ಲೋಕಾಯುಕ್ತ ಹುದ್ದೆಗೆ ವಿಕ್ರಂಜಿತ್ ಸೇನ್ ಹೆಸರು
ಬೆಂಗಳೂರು, ಜನವರಿ 05 : ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಮತ್ತು ಎಸ್.ಆರ್.ನಾಯಕ್ ಅವರ ಹೆಸರುಗಳು ಕೇಳಿಬರುತ್ತಿವೆ. ಲೋಕಾಯುಕ್ತ ನೇಮಕದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಪಾಲ್ಗೊಂಡಿದ್ದರು. [ನ್ಯಾ.ವಿಕ್ರಂಜಿತ್ ಸೇನ್ ನೂತನ ಲೋಕಾಯುಕ್ತ?]

ನ್ಯಾಯಮೂರ್ತಿ ವೈ. ಭಾಸ್ಕರರಾವ್ ರಾಜೀನಾಮೆಯಿಂದ ತೆರವಾಗಿರುವ ಲೋಕಾಯುಕ್ತ ಹುದ್ದೆಗೆ ಯಾರನ್ನು ನೇಮಿಸಬೇಕು? ಎಂಬ ಬಗ್ಗೆ ಚರ್ಚೆ ನಡೆಯಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅವರನ್ನು ನೇಮಿಸುವಂತೆ ವಿರೋಧ ಪಕ್ಷದ ನಾಯಕರು ಮತ್ತು ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಸಲಹೆ ನೀಡಿದರು.[ಕರ್ನಾಟಕ ಲೋಕಾಯುಕ್ತ ಹಗರಣದ Timeline]
ಸಭೆಯ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ನಾನು ಮತ್ತು ಈಶ್ವರಪ್ಪ ಹಾಗೂ ಶಂಕರಮೂರ್ತಿ ಅವರು ವಿಕ್ರಂಜಿತ್ ಸೇನ್ ಅವರ ಹೆಸರನ್ನು ಪ್ರಸ್ತಾಪಿಸಿದ್ದೇವೆ. ಕಾಗೋಡು ತಿಮ್ಮಪ್ಪ ಅವರು ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರ ಹೆಸರು ಪ್ರಸ್ತಾಪಿಸಿದರು' ಎಂದು ತಿಳಿಸಿದರು. [ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಹೆಸರು?]
ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಲು ನಿರಾಕರಿಸಿದರು. ವಿಕ್ರಂಜಿತ್ ಸೇನ್ ಅವರ ಹೆಸರನ್ನು ಸರ್ಕಾರ ಪರಿಗಣಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿರುವ ವಿಕ್ರಂಜಿತ್ ಸೇನ್ ಅವರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. 2015ರ ಡಿಸೆಂಬರ್ 30ರಂದು ಅವರು ನಿವೃತ್ತರಾಗಿದ್ದಾರೆ.












Click it and Unblock the Notifications