ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಜೋಡುಕರೆ ಕಂಬಳ
ಬೆಂಗಳೂರು, ಆಗಸ್ಟ್ 07: ಕರಾವಳಿಯ ಜನಪ್ರಿಯ ಕ್ರೀಡೆಗಳು, ಆಚರಣೆಗಳು ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕಾಲಿಟ್ಟಿವೆ. ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ಸಾಂಕ್ಕೃತಿಕ ಕಾರ್ಯಕ್ರಮಗಳನ್ನು ಕೇವಲ ಕರಾವಳಿಯಲ್ಲಿ ಅಲ್ಲದೇ ಬೆಂಗಳೂರಿನಲ್ಲೂ ಪ್ರದರ್ಶನಗೊಳ್ಳುತ್ತಿದೆ. ಇದರ ಜೊತೆಗೆ ಬೆಂಗಳೂರು ಹಾಗೂ ತುಳುನಾಡಿನ ನಂಟಿನ ಇನ್ನೊಂದು ಐತಿಹಾಸಿಕ ಕ್ಷಣಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಲಿದೆ.
ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಕಂಬಳ ಆಯೋಜಿಸಬೇಕು ಎನ್ನುವ ಕನಸಿಗೆ ಹೊಸ ರೆಕ್ಕೆ ಬಂದಿದೆ. ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸುವ ಚಿಂತನೆ ನಡೆದಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ಆರಂಭಗೊಂಡಿದೆ. ಈ ಕಂಬಳಕ್ಕ 'ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ' ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ತುಳು ಕೂಟ ಈ ಬಾರಿ ಸುವರ್ಣ ಸಂಭ್ರಮದಲ್ಲಿದ್ದು, ಇದರ ಸವಿ ನೆನಪಿಗಾಗಿ 'ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ' ಆಯೋಜನೆಗೆ ನಿರ್ಧರಿಸಲಾಗಿದೆ. ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ರೂವಾರಿ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಬೆಂಗಳೂರು ಕಂಬಳದ ಸಿದ್ಧತೆ ನಡೆಯುತ್ತಿದೆ.
ಇನ್ನು ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದ್ದು, ಸ್ಥಳ ಪರಿಶೀಲನೆ ಕೂಡ ನಡೆದಿದೆ. ಕಂಬಳಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದ್ದು, ಏಕಕಾಲದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಕಂಬಳ ವೀಕ್ಷಿಸುವಂತೆ ಅನುಕೂಲ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಹೀಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ' ನಡೆಯಲಿದೆ. ಕಂಬಳ ಕ್ರೀಡೆ ಸಾಮಾನ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬಳಿಕ ಕಂಬಳ ಕ್ರೇಜ್ ಇನ್ನಷ್ಟು ಜಾಸ್ತಿ ಆಗಿದೆ.

ಈ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದ್ದು, ನವೆಂಬರ್‌ನಲ್ಲಿ ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ ಆಯೋಜನೆಗೆ ಚಿಂತನೆ ನಡೆದಿದೆ. ಅರಮನೆಯ ಮೈದಾನದ ಪಕ್ಕದಲ್ಲೇ ಕೆರೆಯಿದ್ದು, ಅದರ ನೀರನ್ನು ತಪಾಸಣೆಗೆ ಲ್ಯಾಬ್‌ಗೆ ಕಳುಹಿಸಲಾಗಿದೆ. ನಮ್ಮ ಕಂಬಳ ಹಿರಿಮೆಯನ್ನು ರಾಜ್ಯ, ದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿಆಯೋಜಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.












Click it and Unblock the Notifications