ಪ್ರತಿಭಟನೆ ಬಿಟ್ಟು ಓದಿಗೆ ಒತ್ತು ನೀಡಿದ NEET ಟಾಪರ್ ಪನ್ಷುಲ್‌ ಬನ್ಸಲ್; ದೆಹಲಿಯಲ್ಲಿ ಏನಾಗುತ್ತಿದೆ? ಇಲ್ಲಿದೆ ನೋಡಿ

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ನೀಟ್ ಪರೀಕ್ಷೆಯ ವಿವಾದಗಳು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆಯೂ ಸಕಾರಾತ್ಮಕವಾಗಿ ಯೋಚಿಸಿದ ವಿದ್ಯಾರ್ಥಿಯೊಬ್ಬ ನೀಟ್ ಟಾಪರ್ ಆಗಿ ಹೊರಹೊಮ್ಮಿದ್ದರೆ, ಮತ್ತೊಂದೆಡೆ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.ಇದಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ವಿದ್ಯಾರ್ಥಿಗಳು ರಸ್ತೆಗಿಳಿದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ದೆಹಲಿಯ ವಿದ್ಯಾರ್ಥಿ ಪನ್ಷುಲ್‌ ಬನ್ಸಲ್ ಮಾತ್ರ ಈ ವಿವಾದವನ್ನು ಸಂಪೂರ್ಣ ವಿಭಿನ್ನವಾಗಿ ನೋಡಿದ್ದಾರೆ. ಬೀದಿಗಿಳಿದು ಪ್ರತಿಭಟಿಸುವ ಬದಲು ಮನೆಯಲ್ಲೇ ಕುಳಿತು ತಮ್ಮ ಅಧ್ಯಯನವನ್ನ ಮುಂದುವರಿಸಿದರು. ಇದರ ಫಲವಾಗಿ ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಅವರು ಅಖಿಲ ಭಾರತ ಮಟ್ಟದಲ್ಲಿ ನಂಬರ್ 2ನೇ ರ‍್ಯಾಂಕ್‌ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

NEET

ಈ ಕುರಿತು ಪ್ರತಿಕ್ರಿಯಿಸಿರುವ ಪನ್ನುಲ್ ಬನ್ಸಲ್, "ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ಕೇಳಿ ನನಗೂ ಮೊದಲು ಬೇಸರವಾಗಿತ್ತು. ಆದರೆ, ಆ ಬೇಸರವನ್ನ ನಾನು ನೆಗಿಟಿವ್‌ ಆಗಿ ತೆಗೆದುಕೊಳ್ಳಲಿಲ್ಲ. ಮನೆಯಲ್ಲೇ ಕುಳಿತು ಓದಿ ನನ್ನ ಕೌಶಲ್ಯವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಲು ಮತ್ತು ಹೆಚ್ಚಿನ ಅಂಕ ಪಡೆಯಲು ಸಾಧ್ಯವಿರುವಾಗ, ನಾನು ಜಂತರ್ ಮಂತರ್‌ಗೆ ಹೋಗಿ ಪ್ರತಿಭಟನೆ ನಡೆಸುವ ಅವಶ್ಯಕತೆಯಾದರೂ ಏನಿದೆ ಎಂದು ನನಗೆ ನಾನೇ ಪ್ರಶ್ನಿಸಿಕೊಂಡೆ. ಇದು ನನ್ನ ಅಂಕವನ್ನ ಉತ್ತಮಪಡಿಸಿಕೊಳ್ಳಲು ಸಿಕ್ಕ ಅದ್ಭುತ ಅವಕಾಶ ಎಂದು ಭಾವಿಸಿ, ಮನೆಯಲ್ಲೇ ಕುಳಿತು ಹೆಚ್ಚಿನ ಅಭ್ಯಾಸ ಮಾಡಿದೆ. ಅದರ ಫಲವಾಗಿ ಇಂದು ಅತ್ಯುತ್ತಮ ಫಲಿತಾಂಶ ಬಂದಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ರದ್ದಾಗಿದ್ದ ಮೊದಲ ಪರೀಕ್ಷೆಯಲ್ಲಿ 706 ಅಂಕ ಪಡೆದಿದ್ದ ಬನ್ಸಲ್, ನೀಟ್ ಮರುಪರೀಕ್ಷೆಯಲ್ಲಿ ಭರ್ಜರಿ 715 ಅಂಕ ಗಳಿಸುವ ಮೂಲಕ 99.9999 ಪರ್ಸೆಂಟ್‌ಲೈನ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ.

ಜಂತರ್ ಮಂತರ್‌ನಲ್ಲಿ ಸಿಜಿಪಿ ಪ್ರತಿಭಟನೆಗೆ ಬೆಂಬಲದ ಮಹಾಪೂರ

ಇದೇ ವೇಳೆ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಮತ್ತೊಂದು ವಿದ್ಯಮಾನ ಭಾರಿ ಗಮನ ಸೆಳೆಯುತ್ತಿದೆ. ಸಿಜಿಪಿ ಪರವಾಗಿ ನಡೆಯುತ್ತಿರುವ ಪ್ರತಿಭಟನೆಗೆ ದೇಶದ ಮೂಲೆ ಮೂಲೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿಭಟನಾಕಾರರ ಉತ್ಸಾಹ ಹಾಗೂ ಹೋರಾಟದ ಕಿಚ್ಚನ್ನು ಬೆಂಬಲಿಸಿ, ಅಸಂಖ್ಯಾತ ಜನರು ಪ್ರತಿಭಟನಾ ಸ್ಥಳಕ್ಕೆ ಅಗತ್ಯಕ್ಕೂ ಮೀರಿ ನಿತ್ಯ ಊಟ ಹಾಗೂ ತಿಂಡಿ ತಿನಿಸುಗಳನ್ನ ಕಳುಹಿಸುತ್ತಿದ್ದಾರೆ.

ದೆಹಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಅನೇಕ ಅಪರಿಚಿತರು ಆನ್‌ಲೈನ್ ಡೆಲಿವರಿ ಆ್ಯಪ್‌ಗಳ ಮೂಲಕ ಊಟ ಆರ್ಡರ್ ಮಾಡುತ್ತಿದ್ದಾರೆ. ಜೊತೆಗೆ ಮನೆಯಲ್ಲಿ ತಯಾರಿಸಿದ ತಾಜಾ ಆಹಾರ, ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಖುದ್ದಾಗಿ ಜಂತರ್ ಮಂತರ್‌ಗೆ ತೆಗೆದುಕೊಂಡು ಬಂದು ಹಂಚುತ್ತಿದ್ದಾರೆ. ಈ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಆಹಾರ ಕಳುಹಿಸಬೇಡಿ ಎಂದು ಅಭಿಜಿತ್‌ ದಿಪ್ಕೆ ಮನವಿ

ಆದರೆ,ಇದರಿಂದ ಜಂತರ್ ಮಂತರ್‌ನಲ್ಲಿ ಪ್ರತಿದಿನ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಪೂರೈಕೆ ಆಗುತ್ತಿರುವುದರಿಂದ, ಸಾಕಷ್ಟು ಊಟ ಪೋಲಾಗುತ್ತಿದೆ. ಆಹಾರ ವ್ಯರ್ಥವಾಗುತ್ತಿರುವುದನ್ನು ಮನಗಂಡ ಸಿಜಿಪಿ ಸಂಘಟಕರು ಹಾಗೂ ಪ್ರತಿಭಟನಾಕಾರರು, ದಯವಿಟ್ಟು ಇನ್ನು ಮುಂದೆ ಈ ರೀತಿ ಊಟ ಕಳುಹಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿರುವ ಅಭಿಜಿತ್‌ ದಿಪ್ಕೆ , "ಭಾರತ ನಿಜಕ್ಕೂ ಒಳ್ಳೆಯ ಜನರನ್ನ ಹೊಂದಿರುವ ಅತ್ಯಂತ ಸುಂದರ ದೇಶ. ಇಲ್ಲಿನ ಜನರ ಪ್ರೀತಿ ಅನನ್ಯ. ನಮ್ಮ ಹೋರಾಟವನ್ನು ಬೆಂಬಲಿಸಿ ಇಲ್ಲಿಯವರೆಗೆ ಆಹಾರವನ್ನು ಕಳುಹಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು. ನಿಮ್ಮ ಈ ಪ್ರೀತಿಯಿಂದಾಗಿ ನಮಗೆ ಸಾಕಷ್ಟು ಆಹಾರ ಸಿಕ್ಕಿದೆ. ಆದರೆ, ಆಹಾರ ವ್ಯರ್ಥವಾಗುವುದು ನಮಗೆ ಇಷ್ಟವಿಲ್ಲ. ದಯವಿಟ್ಟು ಇನ್ನು ಮುಂದೆ ಯಾರೂ ಆಹಾರವನ್ನು ಕಳುಹಿಸಬೇಡಿ" ಎಂದು ವಿನಂತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+