ಎಚ್1 ಎನ್1, ಹಂದಿಜ್ವರ ಎರಡೂ ಒಂದೇ ಸ್ವಾಮಿ!
ಬೆಂಗಳೂರು, ಮಾರ್ಚ್, 16 : ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ಇಂದಿನ ವಿಧಾನಪರಿಷತ್ ಕಲಾಪದಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು 'ಎಚ್1ಎನ್1 ಬಗ್ಗೆ ಮಾತ್ರ ಮಾತನಾಡಬೇಕು, ಹಂದಿಜ್ವರ ಬಗ್ಗೆ ಯಾರೂ ಮಾತನಾಡಬಾರದು' ಎಂದು ಸದಸ್ಯರಿಗೆ ಸೂಚನೆ ನೀಡಿ ಕಲಾಪದಲ್ಲಿ ನಗುವಿನ ಅಲೆ ಎಬ್ಬಿಸಿದರು.
ಸೋಮವಾರ ಕಲಾಪದ ವೇಳೆ ಬಿಜೆಪಿಯ ವಿಮಲಾ ಗೌಡ, ರಘುನಾಥ್ ಮಲ್ಕಾಪುರೆ ಅವರು ರಾಜ್ಯದಲ್ಲಿ ಹಂದಿಜ್ವರ ಹರಡುವುದನ್ನು ನಿಯಂತ್ರಿಸವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಆಗ ಮಧ್ಯಪ್ರವೇಶಿಸಿದ ಸಭಾಪತಿ ಶಂಕರಮೂರ್ತಿಯವರು, 'ಹಂದಿಜ್ವರದ ವಿಚಾರ ಬಿಟ್ಟು ಎಚ್1ಎನ್1 ಬಗ್ಗೆ ಮಾತ್ರ ಚರ್ಚಿಸಿ, ಚರ್ಚೆಯನ್ನು ಬೇರೆಕಡೆ ತೆಗೆದುಕೊಂಡು ಹೋಗಬೇಡಿ' ಎಂದು ಸೂಚನೆ ನೀಡಿದರು. [ಕರ್ನಾಟಕ ಬಜೆಟ್ ಮುಖ್ಯಾಂಶಗಳು]

ಸಭಾಪತಿಗಳ ಮಾತು ಕ್ಷಣಕಾಲ ಎಲ್ಲಾ ಸದಸ್ಯರಿಗೂ ಅಚ್ಚರಿ ಮೂಡಿಸಿತು. ತಕ್ಷಣ ಎದ್ದುನಿಂತ ಜೆಡಿಎಸ್ ಸದಸ್ಯ ರಾಮಕೃಷ್ಣ ಅವರು, 'ಸಭಾಪತಿಗಳೇ ಎಚ್1ಎನ್1, ಹಂದಿಜ್ವರ ಎರಡೂ ಒಂದೇ. ಕನ್ನಡದಲ್ಲಿ ಎಚ್1 ಎನ್1ಗೆ ಹಂದಿಜ್ವರ ಎನ್ನುತ್ತಾರೆ' ಎಂದು ಹೇಳಿದಾಗ ಪರಿಷತ್ತಿನಲ್ಲಿ ನಗುವಿನ ಅಲೆ ಎದ್ದಿತು. [ಹಾಲಪ್ಪನೂ ಒಂದೇ ನಿತ್ಯಾನಂದನೂ ಒಂದೇ!]
ಕುಡಿಯುವ ನೀರಿನ ಯೋಜನೆಗೆ ಆದ್ಯತೆ ಕೊಡಿ : ಸರ್ಕಾರ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡದಿದ್ದರೆ ಜನರು ದಂಗೆ ಏಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ ಆರಂಭದಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ 1,500 ಅಡಿ ಕೊಳೆವೆ ಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ ಎಂದು ಹೇಳಿದರು.
ಶೆಟ್ಟರ್ ಮಾತಿಗೆ ಧ್ವನಿಗೂಡಿಸಿದ ಕೆಜಿಎಫ್ ಶಾಸಕ ರಾಮಕ್ಕ ಅವರು, ಸರ್ಕಾರಕ್ಕೆ ನಾವೇನು ಕೇಳುವುದಿಲ್ಲ ನೀರು ಕೊಡಿ ಸಾಕು. ಕಳೆದ ವರ್ಷ ನೀರಿನ ಕೊರತೆಯಿಂದಾಗಿ. ಜನರು ಗುಳೆ ಹೋಗಿದ್ದಾರೆ. ಈ ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಅರಣ್ಯ ಸಚಿವರ ವಿರುದ್ಧ ವಿಪಕ್ಷಗಳು ಗರಂ : ಅರಣ್ಯ ಸಚಿವ ರಮಾನಾಥ ರೈ ವಿಪಕ್ಷಗಳ ಸದಸ್ಯರ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡದೆ ಶಾಸಕರ ಆಕ್ರೋಶಕ್ಕೆ ತುತ್ತಾದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಪರಿಹಾರ ಪಾವತಿಸುವ ಸಂಬಂಧ ಸ್ಪಷ್ಟ ಉತ್ತರ ನೀಡುವಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರ ನೀಡಿದ ಅರಣ್ಯ ಸಚಿವರು 1,372 ಕುಟುಂಬಗಳಿಗೆ ಪರಿಹಾರ ಪಾವತಿಸಲಾಗಿದೆ. 373 ಕುಟುಂಬಗಳಿಗೆ ಪಾವತಿಸಬೇಕಿದೆ ಎಂದಾಗ ಯಾವ ಸ್ವರೂಪದ ಪರಿಹಾರ? ಎಂದು ಶಾಸಕರು ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು ಹಿಂದೆ ನೀಡುತ್ತಿದ್ದ ಪರಿಹಾರದಂತೆ ಈಗಲೂ ಪರಿಹಾರ ನೀಡುತ್ತಿದೆ ಎಂದರು. ಇದರಿಂದ ಕೋಪಗೊಂಡ ಸದಸ್ಯರು ಬೇಜವಾಬ್ದಾರಿ ಉತ್ತರ ಬೇಡ ಸ್ಪಷ್ಟ ಉತ್ತರ ನೀಡಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
258 ಸರ್ಕಾರಿ ಕೈಗಾರಿತಾ ತರಬೇತಿ ಕೇಂದ್ರ : ರಾಜ್ಯದಲ್ಲಿ ಒಟ್ಟು 258 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರು ಶಾಸಕ ಹೆಚ್.ಡಿ. ರೇವಣ್ಣ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಕೆಲವೊಂದು ತರಬೇತಿ ಸಂಸ್ಥೆಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ಈ ಖಾಸಗಿ ಕಟ್ಟಡಗಳು ಮೂಲಸೌಕರ್ಯ ಹೊಂದಿವೆ ಹಾಗೂ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications