ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಮೋದಿ ಜೊತೆಗಿನ ಸಂಬಂಧ ಮುಗೀತು ಅನ್ಕೋಬೇಡಿ: ಹೆಚ್‌.ಡಿ.ದೇವೇಗೌಡ

ರಾಜ್ಯಸಭಾ ಟಿಕೆಟ್ ಕೈತಪ್ಪಿದ ನಂತರ ಎದ್ದಿದ್ದ ಎಲ್ಲ ರಾಜಕೀಯ ಚರ್ಚೆಗಳಿಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಖಡಕ್ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ, "ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ ಕೇವಲ ಒಂದು ರಾಜ್ಯಸಭಾ ಸೀಟಿಗೆ ಮಾತ್ರ ಸೀಮಿತವಾಗಿಲ್ಲ. ಸ್ಥಾನ ಇಲ್ಲದಿದ್ದರೂ ದೇಶದ ಹಿತದೃಷ್ಟಿಯಿಂದ ಯಾರ ಹಂಗಿಲ್ಲದೆ ಮಾತನಾಡುತ್ತೇನೆ, ಮೋದಿಯವರ ಜೊತೆ ನನ್ನ ಪತ್ರ ವ್ಯವಹಾರ ಮುಂದುವರಿಯುತ್ತದೆ" ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

"ನನಗೆ ಸ್ಥಾನದ ವ್ಯಾಮೋಹವಿಲ್ಲ, ಬಿಜೆಪಿಗೆ ಮೋಸ ಮಾಡಿಲ್ಲ"

ತಮಗೆ ಟಿಕೆಟ್ ನೀಡದೆ ಬಿಜೆಪಿ ಮೋಸ ಮಾಡಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ದೇವೇಗೌಡರು ತಳ್ಳಿಹಾಕಿದ್ದಾರೆ. "ರಾಜಕೀಯದಲ್ಲಿ ನಾನು ಏಳು ದಶಕಗಳನ್ನು ಕಳೆದಿದ್ದೇನೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯವರೆಗೆ ಜನಪರ ಸೇವೆ ಮಾಡಿದ್ದೇನೆ. ನನಗೆ ಮತ್ತೆ ರಾಜ್ಯಸಭೆಗೆ ಹೋಗಬೇಕು ಎಂಬ ವ್ಯಾಮೋಹ ಇದ್ದಿದ್ದರೆ ನಾನೇ ದೆಹಲಿಗೆ ಹೋಗಿ ಬಿಜೆಪಿ ಮುಖಂಡರನ್ನು ಭೇಟಿ ಮಾಡುತ್ತಿದ್ದೆ. ಆದರೆ, ನಾನಾಗಲಿ ಅಥವಾ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಾಗಲಿ ಈ ಬಗ್ಗೆ ಯಾರ ಬಳಿಯೂ ಬೇಡಿಕೆ ಇಟ್ಟಿರಲಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

HD Deve Gowda

ಸಂಖ್ಯಾಬಲದ ವಾಸ್ತವ ಬಿಚ್ಚಿಟ್ಟ ದೊಡ್ಡಗೌಡರು

ಕೇವಲ 18 ಶಾಸಕರನ್ನು ಹೊಂದಿರುವ ಜೆಡಿಎಸ್ ಪಕ್ಷವು ರಾಜ್ಯಸಭಾ ಸೀಟಿಗೆ ಹಠ ಹಿಡಿಯುವುದು ತಾರ್ಕಿಕವಾಗಿ ಸರಿಯಲ್ಲ ಎಂಬುದನ್ನು ಗೌಡರು ನೆನಪಿಸಿದರು. "ನಮ್ಮ ಪಕ್ಷದ ಮುಖಂಡರು, ಹಿತೈಷಿಗಳು ಹಾಗೂ ಕಾರ್ಯಕರ್ತರು ನಾನು ಮತ್ತೊಮ್ಮೆ ಆಯ್ಕೆಯಾಗಬೇಕೆಂದು ಆಶಿಸಿದ್ದು ನಿಜ. ಆದರೆ ವಾಸ್ತವವಾಗಿ ಬಿಜೆಪಿಗೆ ಒಂದು ಸೀಟು ಸಿಗುವ ಅವಕಾಶವಿತ್ತು. ಹೀಗಾಗಿ ಕುಮಾರಸ್ವಾಮಿ ಅವರು ಮೊದಲೇ ನಾವು ರಾಜ್ಯಸಭೆ ಆಕಾಂಕ್ಷಿಗಳಲ್ಲ ಎಂದು ಹೇಳಿದ್ದರು. ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆಗಳಾಗುತ್ತಿದ್ದ ಕಾರಣಕ್ಕೆ ನಾನು ಎರಡು ದಿನ ಟಿವಿ ನೋಡುವುದನ್ನೇ ಬಂದ್ ಮಾಡಿದ್ದೆ" ಎಂದು ಬೇಸರ ವ್ಯಕ್ತಪಡಿಸಿದರು.

"ಡಿಕೆ ಶಿವಕುಮಾರ್ ಸರ್ಕಾರಕ್ಕೆ ಹೊಸ ಸಂಕಷ್ಟ; ಟೂಲ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ''

ಪ್ರಧಾನಿ ಮೋದಿ ನಾಯಕತ್ವಕ್ಕೆ ಸಾಥ್

ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಗೆ ಅತ್ಯಂತ ಉತ್ತಮವಾದ ವೈಯಕ್ತಿಕ ಒಡನಾಟವಿದೆ ಎಂದು ದೇವೇಗೌಡರು ಹೇಳಿದರು. "ಮೋದಿ ಅವರು ದೇಶಕ್ಕೆ ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ. ತಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬಂದಾಗಲೂ ಅವರು ಮೈತ್ರಿ ಧರ್ಮವನ್ನು ಗೌರವಿಸಿ, ಮಿತ್ರ ಪಕ್ಷಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ನಾನು ಯಾವಾಗಲೂ ಅವರ ಸಮರ್ಥ ನಾಯಕತ್ವವನ್ನು ಮುಕ್ತವಾಗಿ ಬೆಂಬಲಿಸಿದ್ದೇನೆ. ಒಂದು ಸೀಟು ಸಿಗದ ತಕ್ಷಣ ನಮ್ಮ ನಡುವಿನ ಆತ್ಮೀಯತೆ ಹಾಳಾಗುವುದಿಲ್ಲ" ಎಂದರು.

ವಯಸ್ಸಿನ ಹಂಗಿಲ್ಲದೆ ಪಕ್ಷದ ಸಂಘಟನೆಗಾಗಿ ತಾವು ಶಕ್ತಿ ಮೀರಿ ದುಡಿಯುವುದಾಗಿ ಹೆಚ್‌ಡಿಡಿ ಘೋಷಿಸಿದ್ದಾರೆ. "ನಾನು ಸುಮ್ಮನೆ ಕೂರುವ ಮಗನಲ್ಲ. ಜೆಡಿಎಸ್ ಪಕ್ಷದ ಬೆಳವಣಿಗೆಗೆ ನನ್ನ ಕೊನೆಯ ಉಸಿರಿರುವವರೆಗೂ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ಸಮಸ್ಯೆಗಳ ಬಗ್ಗೆ ಯಾವುದೇ ಮುಲಾಜಿಲ್ಲದೆ ನನ್ನ ಧ್ವನಿ ಎತ್ತುತ್ತಲೇ ಇರುತ್ತೇನೆ" ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+