ಅಕ್ರಮ ಮರಳು ದಂಧೆ; ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಜೀವ ಬೆದರಿಕೆ: ಕಠಿಣ ಕ್ರಮಕ್ಕೆ ಒತ್ತಾಯ
ರಾಯಚೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿದ ಘಟನೆ ಬೆನ್ನಲ್ಲೇ ಇದೀಗ ಜೆಡಿಎಸ್ ಶಾಸಕಿಕರೆಮ್ಮ ಜಿ ನಾಯಕ್‌ಗೆ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ್‌ಗೆ ಮರಳು ದಂಧೆಕೋರರು ಧಮ್ಕಿ ಹಾಕಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ಶಾಸಕಿ ದೂರು ನೀಡಿದ್ದಾರೆ.
ರಾಯಚೂರು ಭಾಗದ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಶಾಸಕಿ ಕರೆಮ್ಮ ಜಿ ನಾಯಕ್ ಸಮರ ಸಾರಿದ್ದರು. ಅಕ್ರಮ ಮರಳುಗಾರಿಕೆ ತಡೆಯಲು ಹೋದರೆ ಯಾರೂ ಇಲ್ಲದ ಸಮಯ ನೋಡಿ ಮನೆ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಒಬ್ಬರು ಶಾಸಕರ ಮನೆಗೆ ಏಕಾಏಕಿ ನುಗ್ಗುತ್ತಾರೆ ಎಂದರೆ ಏನು ಗತಿ? ಅಂತ ಕರೆಮ್ಮ ಜಿ ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ರಾಯಚೂರು ಎಸ್ಪಿ ಅರುಣಾಂಶು ಗಿರಿ ಅವರ ಕಚೇರಿಗೆ ಜೆಡಿಎಸ್ ಶಾಸಕಿ ತೆರಳಿ ದೂರು ನೀಡಿದ್ದಾರೆ. ಶ್ರೀನಿವಾಸ್ ನಾಯಕ್ ಎಂಬ ರೌಡಿ ನೂರಾರು ಜನರನ್ನು ಕರೆದುಕೊಂಡು ಬಂದು ನನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಎಸ್ಪಿಯವರು ಭರವಸೆ ನೀಡಿದ್ದಾರೆ ಎಂದು ಶಾಸಕಿ ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಶಾಸಕ ಶರವಣ ಒತ್ತಾಯ
ದೇವದುರ್ಗದ ಶಾಸಕಿ ಕರೆಮ್ಮ ಜಿ. ನಾಯಕ್ ಅವರಿಗೆ ಜೀವ ಬೆದರಿಕೆ ಹಾಕಿದ ಮರಳು ಸಾಗಣೆ ಗ್ಯಾಂಗ್ ಅನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಒತ್ತಾಯಿಸಿದ್ದಾರೆ. ಇಂಥ ಒಂದು ಗಂಭೀರವಾದ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮಹಿಳಾ ಜನಪ್ರತಿನಿಧಿಯ ರಕ್ಷಣೆಗೆ ಕ್ರಮ ವಹಿಸದ, ಗೂಂಡಾ ವ್ಯವಸ್ಥೆ ಬೆಳೆಯಲು ಬಿಟ್ಟ ಸಂಬಂಧಪಟ್ಟ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಎತ್ತಂಗಡಿ ಮಾಡಬೇಕು. ಬೆದರಿಕೆ ಹಾಕಿದ ಗ್ಯಾಂಗ್'ನ್ನು ತಕ್ಷಣ ಬಂಧಿಸಬೇಕು. ಇಲ್ಲಿ ಮರಳು ದಂಧೆ ನಿಲ್ಲಿಸಲು ಹೊಸ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು ಎಂದು ಶರವಣ ಅವರು ಒತ್ತಾಯಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಇದರಿಂದ ಗೂಂಡಾಗಿರಿ ಪ್ರವೃತ್ತಿಯು ಬೇಕಾಬಿಟ್ಟಿಯಾಗಿ ಬೆಳೆಯುತ್ತಿದೆ. ಸರ್ಕಾರವು ಕರ್ನಾಟಕವನ್ನು ಧಮ್ಕಿ ರಾಜ್ಯ. ಜಂಗಲ್ ರಾಜ್ಯ. ಗೂಂಡಾ ರಾಜ್ಯವನ್ನಾಗಿ ಪರಿವರ್ತಿಸಿದೆ ಎಂದು ಶರವಣ ಆರೋಪಿಸಿದ್ದಾರೆ.
ದೇವದುರ್ಗದ ಶಾಸಕಿ ಕರೆಮ್ಮ ಜಿ. ನಾಯಕ್ ಒಬ್ಬ ಪ್ರಗತಿಪರ, ಜನಪರ ಶಾಸಕಿ. ಸದಾ ಜನರ ಹಿತಾಸಕ್ತಿಗಾಗಿ ಮಿಡಿಯುವ ಶಾಸಕಿಯಾಗಿದ್ದಾರೆ. ಇಂಥ ಜನಪ್ರತಿನಿಧಿ ತನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಮಟ್ಕಾ, ಜೂಜಿನ ದಂಧೆ, ಮರಳು ದಂಧೆ ವಿರುದ್ಧ ಸಿಡಿದೆದ್ದು, ಜನಸಾಮಾನ್ಯರ ನೆಮ್ಮದಿ ಬದುಕಿಗೆ ಪಣ ತೊಟ್ಟಿದ್ದರು. ಆದರೆ, ಅವರಿಗೇ ರಕ್ಷಣೆ ಇಲ್ಲ ಎಂದ ಮೇಲೆ ಇದೆಂಥ ಸರ್ಕಾರ? ಇದೆಂಥ ನೀಚ ವ್ಯವಸ್ಥೆ? ಎಂದು ಶರವಣ ಅವರು ಜರಿದಿದ್ದಾರೆ.
ಇವತ್ತು ಕೃಷ್ಣಾ ನದಿಯ ದಂಡೆಯಲ್ಲಿರುವ ಮರಳು ಮಾಫಿಯ ಬಹಿರಂಗವಾಗಿ ಪೊಲೀಸರ ಮುಂದೆ ಶಾಸಕಿಗೆ ಧಮ್ಕಿ ಹಾಕಿದೆ. ಬೆದರಿಕೆ ಹಾಕಿದೆ. ಅದೂ ಮರಳು ಮಾಫಿಯಾದ ಗೂಂಡಾಗಳು ಶಾಸಕಿಯ ಮನೆಯ ಹತ್ತಿರ ಗುಂಪುಗೂಡಿ ಬಂದು 'ಇನ್ನೊಮ್ಮೆ ಮರಳು ದಂಧೆ ನಿಲ್ಲಿಸುವ ಯತ್ನ ನಡೆಸಿದರೆ ಮುಗಿಸಿಬಿಡುತ್ತೇವೆ' ಎಂದು ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವುದು ಆಘಾತಕಾರಿ ಸಂಗತಿ ಎಂದಿದ್ದಾರೆ.
ಶಾಸಕರಿಗೆ ರಕ್ಷಣೆ ಇಲ್ಲದೆ ಗೂಂಡಾಗಳ ಗುಂಪು ರಾಜಾರೋಷವಾಗಿ ಬೆದರಿಕೆ ಹಾಕುತ್ತಾ ಓಡಾಡುತ್ತದೆ ಎಂದರೆ ಇಲ್ಲಿ ಇಡೀ ಆಡಳಿತ ಕುಸಿದು ಬಿದ್ದಿದೆ. ಇಲ್ಲಿ ಪೊಲೀಸರು ನೀಚರ, ಮಾಫಿಯಾದ ರಕ್ಷಕರಾಗಿದ್ದಾರೆ. ಕೃಷ್ಣಾ ನದಿಯ ಒಡಲು ಬತ್ತಿಹೋಗುವುದನ್ನು ತಪ್ಪಿಸಲು ಹೋದ ಶಾಸಕಿ ಕತೆ ಹೀಗಾದರೆ ಜನಸಾಮಾನ್ಯರ ಪಾಡೇನು ಎಂದು ಯೋಚಿಸಬೇಕಾಗಿದೆ ಎಂದು ಶಾಸಕ ಶರವಣ ಪ್ರಶ್ನಿಸಿದ್ದಾರೆ.
ಧಮ್ಕಿ ಹಾಕಿದ ಜನರ ಬಗ್ಗೆ ದೂರು ಕೊಟ್ಟರೂ ಈವರೆಗೆ ಅವರನ್ನು ಬಂಧಿಸಿಲ್ಲ ಏಕೆ? ಹೀಗಾಗಿ ಸ್ಥಳೀಯ ಪ್ರಭಾವಿಗಳ ಕುಮ್ಮಕ್ಕಿಕಿಂದ ಈ ಅಕ್ರಮ ಧಂಧೆ ನಡೆಯುತ್ತಿರುವುದು ನಿಶ್ಚಿತ. ಕಾಣದ ಕೈಗಳು ಈ ಮಾಫಿಯಾ ಸಮರ್ಥನೆಗೆ ನಿಂತಿದ್ದಾರೆ. ಪೊಲೀಸರು ಈ ಬಲಶಾಲಿ ಶಕ್ತಿಗಳ ಕೈಯಲ್ಲಿ ಕೈಗೊಂಬೆ ಆಗಿದ್ದಾರೆ ಎಂದು ಶರವಣ ಕಿಡಿಕಾರಿದ್ದಾರೆ.












Click it and Unblock the Notifications