Jog Falls: ಗತವೈಭವಕ್ಕೆ ಮರಳಿದ ವಿಶ್ವ ಪ್ರಸಿದ್ಧ ಜೋಗ ಜಲಪಾತ: ಮುಂದುವರಿದ ಭಾರೀ ಮಳೆ
ಬೆಂಗಳೂರು, ಆಗಸ್ಟ್ 19: ಮಲೆನಾಡಿನ ದಟ್ಟ ಹಸಿರು ಕಾನನ ಹಾಲಿ ನೊರೆಯಂತೆ ಧುಮ್ಮುಕ್ಕಿವ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ನೋಡಗರ ಕಣ್ಮನ ಸಳೆಯುತ್ತಿದೆ. ಎತ್ತರದಿಂದ ಭೋರ್ಗರೆಯುತ್ತಿರುವ ನೀರನ್ನು ನೋಡಲು ಪ್ರವಾಸಿಗರ ದಂಡೆ ಆಗಮಿಸುತ್ತಿದೆ. ನಿರಂತರವಾಗಿ ಸುರಿದ ಮುಂಗಾರು ಮಳೆಯಿಂದ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತಕ್ಕೆ ಜೀವ ಕಳೆ ಬಂದಿದೆ. ಈ ವರ್ಷದಲ್ಲೇ ಮಂಗಳವಾರ ಅತ್ಯಧಿಕ ಪ್ರಮಾಣದಲ್ಲಿ ನೀರು ಬೀಳುತ್ತಿರುವ ನಯನ ಮನೋಹರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಯಿತು.
ಮಲೆನಾಡಿನ ಭಾಗದಲ್ಲಿ ತಿಂಗಳುಗಳಿಂದ ಮುಂಗಾರು ಮಳೆ ಸುರಿಯುತ್ತಲೇ ಇದೆ. ಇಂದಿಗೂ ಮುಂದುವರಿದಿದೆ. ಭಾರೀ ಮಳೆಗೆ ಶರಾವತಿ ನದಿ ಉಕ್ಕಿ ಹರಿಯುತ್ತಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿರುವ ಪ್ರಮುಖ ಜಲಾಶಯವಾದ ಆಲಮಟ್ಟಿಯಿಂದ ಮಂಗಳವಾರ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಯಿತು. ಇದರಿಂದ ಜೋಗ ಜಲಪಾತದಲ್ಲಿ ಅತ್ಯಧಿಕ ಪ್ರಮಾಣದ ನೀರು ಹರಿಯಿತು. ನಿರಂತರ ಮಳೆಗೆ ನದಿ, ಡ್ಯಾಂ, ಜಲಪಾತಗಳು ತುಂಬಿ ಹರಿಯುತ್ತಿವೆ. ಪ್ರವಾಸಿರನ್ನು ತನ್ನತ್ತ ಸೆಳೆಯುತ್ತಿರುವ ಜೋಗ ಜಲಪಾತ ನೋಡಲು ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

11 ಗೇಟ್‌ಗಳಿಂದ ಅಪಾರ ನೀರು ಬಿಡುಗಡೆ
ಹಲವು ದಿನಗಳಿಂದ ಭಾರಿ ಮಳೆ ಮುಂದುವರಿದ ಪರಿಣಾಮ ಶರಾವತಿ ನದಿಯಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಇದರಿಂದ ಅಣೆಕಟ್ಟು ಬಹುತೇಕ ಭರ್ತಿಯಾಗಿದ್ದು, ಅದರ ಒಳಹರಿವು ಸಹ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (KPCL) ಮಂಗಳವಾರ ಡ್ಯಾಂನ ಒಂದೊಂದೇ ಗೇಟ್ ತೆಗೆದು ನೀರು ಬಿಡುಗಡೆ ಮಾಡಿತು. ಮಧ್ಯಾಹ್ನದ ಹೊತ್ತಿಗೆ ಬರೋಬ್ಬರಿ 11 ಗೇಟ್‌ಗಳನ್ನು ತೆಗೆದು ನೀರು ಹೊರ ಬೀಡಲಾಯಿತು. ಸುಮಾರು 15000 ಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಹೀಗಾಗಿ ಜೋಗ ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ಪ್ರಮಾಣ ಹೆಚ್ಚಾಯಿತು.
ಜಲಪಾತದ ನಾಲ್ಕು 'ರಾಜಾ, ರಾಣಿ, ರೋರರ್ ಮತ್ತು ರಾಕೆಟ್' ಕವಲುಗಳಿಂದ ನೀರು ಮೈದುಂಬಿ ಹರಿದ ದೃಶ್ಯ ನೋಡಿದ ಪ್ರವಾಸಿಗರು ಸಂತಗೊಂಡರು. ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೋಗಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಆಗಬೇಕು ಎಂಬ ಕಾರಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾರ್ವಜನಿಕ ಸಾರಿಗೆ ಪ್ಯಾಕೇಜ್‌ಗಳನ್ನು ಈಗಾಲೇ ಘೋಷಿಸಲಾಗಿದೆ.
Jog falls💚#jogfalls pic.twitter.com/aWl05KAk3l
— Kanthesh (@KantheshPg) August 19, 2025
ಹಾವೇರಿ, ಹುಬ್ಬಳ್ಳಿ-ಧಾರವಾಡ ಭಾಗದಿಂದ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಒಂದು ದಿನದಲ್ಲಿ ಜೋಗ ಜಲಪಾತಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿದೆ.












Click it and Unblock the Notifications