ಇಬ್ಬರು ಶಾಸಕರನ್ನು ಅನರ್ಹಗೊಳಿಸಲು ಜೆಡಿಎಸ್ ಮನವಿ
ಬೆಂಗಳೂರು, ಜನವರಿ 19 : ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮಾನಪ್ಪ ವಜ್ಜಲ್ ಮತ್ತು ಡಾ.ಶಿವರಾಜ್ ಪಾಟೀಲ್ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಜೆಡಿಎಸ್ ಮನವಿ ಮಾಡಿದೆ. ಇಬ್ಬರೂ ನಾಯಕರು ಗುರುವಾರ ಬಿಜೆಪಿ ಸೇರಿದ್ದರು.
ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, '2013ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಇಬ್ಬರು ಶಾಸಕರು ಎಲ್ಲಾ ಅಧಿಕಾರವನ್ನು ಅನುಭವಿಸಿ, ಈಗ ಬಿಜೆಪಿ ಸೇರಿದ್ದಾರೆ' ಎಂದು ಆರೋಪಿಸಿದರು.
'ಅಧಿಕೃತವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡದೆ ಇಬ್ಬರು ಶಾಸಕರು ಬಿಜೆಪಿ ಸೇರಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಮನವಿ ಮಾಡಲಾಗಿದೆ' ಎಂದರು.

'ಇಬ್ಬರು ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯಡಿ ಕ್ರಮವನ್ನು ಕೈಗೊಂಡು ಅವರ ಸದಸ್ಯತ್ವವನ್ನು ರದ್ದು ಮಾಡಿ, ಯಾವುದೇ ಪಕ್ಷದಿಂದ ಕನಿಷ್ಠ ಐದು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಬೇಕೆಂದು ಚುನಾವಣಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ' ಎಂದು ಹೇಳಿದರು.
ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಮತ್ತು ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.
ಇಬ್ಬರೂ ಶಾಸಕರು ಬಿಜೆಪಿ ಸೇರುವ ಮುನ್ನ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಿಗೆ ರಾಜೀನಾಮೆ ಪತ್ರ ನೀಡಿದ್ದರು. ಶಾಸಕರು ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ನೀಡಿಲ್ಲ. ಆದ್ದರಿಂದ, ರಾಜೀನಾಮೆ ಅಂಗೀಕಾರವಾಗಿಲ್ಲ.












Click it and Unblock the Notifications