ಮೇ 21ಕ್ಕೆ ಜೆಡಿಎಸ್ ಶಾಸಕಾಂಗ ಸಭೆ: ರೆಸಾರ್ಟ್ ಕಡೆ ಪ್ರಯಾಣ?
ಬೆಂಗಳೂರು, ಮೇ 17: ಲೋಕಸಭೆ ಚುನಾವಣೆ ಫಲಿತಾಂಶ ಬರುವ ಎರಡು ದಿನ ಮೊದಲು, ಮೇ 21 ರಂದು ಜೆಡಿಎಸ್ ಸಹ ಶಾಸಕಾಂಗ ಸಭೆ ನಡೆಸಲಿದೆ. ಅದೇ ದಿನ ಬಿಜೆಪಿಯೂ ಶಾಸಕಾಂಗ ಸಭೆ ನಡೆಯುತ್ತಿದೆ.
ಚುನಾವಣೆ ಫಲಿತಾಂಶಕ್ಕೆ ಎರಡು ದಿನ ಮುಂಚೆ ತಮ್ಮೆಲ್ಲಾ ಶಾಸಕರನ್ನು ಒಟ್ಟುಗೂಡಿಸುತ್ತಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ. ಸಭೆಯ ಬಳಿಕ ಎರಡೂ ಪಕ್ಷಗಳ ಶಾಸಕರು ರೆಸಾರ್ಟ್‌ನತ್ತ ತೆರಳುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದಲ್ಲಿ ಸರ್ಕಾರ ಉರುಳಿಸುವ ಸರ್ವ ಪ್ರಯತ್ನವನ್ನೂ ಮಾಡಲಿದೆ, ಹಾಗಾಗಿಯೇ ಅದು ಫಲಿತಾಂಶದ ಎರಡು ದಿನ ಮುಂಚಿತವಾಗಿ ಸಭೆ ಸೇರಿ ಮುಂದಿನ ಕಾರ್ಯಸೂಚಿಗಳನ್ನು ಚರ್ಚೆ ಮಾಡಲಿದೆ. ಅದೇ ದಿನ ಯಡಿಯೂರಪ್ಪ ಅವರು ಶಾಸಕರುಗಳಿಗೆ ಕೆಲವು ಸೂಚನೆಗಳನ್ನೂ ನೀಡಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಸಹ ಅದೇ ದಿನ ತಮ್ಮ ಶಾಸಕರನ್ನೆಲ್ಲಾ ಒಟ್ಟು ಸೇರಿಸುತ್ತಿದ್ದು, ಚುನಾವಣಾ ಫಲಿತಾಂಶ ಊಹಿಸಿದಂತೆ ಬಾರದೇ ಇದ್ದಲ್ಲಿ ತಮ್ಮ ಶಾಸಕರನ್ನು ಭದ್ರವಾಗಿಟ್ಟುಕೊಳ್ಳಲೆಂದು ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಅಂದು ಶಾಕರಿಗೆ ಹಲವು ಎಚ್ಚರಿಕೆಗಳನ್ನು ಇಬ್ಬರೂ ನಾಯಕರು ನೀಡಲಿದ್ದಾರೆ. ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳುವ ಜರೂರತ್ತು ಜೆಡಿಎಸ್‌ಗೆ ಹೆಚ್ಚಿದ್ದು ಅದಕ್ಕಾಗಿಯೇ ಈ ಶಾಸಕಾಂಗ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ.
ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಪಲ್ಲಟ ನಡೆಯಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬರುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿ ಹಲವು ಕಾಂಗ್ರೆಸ್, ಜೆಡಿಎಸ್ ಶಾಸಕರು ಫಲಿತಾಂಶದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಈಶ್ವರಪ್ಪ, ಶ್ರೀರಾಮುಲು ಇತ್ತೀಚೆಗಷ್ಟೆ ಹೇಳಿದ್ದರು.












Click it and Unblock the Notifications