ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಯಿಂದ ರಾಜ್ಯದಲ್ಲಿ ದಿನಕ್ಕೆ 400 ಟನ್ ಆಮ್ಲಜನಕ ಪೂರೈಕೆ
ಬೆಂಗಳೂರು, ಏಪ್ರಿಲ್ 20: ಕೊವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದಿನಕ್ಕೆ 400 ಟನ್ ಆಮ್ಲಜನಕ ಪೂರೈಕೆ ಮಾಡಲು ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿ ಒಪ್ಪಿಕೊಂಡಿದೆ.
ಮಂಗಳವಾರ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ಜೆಎಸ್‌ಡಬ್ಲ್ಯೂ ಸ್ಟೀಲ್ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ನೇತೃತ್ವದ ಪ್ರತಿನಿಧಿಗಳ ಸಭೆ ನಡಸಿದ ಬಳಿಕ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕೊವಿಡ್ -19 ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಪಾರ ಸಂಖ್ಯೆಯ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ದಾಖಲಾದ ರೋಗಿಗಳಿಗೆ ಆಮ್ಲಜನಕದ ಪೂರೈಕೆಯ ಕೊರತೆ ಗಂಭೀರ ಸ್ಥಿತಿಯಲ್ಲಿದೆ ಎಂದು ಕಳವಳ ವ್ಯಕ್ಯಪಡಿಸಿದರು. ಆಮ್ಲಜನಕದ ಕೊರತೆಯಿಂದ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿದೆ. ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಭೆಯಲ್ಲಿ ಮುಂದಿಟ್ಟರು.

ಕೊವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ನಿಭಾಯಿಸಲು ಬೃಹತ್ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಸಭೆಯಲ್ಲಿ ಹಾಜರಿದ್ದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ಅವರು ದಿನಕ್ಕೆ 400 ಟನ್ ಆಮ್ಲಜನಕವನ್ನು ಪೂರೈಸಲು ಸಮ್ಮತಿಸಿದರು. ಈ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ಸರ್ಕಾರಕ್ಕೆ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ನಿರ್ಣಾಯಕ ಹಂತದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಉತ್ಪಾದಿಸಲು ಮತ್ತು ಪೂರೈಸಲು ಉಕ್ಕಿನ ಕಂಪನಿಗಳು ಮುಂದಾಗಿವೆ ಎಂದು ಸಚಿವ ನಿರಣಿ ಹೇಳಿದರು. ಸಾಂಕ್ರಾಮಿಕ ರೋಗವು ನಮ್ಮ ವ್ಯವಸ್ಥೆಗೆ ದೊಡ್ಡ ಸವಾಲುಗಳನ್ನು ಸೃಷ್ಟಿಸಿದೆ. ಇದು ಅನೇಕ ಕುಟುಂಬಗಳಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಮಾರಣಾಂತಿಕ ವೈರಸ್ ಹಿಮ್ಮೆಟ್ಟಿಸಲು ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications