ನ್ಯಾಯಾಧೀಶರು ಮೊಘಲರಂತೆ ವರ್ತಿಸುವ ಕಾಲವಲ್ಲ: ಹೈಕೋರ್ಟ್
ಬೆಂಗಳೂರು, ಜೂನ್ 12: ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರಂತೆ ವರ್ತಿಸುವಂತಿಲ್ಲ ಎಂದು ಹೈಕೋರ್ಟ್ ಸೂಚ್ಯವಾಗಿ ಹೇಳಿದೆ. ಅಲ್ಲದೆ, ಕಾನೂನು ಅಡಿಯಲ್ಲಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದ್ದರೂ 20 ವರ್ಷ ವಿಸ್ತರಿಸಲು ನಿರ್ಧರಿಸಿರುರುವ ಏಕಸದಸ್ಯಪೀಠದ ಆದೇಶ ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದೆ.
ಚನ್ನಪಟ್ಟಣದ ಅಂಗವಿಕಲರೊಬ್ಬರಿಗೆ 12 ವರ್ಷ ಅವಧಿಗೆ ನೀಡಿದ್ದ ಗುತ್ತಿಗೆಯನ್ನು 20 ವರ್ಷಕ್ಕೆ ವಿಸ್ತರಿಸಲು ಸೂಚಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಾದ ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ ಗುತ್ತಿಗೆಯನ್ನು ಸಿದ್ದರಾಮು ಎಂಬುವವರಿಗೆ ವಿಕಲಚೇತನರ ಕಾಯ್ದೆಯಡಿ ಅಸಾಮರ್ಥ್ಯದ ನಿರ್ದಿಷ್ಟ ಆಧಾರದ ಮೇಲೆ ನೀಡಿರುವುದನ್ನು ಗಮನಿಸಿತು. ಮುಂದುವರಿದು ಪ್ರಕರಣ ಸಂಬಂಧ ಏಕಸದಸ್ಯ ಪೀಠ ಹೊರಡಿಸಿದ ಆದೇಶ ಉದ್ದೇಶಿಸಿ ನ್ಯಾಯಧೀಶರು ಮೊಘಲ್ ಅವರಂತೆ ವರ್ತಿಸುವಂತಿಲ್ಲ. ಕಾನೂನು ವ್ಯಾಪ್ತಿ ಮೀರಿ ನ್ಯಾಯಾಲಯ ಆದೇಶ ಹೊರಡಿಸಬಾರದು.
ಸಾರ್ವಜನಿಕ ಹಿತಾಸಕ್ತಿಯ ಪರಿಗಣಿಸಿ ಕಾನೂನು ಬದ್ಧವಾಗಿ ಆದೇಶ ನೀಡಬೇಕಾಗುತ್ತದೆ. ನ್ಯಾಯ ಒದಗಿಸುವ ನೆಪದಲ್ಲಿ ಕಾನೂನು ಮೀರಿ ಅಧಿಕಾರ ಚಲಾಯಿಸಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಕುರಿತಾಗಿ 2009ರ ಅ. 26 ರಂದು ಸರ್ಕಾರ ಹೊರಡಿಸಿ ಸುತ್ತೋಲೆಯನ್ನು ಉಲ್ಲೇಖಿಸಿ ಗುತ್ತಿಗೆಯನ್ನು ಗರಿಷ್ಠ ಅವಧಿ 12 ವರ್ಷಗಳ ಮಾತ್ರ ನವೀಕರಿಸಲು ಅವಕಾಶವಿದೆ.
ಈ ರೀತಿಯ ಹಂಚಿಕೆಯನ್ನು ಅನುವಂಶೀಯವಾಗಿ ಪರಿಗಣಿಸಲಾಗುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಗೊಳ್ಳುತ್ತದೆ, ಹಾಗಾಗಿ ಪತ್ನಿ ಹಾಗೂ ಮಕ್ಕಳು ಯಾವುದೇ ರೀತಿಯಲ್ಲಿ ಅನುವಂಶೀಯವಾಗಿ ಏನನ್ನೂ ಪಡೆಯುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಷ್ಟೆ ಅಲ್ಲದೆ, 2017ರ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ನಿಯಮಗಳು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ಅವಲಂಬಿಸಿರುವವರು ಕೊನೆಯುಸಿರೆಳೆದ ನಂತರ ಅವರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿಲ್ಲ ಎನ್ನುವುದನ್ನು ಪೀಠ ತಿಳಿಸಿದೆ.
ಜತೆಗೆ ಚನ್ನಪಟ್ಟಣದಲ್ಲಿ ಅಂಗವಿಕಲನಿಗೆ ನೀಡಲಾಗಿದ್ದ ಅಂಗಡಿಯ ಗುತ್ತಿಗೆಯನ್ನು 20 ವರ್ಷ ವಿಸ್ತರಿಸಲು ನಗರಸಭೆಗೆ ಏಕ ಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು. ಅದನ್ನು ಪ್ರಶ್ನಿಸಿ ನಗರಸಭೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಕಾನೂನು ಅಡಿಯಲ್ಲಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದ್ದರೂ 20 ವರ್ಷ ವಿಸ್ತರಿಸಲು ನಿರ್ಧರಿಸಿರುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟ ವಿಭಾಗೀಯ ಪೀಠ, ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿದೆ
ಪ್ರಕರಣದ ಹಿನ್ನೆಲೆ: 2009ರಲ್ಲಿ ಹರಾಜಿನ ಮೂಲಕ ಕೆಲವು ಶಾಪಿಂಗ್ ಆವರಣಗಳ ಗುತ್ತಿಗೆ ಕರೆದು ಸರ್ಕಾರ ಅಧಿಸೂಚನೆಯನ್ನು ಹೊರಡಿಸಿತ್ತು. ಈ ವೇಳೆ ಶೇ. 80 ದೈಹಿಕ ಚಲನಶಕ್ತಿ ಕಳೆದುಕೊಂಡು ಅಂಗವೈಕಲ್ಯ ವ್ಯಕ್ತಿ ಸಿದ್ದರಾಮು ಅವರಿಗೆ ಒಂದು ಅಂಗಡಿ ನೀಡಲಾಯಿತು. 1995ರ ವಿಕಲಚೇತನರ ಕಾಯ್ದೆಯಡಿಯಲ್ಲಿ ಹಾಗೂ 2003ರ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿಯಲ್ಲಿ 12 ವರ್ಷ ಗುತ್ತಿಗೆಗೆ ನೀಡಲಾಯಿತು.
ವಿಫಲವಾದರೆ ಅವರ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದಾಗಿಯೂ ಎಂದು ಕೂಡ ಆದೇಶಿಸಿತ್ತು. ಆದರೆ ಗುತ್ತಿಗೆ ಅವಧಿಯನ್ನು 20 ವರ್ಷಗಳವರೆಗೆ ವಿಸ್ತರಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯ ಅವರ ಮನವಿ ಅಂಗಕರೀಸಿತು. ಈ ಕುರಿತು ಪ್ರಕರಣ ವಿಚಾರಣಾ ಹಂತದಲ್ಲಿ ಇರುವಾಗಲೇ ಸಿದ್ದರಾಮು ನಿಧನರಾದರು ಬಳಿಕ ಅವರ ಮೇಲ್ಮನವಿ ವಿಚಾರಣೆಯನ್ನು ಪತ್ನಿ ಮುಂದುವರಿಸಿದರು.












Click it and Unblock the Notifications