ಡಿಕೆ ಶಿವಕುಮಾರ್ ಜತೆ ಜೆಡಿಎಸ್ ನಾಯಕರ ರಹಸ್ಯ ಚರ್ಚೆ!
ರಾಮನಗರ, ಫೆ.2 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕರ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟು ಹಾಕಿದೆ. ಮಾಗಡಿ ಬಳಿಯ ಸಾವನದುರ್ಗ ಬೆಟ್ಟದಲ್ಲಿ ಭಾನುವಾರ ಜೆಡಿಎಸ್ ನಾಯಕರು ಡಿ.ಕೆ.ಶಿವಕುಮಾರ್ ಅವರ ಜೊತೆ ರಹಸ್ಯ ಚರ್ಚೆ ನಡೆಸಿದ್ದಾರೆ.
ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಶಾಸಕ ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಮಾಗಡಿ ಬಾಲಕೃಷ್ಣ, ಮಾಜಿ ಶಾಸಕ ರಾಜು ಹಾಗೂ ಇತರ ಮುಖಂಡರು ಡಿ.ಕೆ.ಶಿವಕುಮಾರ್ ಅವರ ಜೊತೆ ಸಮಾಲೋಚನೆ ನಡೆಸಿರುವ ನಾಯಕರು. [ದೇವೇಗೌಡರ ಮೊಮ್ಮಗ ಪ್ರಜ್ವಲ್ ಜೆಡಿಎಸ್ ಸೇರ್ಪಡೆ]
ಭಾನುವಾರ ಮಧ್ಯಾಹ್ನದ ಮಾಗಡಿ ಬಳಿಯ ಸಾವನದುರ್ಗ ಬೆಟ್ಟದಲ್ಲಿ ಭಾನುವಾರ ಈ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಧಾನಸಭೆ ಜಂಟಿ ಅಧಿವೇಶನಕ್ಕೆ ಒಂದು ದಿನ ಬಾಕಿ ಇರುವಾಗ ನಾಯಕರು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. [ಜೆಡಿಎಸ್ ಸಮಾವೇಶ, ಜಮೀರ್ ಫೋಟೋ ನಾಪತ್ತೆ!]
ನಾಗಮಂಗಲದ ಜೆಡಿಎಸ್ ಶಾಸಕ ಎನ್. ಚಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ಮಾಗಡಿ ಶಾಸಕ ಬಾಲಕೃಷ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇಂತಹ ಸಮಯದಲ್ಲಿ ಸಚಿವರನ್ನು ಭೇಟಿ ಮಾಡಿರುವುದು ಹಲವಾರು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಡಿಕೆ ಶಿವಕುಮಾರ್ ಜೊತೆ ಜೆಡಿಎಸ್ ನಾಯಕರ ಚರ್ಚೆ
ಶಾಸಕ ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಮಾಗಡಿ ಬಾಲಕೃಷ್ಣ, ಮಾಜಿ ಶಾಸಕ ರಾಜು ಹಾಗೂ ಇತರ ಮುಖಂಡರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ
ಡಿಕೆ ಶಿವಕುಮಾರ್ ಭೇಟಿ ಮಾಡಿದ ನಾಯಕರು ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಂತೆ ನಡೆದುಕೊಳ್ಳುತ್ತಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತಿಲ್ಲ. ಆದ್ದರಿಂದ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಜಮೀರ್ ಅಹಮದ್ ಗೈರು
ಜನವರಿ 24ರಂದು ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದ ಜೆಡಿಎಸ್ ಅದರ ಅಂಗವಾಗಿ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿತ್ತು. ಆದರೆ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಮಾವೇಶದಿಂದ ದೂರವುಳಿದಿದ್ದರು. ಪಕ್ಷದ ನಾಯಕರ ವಿರುದ್ಧದ ಅಸಮಾಧಾನ ಹೊರಹಾಕಿದ್ದರು. ಸದ್ಯ ಅವರು ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ.

ಮಠದಲ್ಲಿ ಒಂದಾಗಿದ್ದ ಎಚ್ಡಿಕೆ, ಚಲುವರಾಯಸ್ವಾಮಿ
ನಾಗಮಂಗಲದ ಜೆಡಿಎಸ್ ಶಾಸಕ ಎನ್. ಚಲುವರಾಯಸ್ವಾಮಿ ಕುಮಾರಸ್ವಾಮಿ ಅವರ ಪರಮಾಪ್ತರಲ್ಲಿವೊಬ್ಬರಾಗಿದ್ದರು. ಆದರೆ, ಕೆಲವು ದಿನಗಳಿಂದ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳದ ಅವರನ್ನು ಆದಿಚುಂಚನಗಿರಿ ಮಠದಲ್ಲಿ ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಭೇಟಿಯಾಗಿ ಸಂಧಾನ ಸಭೆ ನಡೆಸಿದ್ದರು. [ನಿರ್ಮಲಾನಂದರ ಸಮ್ಮುಖದಲ್ಲಿ ಚೆಲುವ- ಎಚ್ಡಿಕೆ ಹ್ಯಾಂಡ್ ಶೇಕ್]

ಪ್ರಜ್ವಲ್ ರೇವಣ್ಣ ಪಕ್ಷ ಸೇರಿದ್ದಾರೆ
ಜೆಡಿಎಸ್ ವರಿಷ್ಠ ದೇವೇಗೌಡ ಅವರ ಸಮ್ಮುಖದಲ್ಲಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಜಾತ್ಯಾತೀತ ಜನತಾದಳಕ್ಕೆ ಭಾನುವಾರ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇತ್ತ ದೇವೇಗೌಡರ ಕುಟುಂಬದ ಮತ್ತೊಬ್ಬರು ಪಕ್ಷ ಸೇರುತ್ತಿದ್ದರೆ ಪಕ್ಷದಲ್ಲಿರುವ ನಾಯಕರು ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications