ಕಳಸಾ ಬಂಡೂರಿ ಯೋಜನೆ ವಿಸ್ತೃತ ವರದಿ ನೀಡಲು ಕೇಂದ್ರದ ಅನುಮತಿ
ಬೆಂಗಳೂರು, ಡಿಸೆಂಬರ್ 29: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಗುರುವಾರ ಟ್ವಿಟ್ ಮಾಡಿದ್ದು, ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಜೋಶಿ ಧನ್ಯವಾದಗಳು ತಿಳಿಸಿದ್ದಾರೆ.
ಈ ಹಿಂದೆ ಕಳಸಾ ಬಂಡೂರಿ ಯೋಜನೆಗೆ ನಾವು ಹೋರಾಟ ಮಾಡಿದ್ದೇವೆ. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವೂ ಅತ್ಯಂತ ಶ್ರಮ ಹಾಕಿದೆ. ನಾನು ಬಸವರಾಜ ಬೊಮ್ಮಾಯಿ, ಗೋವಿಂದ್ ಕಾರಜೋಳ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರದ ಅನುಮೋದನಾ ಪತ್ರವನ್ನು ಸಚಿವರು ಟ್ವಿಟ್ ಮಾಡಿದ್ದು, ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳನ್ನೊಳಗೊಂಡ ಮಹಾದಾಯಿ ನದಿಪಾತ್ರದಲ್ಲಿ 2032 ಚದರ ಅಡಿ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ ಗೋವಾ 1580, ಕರ್ನಾಟಕ 375, ಮಹಾರಾಷ್ಟ್ರ 77 ಚಕಿಮೀ ಪಾಲು ಹೊಂದಿವೆ. 2010ರ ನವೆಂಬರ್ 16ರಂದು ನದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಕರಣ ರಚಿಸಲಾಗಿದೆ. 2018ರ ಆಗಸ್ಟ್ 14ರಂದು ವರದಿ ಸಲ್ಲಿಕೆಯಾಗಿದೆ. ಪರಿಸರ ಸಂರಕ್ಷಣೆ ಮತ್ತು ಇತರ ನಿಯಮಗಳನ್ನು ಪಾಲಿಸಿ ಮಹದಾಯಿಯಿಂದ 2.18ಟಿಎಂಸಿ ನೀರನ್ನು ಬಂಡೂರ ಮತ್ತು 1.7 ಟಿಎಂಸಿ ನೀರನ್ನು ಕಳಸಾ ಅಣೆಕಟ್ಟಿಗೆ ಹಂಚಿಕೆ ಮಾಡಲಾಗಿದೆ.
ಕಳಸಾ ಭಂಡೂರಿ ಯೋಜನೆಯ ಅನುಮೋದನೆಗಾಗಿ ರಚನಾತ್ಮಕ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿಗಳಾದ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರಕ್ಕೆ , ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP ವರಿಗೆ ಹಾಗೂ ರಾಜ್ಯದ ನೀರಾವರಿ ಸಚಿವರಾದ ಶ್ರೀ @GovindKarjol ಅವರಿಗೂ ಅನಂತ ಧನ್ಯವಾದಗಳು. pic.twitter.com/xaItc0ndQF
— Pralhad Joshi (@JoshiPralhad) December 29, 2022
ಇದರೊಂದಿಗೆ ಉತ್ತರ ಕರ್ನಾಟಕದ ಬಹುಬೇಡಿಕೆಯ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ ಡಿಪಿಆರ್ ವರದಿಗೆ ಜಲ ಆಯೋಗದಿಂದ ಅನುಮತಿ ಸಿಕ್ಕಿದ್ದು, ಧಾರವಾಡ, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳ ಜನರಿಗೆ ಇದು ಶುಭ ಸುದ್ದಿ ಆಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನ ಭೇಟಿಯಾಗಿದ್ದರು.
ಜನವರಿ 2 ರಂದು ಮಹದಾಯಿ ವಿಚಾರವಾಗಿ ಬೃಹತ್ ಸಮಾವೇಶ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಆದರೆ ಈಗ ಕಾಂಗ್ರೆಸ್ ಸಮಾವೇಶಕ್ಕೂ ಮುನ್ನವೇ ಯೋಜನೆ ವರದಿಗೆ ಅನುಮೋದನೆ ದೊರೆತಂತಾಗಿದೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ.












Click it and Unblock the Notifications