ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯಾದ್ಯಂತ ಏಕಕಾಲಕ್ಕೆ 'ಶಕ್ತಿ'ಗೆ ಚಾಲನೆ : ಸಿದ್ದರಾಮಯ್ಯ
ಬೆಂಗಳೂರು, ಜೂನ್ 9: ಕನ್ನಡ ನಾಡಿನ ಅರ್ಧದಷ್ಟಿರುವ ಮಹಿಳಾ ಸಮೂಹದ ಪಾಲಿನ 'ಶಕ್ತಿ' ಯೋಜನೆಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು ಈ ಕುರಿತು ಸಚಿವರು ಮತ್ತು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ ಜೂನ್ 11 ರಂದು ಸಮಸ್ತ ಕನ್ನಡಿಗರಿಗೆ ಸಮರ್ಪಣೆ ಆಗಲಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ, ಹಣದುಬ್ಬರದ ಕಾರಣಕ್ಕೆ ಸಂಕಷ್ಟಕ್ಕೆ ತುತ್ತಾಗಿರುವ ಕನ್ನಡ ನಾಡಿನ ಮಹಿಳಾ ಸಮೂಹಕ್ಕೆ ಕೊಂಚ ನಿರಾಳ ನೀಡುವ ಶಕ್ತಿ ಯೋಜನೆಯ ಚಾಲನೆ ಅತ್ಯಂತ ಅರ್ಥಪೂರ್ಣವಾಗಿ ನಡೆಸಬೇಕು.

ಸರ್ಕಾರ ತನ್ನ ಮೇಲೆ ಬೀಳುವ ಆರ್ಥಿಕ ಹೊರೆಯ ಹೊರತಾಗಿಯೂ ಜನ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳ ಒಳಗೇ ಜಾರಿಗೆ ತರುತ್ತಿದೆ. ಯಾವುದೇ ಜಾತಿ, ಧರ್ಮದ ಮಿತಿಗೆ ಒಳಪಡದ ಶಕ್ತಿ ಯೋಜನೆಯ ಅನುಕೂಲ ಅರ್ಹರಿಗೆಲ್ಲಾ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಮತ್ತು ಶಾಸಕರುಗಳಿಗೆ ಸೂಚನೆ ನೀಡಿದ್ದಾರೆ.
ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು. ನೇಮಕವಾದ ತಕ್ಷಣ ಎಲ್ಲಾ ಸಚಿವರೂ ಕಾರ್ಯೋನ್ಮುಖರಾಗಿ ಯೋಜನೆಯ ಅರ್ಥಪೂರ್ಣ ಚಾಲನೆ ನೀಡಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಾನು ಯೋಜನೆಗೆ ಚಾಲನೆ ನೀಡುತ್ತೇನೆ. ಅದೇ ಹೊತ್ತಲ್ಲಿ ಶಾಸಕರು ಮತ್ತು ಜಿಲ್ಲಾ ಸಚಿವರುಗಳು ತಮ್ಮ ತಮ್ಮ ಜಿಲ್ಲೆ ಮತ್ತು ಕ್ಷೇತ್ರಗಳಲ್ಲಿ ಯೋಜನೆಗೆ ಚಾಲನೆ ನೀಡಬೇಕು ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ
ರಾಜ್ಯದ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಅಭಾವದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹಿರಿಯ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚೆ ನಡೆಸಿದರು.
ರಾಜ್ಯದ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಕಳೆದ ವಾರವೇ ನೀಡಿರುವ ಸೂಚನೆ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಮತ್ತು ಸಿದ್ಧತೆಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕು ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಈ ಸಂಬಂಧ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿರುವ ಪ್ರಕರಣಗಳು ವರದಿ ಆಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ












Click it and Unblock the Notifications