ʼKPSCಯಲ್ಲಿ ಇವರದ್ದೇ ಲಾಬಿʼ ಎಂದ ಕರವೇ; ಯಾರವರು?
ಕೆಪಿಎಸ್‌ಸಿ ಮರುಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಆದೇಶ ನೀಡಿರುವ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಮತ್ತೊಂದು ಆರೋಪ ಮಾಡಿದ್ದಾರೆ. ಕೆ.ಪಿ.ಎಸ್.ಸಿಯಲ್ಲಿ ಇಂಗ್ಲಿಷ್ ಮಾಧ್ಯಮದವರ ಲಾಬಿ ನಡೆಯುತ್ತಿದೆ ಎಂಬ ಮಾತುಗಳು ನನ್ನ ಕಿವಿಗೆ ಬಿದ್ದಿವೆ. ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಈ ತಾರತಮ್ಯದ ಫಲಿತಾಂಶಗಳಿಗೂ ನೇರ ಸಂಬಂಧವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಈ ತಾರತಮ್ಯ ನಿಲ್ಲಬೇಕು. ಕನ್ನಡದ ಮಕ್ಕಳಿಗೆ ಆಗುತ್ತಿರುವ ಅನ್ಯಾಯ ತಪ್ಪಬೇಕು ಎಂದಿದ್ದಾರೆ. ಆಗಸ್ಟ್ 27ರಂದು ಕೆ.ಪಿ.ಎಸ್.ಸಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಮನಗಂಡು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುಪರೀಕ್ಷೆಗೆ ಆದೇಶಿಸಿದ್ದಾರೆ. ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತದೆ. ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡ ನಾಡು ನುಡಿ, ಕನ್ನಡಿಗರ ಬದುಕಿನ ವಿಷಯದಲ್ಲಿ ಸಿದ್ಧರಾಮಯ್ಯ ಅವರು ಬದ್ಧತೆ, ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದಾರೆ. ಕನ್ನಡ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿದ್ದಾರೆ. ಮರುಪರೀಕ್ಷೆ ನಡೆಸದೇ ಇದ್ದಿದ್ದರೆ ಕನ್ನಡದ ಮಕ್ಕಳಿಗೆ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ: ಕೆಪಿಎಸ್‌ಸಿ ಇನ್ನೆರಡು ತಿಂಗಳಲ್ಲಿ ಮರುಪರೀಕ್ಷೆ ನಡೆಸಲಿದೆ. ಆದರೆ, ಈ ಮರಿಪರೀಕ್ಷೆಯಲ್ಲೂ ದೋಷ ಆಗದಂತೆ ನಿಗಾ ವಹಿಸಬೇಕು. ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಪತ್ರಿಕೆ ಸಿದ್ಧಪಡಿಸಬೇಕು. ಯಾವುದೇ ಕಾರಣಕ್ಕೂ ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಕನ್ನಡಕ್ಕೆ ಅನುವಾದಿಸಬಾರದು. ಯಾವುದೇ ದೋಷ ಇರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕಳೆದ ಬಾರಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ 106 ಅಭ್ಯರ್ಥಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಕೇವಲ 10 ಮಂದಿ ಮಾತ್ರ. ಉಳಿದ ಶೇ 90ರಷ್ಟು ಮಂದಿ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದರೂ ಆಯ್ಕೆಯಾಗುವುದು ಮಾತ್ರ ಶೇ 10ಕ್ಕೂ ಕಡಿಮೆ. ಈ ವ್ಯತ್ಯಾಸ ಯಾಕೆ? ಇದರ ಹಿಂದಿನ ಶಕ್ತಿಗಳು ಯಾವುವು? ಎಂದು ಪ್ರಶ್ನಿಸಿದ್ದಾರೆ.
ಕೆಪಿಎಸ್‌ಸಿ ಭ್ರಷ್ಟಾಚಾರದ ಕೂಪವಾಗಿದೆ. ಅದಕ್ಕೆ ದೊಡ್ಡ ಸರ್ಜರಿಯಾಗಬೇಕಿದೆ. ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಬೇಕು. ಆಗಸ್ಟ್ 27ರ ಪರೀಕ್ಷೆಯಲ್ಲಿ ಆದ ಸಮಸ್ಯೆಗೆ ಕಾರಣರಾದವರನ್ನು ಕೂಡಲೇ ಅಮಾನತು ಮಾಡಿ, ಅವರ ಮೇಲೆ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು. ಹುದ್ದೆಗಳ ಮಾರಾಟ ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಎಸ್‌ಸಿಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆ ಸಂದರ್ಭದಲ್ಲೇ ಮರುಪರೀಕ್ಷೆಗೆ ಆದೇಶ ಹೊರಡಿಸಿರುವುದು ನನ್ನ ಗಮನಕ್ಕೆ ಬಂದಿತು. ನಮ್ಮ ಹೋರಾಟ ಯಶಸ್ವಿಯಾಗಿದೆ.
ಇನ್ನು ಮುಂದೆಯೂ ಕೆಪಿಎಸ್‌ಸಿ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಕನ್ನಡ ಮಾಧ್ಯಮದವರಿಗೆ ಆದ್ಯತೆ ಇರಬೇಕು, ಅವರಿಗೆ ಅನ್ಯಾಯ ಆಗಕೂಡದು. ಕನ್ನಡದ ಮಕ್ಕಳಿಗೆ ತೊಂದರೆ ಆದರೆ ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಅವರೊಂದಿಗೆ ನಾವು ಎಂದೆಂದಿಗೂ ಇದ್ದೇ ಇರುತ್ತೇವೆ ಎಂದು ಅಭಯ ನೀಡಿದ್ದಾರೆ.












Click it and Unblock the Notifications