CM Siddaramaiah: ಮೈಸೂರಿನ ರಸ್ತೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಹೆಸರು: ತೀವ್ರ ವಿರೋಧ
ಬೆಂಗಳೂರು, ಡಿಸೆಂಬರ್ 25: ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ " ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡಲು ಆಕ್ಷೇಪಣೆ ಮತ್ತು ಸಲಹೆ ಕೋರಿ, ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡುವ ಕುರಿತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಡಾ ಹಗರಣದ ಪ್ರಮುಖ ಆರೋಪಿ ಹೆಸರನ್ನು ರಾಜ್ಯದ ಸಾಂಸ್ಕೃತಿಕ ರಾಜಧಾನಿಯ ರಸ್ತೆಯೊಂದಕ್ಕೆ ಇಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿರುವ ಕೆಆರ್‌ಎಸ್ ರಸ್ತೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡುವ ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆಯನ್ನು ಜೆಡಿಎಸ್ ರಾಜ್ಯ ಘಟಕ ತೀವ್ರವಾಗಿ ವಿರೋಧಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯ ಅವರ ಹೆಸರು ಮೈಸೂರು ನಗರದ ಒಂದು ಪ್ರಮುಖ ರಸ್ತೆಗೆ ಇಡುವುದು ಅಕ್ಷಮ್ಯ ಎಂದು ಕಿಡಿಕಾರಿದೆ. ಅಲ್ಲದೇ ಈ ಕೂಡಲೇ ತನ್ನ ಪ್ರಕಟಣೆಯನ್ನು ಹಿಂಪಡೆಯಬೇಕೆಂದು ಮೈಸೂರು ಮಹಾನಗರ ಪಾಲಿಕೆಯನ್ನು ಜೆಡಿಎಸ್ ಒತ್ತಾಯಿಸಿದೆ.
ಐತಿಹಾಸಿಕ ಮೈಸೂರು ನಗರದ ಕೆಆರ್‌ಎಸ್ ರಸ್ತೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡಲು ಹೊರಟಿರುವ ಮೈಸೂರು ಮಹಾನಗರ ಪಾಲಿಕೆಯ ತೀರ್ಮಾನ ಖಂಡನೀಯ. ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದು ವಂಚಿಸಿರುವ A1 ಆರೋಪಿ ಸಿದ್ದರಾಮಯ್ಯ, ನ್ಯಾಯಾಲಯ ಹಾಗೂ ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಟ್ವೀಟ್‌ನಲ್ಲಿ ಕಿಡಕಾರಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಮಂಡಳಿ ಅಸ್ತಿತ್ವದಲ್ಲಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳು ಸಿದ್ದರಾಮಯ್ಯ ಅವರ ಋಣ ತೀರಿಸಲು ಕೆಆರ್‌ಎಸ್ ರಸ್ತೆಗೆ ಅವರ ಹೆಸರಿಡಲು ನಿರ್ಣಯಕೈಗೊಂಡಿದ್ದಾರೆ. ಮುಡಾವನ್ನು ಮುಕ್ಕಿ ತಿಂದಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು, ರಸ್ತೆಯೊಂದಕ್ಕೆ ನಾಮಕರಣ ಮಾಡುವುದು, ಐತಿಹಾಸಿಕ ನಗರಿ ಮೈಸೂರಿಗಷ್ಟೆ ಅಲ್ಲ ಇಡೀ ರಾಜ್ಯಕ್ಕೆ ಎಸಗುವ ದ್ರೋಹ ಮತ್ತು ಅಪಮಾನ ಎಂದು ಜೆಡಿಎಸ್ ಟ್ವೀಟ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮೈಸೂರು ಮಹಾನಗರ ಪಾಲಿಕೆ ಮುಡಾ ಹಗರಣವನ್ನು ಮರೆತಿದ್ದರೂ, ರಾಜ್ಯದ ಮತ್ತು ಮೈಸೂರಿನ ಜನ ಮರೆತಿಲ್ಲ. ತನ್ನ ಪ್ರಭಾವ ಬಳಸಿಕೊಂಡು ಸೈಟ್ ಕದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಸಾಂಸ್ಕೃತಿಕ ನಗರಿಯ ರಸ್ತೆಯೊಂದಕ್ಕೆ ತಮ್ಮ ಹೆಸರನ್ನು ಇಡುವಂತೆ ಪ್ರಭಾವ ಬೀರಲು ನಾಚಿಕೆಯಾಗುವುದಿಲ್ಲವೇ. ಎಂದು ಜೆಡಿಎಸ್ ಪ್ರಶ್ನಿಸಿದೆ.
ಇನ್ನು ಮೈಸೂರು ಮಹಾನಗರ ಪಾಲಿಕೆಯ ಈ ಪಕ್ರಟಣೆಗೆ ಅಚ್ಚರಿ ವ್ಯಕ್ತಪಡಿಸಿರುವ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಹೆಸರನ್ನು ರಸ್ತೆಯೊಂದಕ್ಕೆ ಇಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ರಸ್ತೆ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇದಕ್ಕೆ ಹಗರಣವೊಂದರಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಹೆಸರು ಇಡುವುದು ಬೇಡ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರುದ್ಧ ಸ್ನೇಹಮಯಿ ಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಬಿ ವೈ ವಿಜಯೇಂದ್ರ ಹೇಳಿದ್ದೇನು?
ಮೈಸೂರು ಸಂಸ್ಥಾನ ಕಟ್ಟಿ ಬೆಳೆಸಿದವರು ಮೈಸೂರಿನ ರಾಜ ಮಹಾರಾಜರು, ಅಂತಹ ಶ್ರೇಷ್ಠ ರಾಜ ಮನೆತನದವರ ಹೆಸರಿರುವ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮದೇ ಹೆಸರಿಟ್ಟುಕೊಳ್ಳಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಜನಪ್ರತಿನಿಧಿಗಳೇ ಇಲ್ಲದ ಮೈಸೂರು ಮಹಾನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಕ್ರಮಬದ್ಧ ಹಾಗೂ ಎಷ್ಟು ಸಮಂಜಸ? ತಾವೇ ಅಧಿಕಾರದಲ್ಲಿದ್ದು ತಮ್ಮ ಹೆಸರನ್ನೇ ಪ್ರತಿಷ್ಠಾಪಿಸಿಕೊಳ್ಳಲು ಹೊರಟಿರುವ ಮುಖ್ಯಮಂತ್ರಿಗಳಿಗೆ ನೈತಿಕತೆ ಚುಚ್ಚುವುದಿಲ್ಲವೇ? ತುಘಲಕ್ ಆಡಳಿತ ಅನುಸರಿಸುವವರಲ್ಲಿ ಮಾತ್ರ ಇಂತಹ ನಡೆಯನ್ನು ಕಾಣಲು ಸಾಧ್ಯ ಎಂದು ತಿಳಿಸಿದ್ದಾರೆ.












Click it and Unblock the Notifications