BJP VS VJP :ವಿಜಯೇಂದ್ರ ವಿರುದ್ಧ ಸಿಡಿದೆದ್ದ ವಿರೋಧಿ ಬಣ: ಮೋದಿ, ಅಮಿತ್ ಶಾ ಭೇಟಿ
ಬೆಂಗಳೂರು, ಜನವರಿ 30: ರಾಜ್ಯ ಕಮಲ ಪಾಳಯದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಳಿಕ ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹಾಗೂ ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಏಕಪಕ್ಷೀಯ ನಿರ್ಧಾರದಿಂದ ವಿರೋಧಿ ಬಣ ಸಿಡಿದೆದಿದ್ದು, ವಿಜಯೇಂದ್ರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲು ವಿರೋಧಿ ಬಣ ಮುಂದಾಗಿದೆ. ಈ ಕುರಿತು ಸಂಸದ ಡಾ.ಕೆ ಸುಧಾಕರ್ ಮಾಹಿತಿಯನ್ನ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬಳಿಗೆ ಹೋಗಿ ಎಲ್ಲವನ್ನೂ ಹೇಳುತ್ತೇನೆ. ವಿಜಯೇಂದ್ರ ಯಾವ ರೀತಿ ಪಕ್ಷ ಸಂಘಟಿಸುತ್ತಿದ್ದಾರೆ ಎಂದು ವಾಸ್ತವಾಂಶ ತಿಳಿಸುತ್ತೇನೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವವೇ ಬೇರೆ ರೀತಿಯಲ್ಲಿದೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ತಂದೆಯವರ ಯಾವುದೇ ಗುಣ ವಿಜಯೇಂದ್ರ ಅವರಿಗೆ ಬಂದಿಲ್ಲ. ನಾನು ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ. ನಾನು ಬಿಜೆಪಿಗೆ ಬಂದಿದ್ದಕ್ಕೆ ನನಗೆ ಈ ರೀತಿಯ ಪರಿಸ್ಥಿತಿಯನ್ನು ತಂದಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ನಡೆದಿದೆ. ಅನೇಕರು ಆ ಬಗ್ಗೆ ಮಾತಾಡುತ್ತಿಲ್ಲ. ವಿಜಯೇಂದ್ರ ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಇವರ ಅಹಂಕಾರಕ್ಕೆ, ಧೋರಣೆಗೆ ನನ್ನ ಧಿಕ್ಕಾರ. ಇವರ ಧೋರಣೆಯನ್ನು ಸರಿಪಡಿಸಿ, ಇಲ್ಲವಾದರೆ ಇವರನ್ನೇ ಬದಲಾಯಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಅನೇಕ ಸಂಸದರು ಅವರ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಇತಿಶ್ರೀ ಹಾಡಬೇಕೆಂಬ ಕಾರಣಕ್ಕೆ ಎಲ್ಲರೂ ಪತ್ರ ಬರೆದು ವರಿಷ್ಠರಿಗೆ ಕಳುಹಿಸುತ್ತೇವೆ. ನನ್ನನ್ನು ಬಳಸಿಕೊಂಡು ಕೈ ಬಿಡುತ್ತಾರೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೂ ನಾನು ನಂಬಿ ಬಿಜೆಪಿಗೆ ಬಂದಿದ್ದಕ್ಕೆ ಈ ರೀತಿ ಮಾಡಿದ್ದಾರೆ. ಆದರೆ ಜನರು ನನ್ನ ಜೊತೆಗಿದ್ದಾರೆ ಎಂದು ಡಾ.ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಉತ್ತಮವಾಗಿ ನಡೆದಿದೆ. ನಮ್ಮ ಕಾರ್ಯಕರ್ತರು 58 ಸಾವಿರ ಜನರನ್ನು ನೋಂದಣಿ ಮಾಡಿಸಿದ್ದಾರೆ. ಪಕ್ಷಕ್ಕಾಗಿ ಅಹರ್ನಿಶಿಯಾಗಿ ದುಡಿದವರನ್ನು ಕೈ ಬಿಟ್ಟು, ವಿರುದ್ಧವಾಗಿ ಕೆಲಸ ಮಾಡಿದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕಬಳ್ಳಾಪುರದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿಲ್ಲ. 13 ಜಿಲ್ಲೆಗಳ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ಪಟ್ಟಿ ಪ್ರಕಟ ಮಾಡಲಾಗಿದೆ. ನಾನು ಹೇಳಿದವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ನಾನು ಕಾರ್ಯಕರ್ತರಿಗೆ ಏನೆಂದು ಉತ್ತರ ನೀಡಲಿ? ಎಂದು ಪ್ರಶ್ನೆ ಮಾಡಿದರು.
ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾತನಾಡಲು ಬಿ.ವೈ.ವಿಜಯೇಂದ್ರ ಅವರಿಗೆ ಫೋನ್ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಭೇಟಿ ಮಾಡಲು ಸಮಯ ಕೂಡ ನಿಗದಿ ಮಾಡಲಿಲ್ಲ. ಹಿರಿಯ ಮುಖಂಡರು ಕೂಡ ಮಾತನಾಡಲು ಭೇಟಿಗೆ ಅವಕಾಶ ನೀಡುತ್ತಾರೆ. ಆದರೆ ಇಲ್ಲಿ ಸಮಾಲೋಚನೆಯೇ ಇಲ್ಲ. ಇದೇನು ವಿಜಯೇಂದ್ರ ಅವರ ಸ್ವಂತ ಆಸ್ತಿಯೇ? ಬಯಲುಸೀಮೆಯ ಭಾಗಕ್ಕೆ ಬಂದು ಒಂದು ಸೀಟು ಗೆಲ್ಲಲಿ ಎಂದು ಸವಾಲು ಹಾಕಿದರು.
ನಾನು ಪಕ್ಷಕ್ಕಾಗಿ ಶ್ರಮಿಸಿದ್ದರೂ ನನ್ನನ್ನು ಸಮಾಧಿ ಮಾಡಲು ಪ್ರಯತ್ನ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲಸ ಮಾಡಿದವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಗೋವಿಂದ ಕಾರಜೋಳ ಅವರಿಗೆ ಹೊಡೆಯಲು ಬಂದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಯಾವುದೇ ಮುಖಂಡರಿಗೆ ಇವರು ಗೌರವ ನೀಡುತ್ತಿಲ್ಲ ಎಂದರು.
ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಎಲ್ಲರ ಅಭಿಪ್ರಾಯ ಕೇಳಬೇಕು. ಆದರೆ ಏಕಚಕ್ರಾಧಿಪತ್ಯ ಎನ್ನುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನ್ನ ಮಾತೇ ನಡೆಯಬೇಕೆಂಬಂತೆ ವರ್ತಿಸಿದ್ದಾರೆ. ಜೀ ಹುಜೂರ್, ಯೆಸ್ ಬಾಸ್ ಎನ್ನುವವರನ್ನು ಪದಾಧಿಕಾರಿಗಳಿಗೆ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಿಗೆ ತಿಳಿಸಿದ್ದೇನೆ. ಎಷ್ಟೇ ನೋವಾದರೂ ನಾನು ಪಕ್ಷದ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಬಂದು ಮಾತನಾಡಿಲ್ಲ ಎಂದರು.
ಈಗಿನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಧೋರಣೆ ಅನೇಕ ಮುಖಂಡರಿಗೆ ನೋವು ತಂದಿದೆ. ಕೇಂದ್ರದ ನಾಯಕರು ಅವರಿಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರಲ್ಲಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾರೆಯೇ ಅಥವಾ ಅದಕ್ಕೂ ಮೇಲಿನ ಹುದ್ದೆಯಲ್ಲಿದ್ದಾರೆಯೇ ಎಂದು ಗೊತ್ತಿಲ್ಲ. ನಾನು ಎಂಟು ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯನಾಗಿದ್ದೇನೆ. ಕಾಂಗ್ರೆಸ್ ಆಡಳಿತ ಇದ್ದಾಗಲೂ ನಾನು ಇಲ್ಲಿ ಗೆದ್ದಿದ್ದೇನೆ. ಇವರ ಹಿಂಬಾಲಕರು ನನ್ನನ್ನು ಸೋಲಿಸಲು ಯತ್ನಿಸಿದ್ದರು. ಆದರೆ ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಇನ್ನು ಸಮಾಧಾನ ಇಲ್ಲ, ಇನ್ನೇನಿದ್ದರೂ ಯುದ್ಧ ಎಂದರು.












Click it and Unblock the Notifications