ಪೇಪರ್ ಲೀಕ್ ಮಾಡುವವರಿಗೆ ತಕ್ಕಶಾಸ್ತಿ ಎಂದ ಮೋದಿ, 'ನಮ್ಮ ಬಳಿಗೇ ಬಂದು ಮಾತನಾಡಿ' ಎಂದ ಅಭಿಜೀತ್ ಡಿಪ್ಕೆ
ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೀಗ ಕಠಿಣ ನಿಲುವು ತಾಳಿದೆ. ಯುವಜನತೆಯ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವವರಿಗೆ ತಕ್ಕಶಾಸ್ತಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮತ್ತೊಂದೆಡೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು ತಮ್ಮ ಹೋರಾಟ ಮುಂದುವರಿಸಿದ್ದಾರೆ.
ಮೋದಿ ಟ್ವೀಟ್
ದೇಶದಲ್ಲಿ ಇತ್ತೀಚೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಹಾಗೂ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ. "ನಮ್ಮ ಯುವಜನತೆಯ ಕಲ್ಯಾಣ ಮತ್ತು ಭವಿಷ್ಯಕ್ಕಿಂತ ಮುಖ್ಯವಾದುದು ಬೇರೇನೂ ಇಲ್ಲ! ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರಿಗೆ ತ್ವರಿತ ಮತ್ತು ಕಠಿಣ ಶಿಕ್ಷೆಯನ್ನು ನೀಡಲು ನಾವು ಫಾಸ್ಟ್-ಟ್ರ್ಯಾಕ್ ಕೋರ್ಟ್‌ಗಳನ್ನಾ ಸ್ಥಾಪಿಸಲು ನಿರ್ಧರಿಸಿದ್ದೇವೆ.

ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ. ಮುಂದುವರಿದು, "ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳುತ್ತಿರುವ ಸರಣಿ ಕ್ರಮಗಳ ಮುಂದುವರಿದ ಭಾಗ ಇದಾಗಿದೆ. ನಮ್ಮ ಯುವಕರ ಭವಿಷ್ಯವನ್ನಾ ಹಾಳು ಮಾಡಲು ಯತ್ನಿಸುವ ಯಾರನ್ನೂ ಎಂದಿಗೂ ಸುಮ್ಮನೆ ಬಿಡುವುದಿಲ್ಲ" ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
Nothing is more important than the welfare and future of our youth!
— Narendra Modi (@narendramodi) July 23, 2026
We have decided to set up fast-track courts to ensure swift and stringent punishment for those involved in paper leaks. Have directed the concerned authorities and officials to take all necessary steps in this…
ತೀವ್ರಗೊಂಡ ಪ್ರತಿಭಟನೆ
ಒಂದೆಡೆ ಪ್ರಧಾನಿ ಮೋದಿ ಅವರು ಕಠಿಣ ಕ್ರಮದ ಭರವಸೆ ನೀಡಿದ್ದರೆ, ಇನ್ನೊಂದೆಡೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖಂಡ ಅಭಿಜೀತ್ ಡಿಪ್ಕೆ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇಂದು ನಮ್ಮ ಪ್ರತಿಭಟನೆ 34ನೇ ದಿನಕ್ಕೆ ಕಾಲಿಟ್ಟಿದೆ. ಹಾಗೆಯೇ, ಪ್ರಮುಖ ಹೋರಾಟಗಾರರಾದ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ (Hunger Strike) 26ನೇ ದಿನಕ್ಕೆ ತಲುಪಿದೆ.
ನಮ್ಮ ಈ ಹೋರಾಟ ಯಥಾವತ್ತಾಗಿ ಮುಂದುವರಿಯಲಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಸೋನಮ್ ವಾಂಗ್ಚುಕ್ ಸರ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ನಾವು ಬಯಸುತ್ತೇವೆ. ಏಕೆಂದರೆ ಅವರು ತಮ್ಮ ಪ್ರಾಣವನ್ನ ಅಪಾಯಕ್ಕೆ ಸಿಲುಕಿಸುವುದು ನಮಗೆ ಇಷ್ಟವಿಲ್ಲ. ಈ ದೇಶಕ್ಕೆ ಅವರ ಜೀವ ಬಹಳ ಮುಖ್ಯವಾಗಿದೆ" ಎಂದು ಡಿಪ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲೇಬೇಕು ಎಂದು ಪ್ರತಿಭಟನಾಕಾರರು ತಮ್ಮ ಬೇಡಿಕೆಯನ್ನ ಮುಂದಿಟ್ಟಿದ್ದಾರೆ. "ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಈ ಜಾಗದಿಂದ ಕದಲುವುದಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ" ಎಂದು ಅಭಿಜೀತ್ ಡಿಪ್ಕೆ ಹೇಳಿದ್ದಾರೆ. ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ, ಸರ್ಕಾರ ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವಂತಿಲ್ಲ ಎಂದು ಅವರು ಆಗ್ರಹಿಸಿದ್ದಾರೆ.
Dharmendra Pradhan Must Resign
— Cockroach is Back (@Cockroachisback) July 23, 2026
धर्मेंद्र प्रधान को इस्तीफ़ा देना होगा https://t.co/0XShqJ6FVG
ಸರ್ಕಾರದೊಂದಿಗೆ ಮಾತುಕತೆಗೆ ಷರತ್ತು: ಜಂತರ್ ಮಂತರ್‌ನಲ್ಲಿಯೇ ಚರ್ಚೆ
ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದೊಂದಿಗೆ ಸಂಭವನೀಯ ಮಾತುಕತೆಯ ಬಗ್ಗೆಯೂ ಡಿಪ್ಕೆ ಪ್ರತಿಕ್ರಿಯಿಸಿದ್ದಾರೆ. "ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಯುವುದಿದ್ದರೂ, ನಡೆದರೆ ಅದು ಕೇವಲ ಜಂತರ್ ಮಂತರ್‌ನಲ್ಲಿ ಮಾತ್ರ ನಡೆಯಬೇಕು. ನಾವು ಸರ್ಕಾರದ ಕಚೇರಿಗಳಿಗೆ ಅಥವಾ ಸಚಿವರ ಕೊಠಡಿಗಳಿಗೆ ತೆರಳಿ ಯಾವುದೇ ಮಾತುಕತೆ ನಡೆಸುವುದಿಲ್ಲ. ಸರ್ಕಾರವೇ ನಮ್ಮ ಬಳಿ ಬಂದು ನಮ್ಮ ಅಹವಾಲುಗಳನ್ನ ಕೇಳಬೇಕು" ಎಂದು ಅವರು ಸ್ಪಷ್ಟ ಷರತ್ತು ವಿಧಿಸಿದ್ದಾರೆ.


Click it and Unblock the Notifications
