ಮಸೀದಿ, ಮದರಸಾಗಳಲ್ಲಿ ಕನ್ನಡದಲ್ಲೇ ಪ್ರವಚನ: ಕರವೇ ನಾರಾಯಣಗೌಡ
ಮಸೀದಿ ಹಾಗೂ ಮದರಸಾಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಮುಖ್ಯ ವಾಹಿನಿಗೆ ಬಂದು, ಈ ನೆಲದ ಮಕ್ಕಳಾಗಿ ತನ್ನ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂಬ ಒಂದು ಅಭಿಯಾನ ಆರಂಭಿಸಿದಾಗಿನಿಂದ ನನಗೆ ಅತ್ಯಂತ ಸಕಾರಾತ್ಮಕ ಸ್ಪಂದನೆಗಳೇ ಕಂಡುಬಂದಿವೆ. ಬೆಂಗಳೂರಿನ ಸುಪ್ರಸಿದ್ಧ ಜಾಮೀಯಾ ಮಸೀದಿ ಭೇಟಿಯ ನಂತರ ಮತ್ತಿಕೆರೆಯ ಮಸ್ಜಿದ್ ಏ ತಾಹಗೆ ನಾನು ಭೇಟಿ ನೀಡಿದೆ. ಇದೊಂದು ಹೃದಯಸ್ಪರ್ಶಿ ಅನುಭವವಾಗಿತ್ತು. ಮಸೀದಿಯ ಒಳಗೆ ಪ್ರವೇಶಿಸುತ್ತಿದ್ದಂತೆ ಕನ್ನಡದ ವಾತಾವರಣವನ್ನು ಎದುರುಗೊಂಡೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಸೀದಿಯಲ್ಲಿ ಕನ್ನಡ ಕಲಿಕಾ ಕೇಂದ್ರ
ಅಲ್ಲಿ ಪವಿತ್ರ ಕುರಾನ್ ಶ್ಲೋಕಗಳನ್ನು ಕನ್ನಡದಲ್ಲಿ ಅನುವಾದಿಸಿ ಬರೆಯಲಾಗಿತ್ತು. ಅಲ್ಲಿನ ಗೋಡೆಗಳ ಮೇಲೆ ಕನ್ನಡದ ಬರಹಗಳು, ಅದರಲ್ಲೂ ಸೌಹಾರ್ದದ ಸಂದೇಶ ಸಾರುವ ಸಾಲುಗಳು. ಅಲ್ಲಿ ಕನ್ನಡ ಕಲಿಕಾ ಕೇಂದ್ರವೂ ಇದೆ. ಒಂದು ಸುಸಜ್ಜಿತ ಗ್ರಂಥಾಲಯವೂ ಇದೆ. ಗ್ರಂಥಾಲಯದಲ್ಲಿ ಬಹುತೇಕ ಕನ್ನಡ ಪುಸ್ತಕಗಳೇ ಇದ್ದವು. ಮಸ್ಜಿದ್-ಏ-ತಾಹಾ ಭೇಟಿಯಂತೂ ನನಗೆ ಸಂಭ್ರಮವನ್ನೇ ತಂದುಕೊಟ್ಟಿತು ಎಂದಿದ್ದಾರೆ.

ಅಖಿಲ ಕರ್ನಾಟಕ ಮೊಹಮ್ಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಮತ್ತು ಮಸೀದಿಯ ಆಡಳಿತ ಮಂಡಳಿಯ ಕನ್ನಡ ಪರ ಧೋರಣೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಬೆಂಗಳೂರು ನಗರ ಮಾಜಿ ಕಸಾಪ ಮಾಜಿ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್ ಮುಸ್ಲಿಂ ಸಮುದಾಯದಲ್ಲಿ ಕನ್ನಡದ ಪ್ರಜ್ಞೆ ಬೆಳೆಸಿದ, ಅದನ್ನು ಆಂದೋಲನವಾಗಿ ರೂಪಿಸಿದ ಸಮೀವುಲ್ಲಾ ಖಾನ್ ಅವರ ನಿಸ್ಪೃಹ ಸೇವೆ, ಹೋರಾಟ ಮನೋಭಾವವನ್ನು ವಿವರಿಸಿದರು ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಪ್ರವಚನ
ತಿಂಗಳ ನಾಲ್ಕು ಶುಕ್ರವಾರಗಳ ಪೈಕಿ ಒಂದು ಶುಕ್ರವಾರ ಎಲ್ಲ ಮಸೀದಿಗಳಲ್ಲಿ ಕನ್ನಡದಲ್ಲಿ ಪ್ರವಚನ ನಡೆಸುವಂತೆ ನಾರಾಯಣಗೌಡ ಮನವಿ ಮಾಡಿದ್ದಾರೆ. ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಿ ನಂತರ ಎರಡು ಶುಕ್ರವಾರಗಳಿಗೆ ವಿಸ್ತರಿಸಲು ಕೋರಿದ್ದೇನೆ ಎಂದಿದ್ದಾರೆ. ಮಸೀದಿಯನ್ನು ಬರೀ ಧಾರ್ಮಿಕ ಕೇಂದ್ರವಾಗಿ ಬೆಳೆಸದೆ, ಸಾಂಸ್ಕೃತಿಕ ಕೇಂದ್ರವಾಗಿ, ಅರಿವಿನ ತಾಣವಾಗಿ, ಬದುಕು ಬೆಳಗುವ ಆಲಯವಾಗಿ ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದೆ. ಕನ್ನಡದ ಅಪ್ರತಿಮ ಹೋರಾಟಗಾರ ದಿ.ರೆಹಮಾನ್ ಖಾನ್ ಅವರನ್ನು ಸ್ಮರಿಸಿಕೊಂಡೆ ಎಂದಿದ್ದಾರೆ.
ಈ ವೇಳೆ ಮಸೀದಿ ಆಡಳಿತ ಮಂಡಳಿಯ ಮುಖ್ಯಸ್ಥ, ಅಖಿಲ ಕರ್ನಾಟಕ ಮಹಮ್ಮದೀಯ ಕನ್ನಡ ವೇದಿಕೆ ಅಧ್ಯಕ್ಷರಾದ ಸಮೀವುಲ್ಲಾ ಖಾನ್, ಮಸ್ಜಿದ್ ಎ ತಾಹಾ ಆಡಳಿತ ಮಂಡಳಿ ಪದಾಧಿಕಾರಿಗಳಾದ ಷಹಜಹಾನ್, ಸಾಗರ್ ಸಮೀವುಲ್ಲ, ಬೈತುಲ್ ಮಾನ ಕಮಿಟಿಯ ಮುಖ್ಯಸ್ಥರಾದ ನಜೀರ್ , ಕಾರ್ಯದರ್ಶಿ ಚಾಂದ್, ಉಪಾಧ್ಯಕ್ಷರಾದ ಅಮೀರ್, ಜನಪದ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಹಿದಾಯತ್ ಮತ್ತಿತರೆ ಹಿರಿಯ ನಾಯಕರು, ಯುವ ಮುಖಂಡರು ನಮ್ಮನ್ನು ಅತ್ಯಂತ ಆದರದಿಂದ ಸತ್ಕರಿಸಿದರು. ನನ್ನೊಂದಿಗೆ ಕರವೇ ರಾಜ್ಯ ಉಪಾಧ್ಯಕ್ಷ ಹಯಾತ್ ಕಾರ್ಗಲ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಧರ್ಮರಾಜ್ ಗೌಡ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ವೇತ ಗೌಡ ಇದ್ದರು.












Click it and Unblock the Notifications