ತರಾತುರಿಯಲ್ಲಿ KPSC ಪರೀಕ್ಷೆ ಬೇಡ: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 26: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಸ್ಟ್ 27ರಂದು (ನಾಳೆ) ನಡೆಸುತ್ತಿರುವ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕರ್ನಾಟಕ ಲೋಕಸೇವಾ ಆಯೋಗ (KPSC) ಇದೇ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿರುವುದು ಸರಿಯಷ್ಟೆ. ಕೆಲವರ ಸ್ವಾರ್ಥಕ್ಕಾಗಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವ ಆರೋಪವಿದ್ದು, ಪರೀಕ್ಷೆಗೆ ಬರೆಯಲು ಅನೇಕ ದಿನಗಳಿಂದ ಪ್ರಾಮಾಣಿಕವಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ, ಅದರಲ್ಲಿಯೂ ವಿಕಲಚೇತನ ಅಭ್ಯರ್ಥಿಗಳಿಗೆ ತೊಂದರೆ ಕೊಡುವ ಹುನ್ನಾರ ಇದರಲ್ಲಿದೆ ಎಂಬ ಆರೋಪವಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ರಜೆ ದಿನ ಹೊರತುಪಡಿಸಿ ಇತರೆ ದಿನಗಳಲ್ಲಿ ಪರೀಕ್ಷೆ ನಡೆಸಿದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೂ ಸಮಸ್ಯೆ ಆಗುತ್ತದೆ. ಈ ಕಾರಣದಿಂದಲೇ ಅಭ್ಯರ್ಥಿಗಳು ಹಲವು ದಿನಗಳಿಂದ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೆಪಿಎಸ್‌ಸಿ ಪರೀಕ್ಷೆ ನಡೆಸಲೇಬೇಕು ಎಂದು ಪಟ್ಟು ಹಿಡಿದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು ಅವರ ಕಾಳಜಿಯನ್ನು ನಿರ್ಲಕ್ಷಿಸಿದೆ ಮತ್ತು ಅವರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಹೊರಟಿರುವುದು ಅಕ್ಷಮ್ಯ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ..ಕೂಡಲೇ ಎಲ್ಲ ಅಭ್ಯರ್ಥಿಗಳಿಗೆ ಅನುಕೂಲವಾಗುವ ಮತ್ತೊಂದು ದಿನಾಂಕ ನಿಗದಿಪಡಿಸಿ, ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘವು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮೊನ್ನೆಯಿಂದ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಇನ್ನು ಈ ಪರೀಕ್ಷೆಗೆ ಹಲವು ವರ್ಷಗಳಿಂದ ತಯಾರಿ ನಡೆಸಿದ್ದವರನ್ನು ಸರ್ಕಾರವೇ ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ ಎಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಲ್ಲದೆ, ಶೂ ಪಾಲಿಶ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಸಾಮಾನ್ಯವಾಗಿ ಪರೀಕ್ಷೆಗಳನ್ನು ಭಾನುವಾರ ನಡೆಸಬೇಕು. ಆದರೆ, ವಾರದ ಮಧ್ಯದಲ್ಲಿ ಪರೀಕ್ಷೆಗೆ ಹಾಜರಾಜಲು ಸಾಧ್ಯವಿಲ್ಲ. ಈ ಕಾರಣದಿಂದ ಹಲವರು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಹಾಗಾಗಿ ಈ ಪರೀಕ್ಷೆಯ ದಿನಾಂಕವನ್ನು ಮುಂದೂಡಬೇಕು ಎಂದು ಆಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಮತ್ತು ಕೇಂದ್ರ ಸರ್ಕಾರದ ನೌಕರರಿಗೆ ರಜೆಯನ್ನು ನಿರಾಕರಿಸಿ ಅವಕಾಶ ವಂಚಿತರನ್ನಾಗಿ ಹಾಗೂ 2017-18ನೇ ಸಾಲಿನ ಅಭ್ಯರ್ಥಿಗಳಿಗೆ ಅಭ್ಯಾಸ ನಡೆಸಲು ಕನಿಷ್ಠ ಸಮಯವನ್ನು ನೀಡಿಲ್ಲ, ಪ್ರಶ್ನೆ ಪತ್ರಿಕೆಯನ್ನು ಒಂದು ತಿಂಗಳ ಹಿಂದೆ ಮುದ್ರಣ ಮಾಡಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುವ ಸಂಭವವಿದೆ, ಹಾಗಾಗಿ ಪರೀಕ್ಷೆಯನ್ನು ಮುಂದೂಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕೆಪಿಎಸ್‌ಸಿಯು ಈ ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಸದ್ಯದ ವೇಳಾಪಟ್ಟಿಯಂತೆ ಪೂರ್ವಭಾವಿ ಪರೀಕ್ಷೆಯು ಆಗಸ್ಟ್ 27ರಂದು ಪತ್ರಿಕೆ-1ರ ಪರೀಕ್ಷೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಪತ್ರಿಕೆ-2ರ ಪರೀಕ್ಷೆ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಡೆಯಲಿದೆ.












Click it and Unblock the Notifications