• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಇಎಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಎಂ ಗೆ ಕರವೇ ನಾರಾಯಣಗೌಡ ಪತ್ರ

|
Google Oneindia Kannada News

ಬೆಂಗಳೂರು,ಡಿಸೆಂಬರ್ 8: ಬೆಳಗಾವಿ ವಿವಾದವನ್ನು ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆಗಳ ಮೇಲೆ, ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

ಎಂಇಎಸ್, ಶಿವಸೇನೆ ಗೂಂಡಾಗಳಿಗೆ ಕಡಿವಾಣ ಹಾಕಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಾವು ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತೆ ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ತಮಗೆ ತಿಳಿದಿರುವಂತೆ ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಕರ್ನಾಟಕ ಅನೇಕ ಕನ್ನಡದ ಪ್ರದೇಶಗಳನ್ನು ಕಳೆದುಕೊಂಡರೂ ರಾಷ್ಟ್ರೀಯ ಐಕ್ಯತೆಗೆ ಭಂಗ ಬಾರದೆಂದು ಆದ ಅನ್ಯಾಯವನ್ನು ಸಹಿಸಿಕೊಂಡು ಬಂದಿದೆ. ಆದರೆ ಅಪ್ಪಟ ಕನ್ನಡದ ನೆಲವಾದ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ದಶಕಗಳಿಂದ ತಗಾದೆ ತೆಗೆಯುತ್ತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.

ಮಹಾರಾಷ್ಟ್ರದ ಒತ್ತಡದಿಂದಲೇ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಮೆಹರ್ ಚಂದ್ ಮಹಾಜನ್ ಅವರ ಏಕಸದಸ್ಯ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ತೀರ್ಪು ನೀಡಿದೆ. ಆದರೆ ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳು ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷದ ವಾತಾವರಣವನ್ನು ನಿರ್ಮಿಸಲು ಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಭಾಷಾಂಧ ಗೂಂಡಾ ಸಂಘಟನೆಗೆ ಹಣಕಾಸಿನ ಬೆಂಬಲ ನೀಡಿ ಗಡಿಭಾಗದಲ್ಲಿ ದಾಂಧಲೆ ನಡೆಸಲು, ಕನ್ನಡಿಗರ ಮೇಲೆ ದಾಳಿ ನಡೆಸಲು ಕಾರಣರಾಗಿದ್ದಾರೆ.

ಬೆಳಗಾವಿ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಈ ನೆಲದ ಕಾನೂನಿಗೆ ಗೌರವ ನೀಡಿ, ತೀರ್ಪಿಗಾಗಿ ಕಾಯುವ ಬದಲು ಬೆಳಗಾವಿಯಲ್ಲಿ ಸಂಘರ್ಷ ಮೂಡಿಸಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಹೋರಾಡುತ್ತ ಬಂದಿದ್ದು, ಬೆಳಗಾವಿಯಲ್ಲಿ ಶಾಂತಿಸ್ಥಾಪನೆ ದೃಷ್ಟಿಯಿಂದ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂಬ ಒತ್ತಾಯವನ್ನು ಮಂಡಿಸುತ್ತ ಬಂದಿದೆ.

Karave narayana gowda writes letter to cm basavaraj bommai requesting to take action against MES

ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ವಿನಾಕಾರಣ ದೌರ್ಜನ್ಯವೆಸಗಲಾಗುತ್ತಿದೆ. ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿಗಳಾಗುತ್ತಿವೆ. ಕನ್ನಡಿಗರು ಕಟ್ಟಿದ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ಎಸಗಲಾಗುತ್ತಿದೆ. ಕನ್ನಡಿಗರ ಮೇಲಿನ ದಾಳಿ-ದೌರ್ಜನ್ಯಗಳು ಭಯೋತ್ಪಾದನೆಗೆ ಸಮನಾದ ಹೇಯಕೃತ್ಯಗಳಾಗಿರುತ್ತವೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ.

ಮಹಾರಾಷ್ಟ್ರದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಕನ್ನಡಿಗರ ವಿರುದ್ಧ ನಡೆಯುತ್ತಿರುವ ದಾಳಿಗಳಿಗೆ ಪ್ರಚೋದನೆ ನೀಡುತ್ತಿವೆ. ಶಿವಸೇನೆಯ ಎರಡೂ ಬಣಗಳು ಮತ್ತು ಎನ್ ಸಿಪಿ, ಎಂ.ಎನ್.ಎಸ್ ಪಕ್ಷಗಳು ವಿಶೇಷವಾಗಿ ಈ ಕುಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿವೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಮಾನ್ಯ ಮುಖ್ಯಮಂತ್ರಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು, ಈ ಕುರಿತು ಪ್ರಧಾನ ಮಂತ್ರಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಅದೇ ರೀತಿ ತಡಮಾಡದೇ ಬೆಳಗಾವಿಯಲ್ಲಿ ಶಾಂತಿ ಕದಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಿ, ಅದರ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಪತ್ರ ಬರೆದಿದ್ದಾರೆ.

English summary
Karave narayana gowda writes letter to cm basavaraj bommai requesting to take action against MES,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X