ತ್ರಿಶಂಕು ಸ್ಥಿತಿಗೆ ತಲುಪಿದ ಜೆಡಿಎಸ್, ಬಿಡುವಂತೂ ಇಲ್ಲ - ಇರುವಂತೂ ಇಲ್ಲ!
ಜೆಡಿಎಸ್ ಇದೀಗ ಅಕ್ಷರಶಃ ತ್ರಿಶಂಕು ಸ್ಥಿತಿ ತಲುಪಿದೆ. 2023ನೇ ಸಾಲಿನಲ್ಲಿ ನಡೆದ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡವು. ಲೋಕಸಭೆ ಚುನಾವಣೆಯಲ್ಲಿ ಈ ಪಕ್ಷಗಳಿಗೆ ಇದು ವರದಾನವೇ ಆಯಿತು. ಜಾತಿ ಸಮೀಕರಣ ಹಾಗೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಇದು ತುಂಬಾನೇ ಸಹಕಾರಿ ಆಯಿತು. ಆದರೆ, ಈಚೆಗೆ ನಡೆದ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಈ ಲೆಕ್ಕಾಚಾರ ತಲೆಕೆಳಗಾಗಿವೆ. ಮೈತ್ರಿ ಅಭ್ಯರ್ಥಿ ಹಾಗೂ ಜೆಡಿಎಸ್‌ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಹೀನಾಯ ಸೋಲು ಕಂಡಿದ್ದಾರೆ. ಇದಾದ ಮೇಲೆ ಜೆಡಿಎಸ್‌ನ ಭವಿಷ್ಯದ ಬಗ್ಗೆ ಹಾಗೂ ಅದರ ತ್ರಿಶಂಕು ಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿದೆ.
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಸಹ ಅದು ರಾಜ್ಯ ಮಟ್ಟದ ನಾಯಕರೊಂದಿಗೆ ಆಗಿಲ್ಲ. ದೆಹಲಿ ಮಟ್ಟದಲ್ಲಿ ಜೆಡಿಎಸ್ ಒಪ್ಪಂದ ಮಾಡಿಕೊಂಡಿತ್ತು. ಹೀಗಾಗಿ, ಬಿಜೆಪಿಯ ನಾಯಕರೊಂದಿಗೆ ಹೇಳಿಕೊಳ್ಳುವಂತಹ ಹೊಂದಾಣಿಕೆ ಜೆಡಿಎಸ್‌ಗೆ ಸಾಧ್ಯವಾಗುತ್ತಿಲ್ಲ.

ರಾಜ್ಯ ಬಿಜೆಪಿ ನಾಯಕರೊಂದಿಗೆ ...
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವೆ ಹೊಂದಾಣಿಕೆ ಕೊರತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರು ಚಲೋ ನಡೆಸುವ ವಿಚಾರದಲ್ಲೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಿರ್ಧಾರಕ್ಕೆ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ವಿಧಾನಸಭೆ ಉಪ ಚುನಾವಣೆ ನಡೆಯವ ಸಮಯದಲ್ಲೂ ಅವರು ನಾವು ಇನ್ನೆಷ್ಟು ಬಗ್ಗಬೇಕು ಎಂದಿದ್ದರು.
ಮುಸ್ಲಿಂ ಸಮುದಾಯದ ಬೆಂಬಲವಿಲ್ಲ
ಇನ್ನು ಯಾವಾಗ ಜೆಡಿಎಸ್ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿತೋ ಆಗಲೇ ಜೆಡಿಎಸ್‌ನಲ್ಲಿದ್ದ ಶೇಕಡ 90ರಷ್ಟು ಮುಸ್ಲಿಂ ನಾಯಕರು ಹಾಗೂ ಪ್ರಮುಖರು ಜೆಡಿಎಸ್ ತೊರೆದು ಕಾಂಗ್ರೆಸ್ ಸರ್ಪಡೆಯಾದರು ಅಲ್ಲದೇ ಇನ್ನೂ ಕೆಲವರು ತಟಸ್ಥ ನಿಲುವು ತಾಳಿದರು. ಅಲ್ಲದೇ ಸದಾ ಜೆಡಿಎಸ್‌ನ ಬೆಂಬಲಕ್ಕೆ ನಿಲ್ಲುತ್ತಿದ್ದ ಹಾಗೂ ಮತ ಚಲಾಯಿಸುತ್ತಿದ್ದ ಮುಸ್ಲಿಂ ಸಮುದಾಯದ ಮತದಾರರು ಸಹ ಇದೀಗ ನಿಖಿಲ್ ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಪರಾಜಿತರಾದ ಮೇಲೆ ನಿಖಿಲ್ ಕುಮಾರಸ್ವಾಮಿ ಅವರು ನಮಗೆ ಆ ನಿರ್ದಿಷ್ಟ ಸಮುದಾಯದ ಬೆಂಬಲ ಸಿಗಲಿಲ್ಲ ಎಂದಿದ್ದಾರೆ. ಆದರೆ, ಜೆಡಿಎಸ್‌ನಿಂದ ಸಾಲು ಸಾಲು ಪ್ರಮುಖ ಮುಸ್ಲಿಂ ನಾಯಕರು ಹೊರ ನಡೆದಾಗ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಜೆಡಿಎಸ್ ಮಾಡಲಿಲ್ಲ.
ಸಿ.ಎಂ ಇಬ್ರಾಹಿಂ ಸೇರಿದಂತೆ ಹಲವು ಮುಸ್ಲಿಂ ಸಮುದಾಯದ ನಾಯಕರು ಜೆಡಿಎಸ್ ತೊರೆದಿದ್ದರು. ಅಲ್ಲದೇ ಕೆಲವು ಜೆಡಿಎಸ್‌ನ ಕಾರ್ಯಕರ್ತರು ಸಹ ಜೆಡಿಎಸ್‌ನಿಂದ ಅಂತರ ಕಾಪಾಡಿಕೊಂಡರು. ಇದು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅನುಭವಕ್ಕೆ ಅಷ್ಟಾಗಿ ಬಂದಂತೆ ಇಲ್ಲ. ಇದೀಗ ವಿಧಾನಸಭೆ ಉಪ ಚುನಾವಣೆಯಲ್ಲಿ ಅದರ ಪ್ರಭಾವ ಎದುರಾಗಿದೆ.
ಬಿಜೆಪಿ ಬಿಟ್ಟು ಬರುವಂತಿಲ್ಲ!
ಮೈತ್ರಿಯಿಂದ ಜೆಡಿಎಸ್‌ಗೆ ಹಿನ್ನಡೆಯಾಗಿದೆ ಎಂದಾದರೂ ಬಿಜೆಪಿ ಪಕ್ಷವನ್ನು ಬಿಟ್ಟು ಬರುವುದಕ್ಕೆ ಜೆಡಿಎಸ್‌ಗೆ ಸವಾಲಾಗಲಿದೆ. ಏಕೆಂದರೆ ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಅಲ್ಲದೇ ಮಂಜುನಾಥ್ ಅವರು ಬಿಜೆಪಿ ಚಿಹ್ನೆಯ ಅಡಿಯಲ್ಲಿ ನಿಂತು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಜೆಡಿಎಸ್ ಯಾವ ರೀತಿಯ ಹೆಜ್ಜೆ ಇರಿಸಲಿದೆ ಎನ್ನುವ ಕುತೂಹಲ ಎದುರಾಗಿದೆ.












Click it and Unblock the Notifications