಅಲ್ಲಲ್ಲಿ ಹಗುರ ಹಾಗೂ ಸಾಧಾರಣ ಮಳೆ ಸುರಿಯಲಿದೆ. ಗಾಳಿಯ ವೇಗ ಹೆಚ್ಚಿರಲಿದೆ. ಇದೇ ವೇಳೆ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋರು ಗಾಳಿ ಬೀಸಲಿದೆ. ಆದರೆ ತಂತುರು ಮಳೆ ಆಗಬಹುದು. ಹೊರತು ಭಾರೀ ಮಳೆಯ ಗುಣಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ದೃಢಪಡಿಸಿದೆ.
ಈ ಜಿಲ್ಲೆಗಳಲ್ಲಿ ಜೋರು ಮಳೆ ನಿರೀಕ್ಷೆ: IMD
ನಂತರ ಐದನೇ ದಿನ (ಜೂನ್ 09ರಂದು) ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ತುಮಕೂರು, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಾಗ ಜೋರು ಮಳೆ ಬರಲಿದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಬರಲಿದೆ. ಈ ಮೂಲಕ ರಾಜ್ಯದಲ್ಲಿ ಮುಂಗಾರು ಮಳೆ ಎರಡನೇ ಭಾರಿಗೆ ಹೆಚ್ಚಿನ ಮಳೆ ಸುರಿಸುವ ನಿರೀಕ್ಷೆ ಇದೆ.
ಬೆಂಗಳೂರಿಗೆ ಏನಿದೆ ಹವಾಮಾನ ಎಚ್ಚರಿಕೆ?
ಇನ್ನೂ ಬೆಂಗಳೂರು ನಗರ ವಾತಾವರಣ ಬಗ್ಗೆ ಪ್ರತ್ಯೇಕವಾಗಿ ನೋಡುವುದಾದರೆ, ಮುಂದಿನ 48 ಗಂಟೆಗಳ ಕಾಲ ಆಗಾಗ ಬಿಸಿಲು ಜೊತೆಗೆ ಮಬ್ಬು ವಾತಾವರಣ, ತಂಪು ಗಾಳಿ ಕಂಡು ಬರಲಿದೆ. ಕೆಲವೆಡೆ ಲಘು ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತಾಗಿ ಎಲ್ಲಿಯೂ ಜೋರು ಮಳೆ ಆಗುವುದು ಅನುಮಾನ ಎನ್ನಲಾಗಿದೆ. ಗರಿಷ್ಠ ತಾಪಮಾನ 30 ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಕೋಡಗು, ಮಡಿಕೇರಿ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಬರುತ್ತಿರುವ ಕಾರಣದಿಂದಾಗಿ ಕೃಷ್ಣ ರಾಜ ಸಾಗರ, ಕಬಿನಿ, ಹಾರಂಗಿ, ಹೇಮಾವತಿ, ಮೆಟ್ಟೂರು ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿವೆ. ಕೆಆರ್‌ಎಸ್ ಡ್ಯಾಂ, ಕಬಿನಿ ಜಲಾಶಯದಿಂದ ನೀರನ್ನು ಹೊರಬಿಟ್ಟಿದ್ದು, ಡ್ಯಾಂ ಕೆಳ ಭಾಗದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ನೀರಾವರಿ ನಿಗಮ ಮಾಹಿತಿ ನೀಡಿದೆ.












Click it and Unblock the Notifications