ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದು ಈ ಕಾರಣಕ್ಕೆ: ಜೆಡಿಎಸ್
ನಾನು ಜೆಡಿಎಸ್‌ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಉಂಡು ಬೆಳೆದ ಜೆಡಿಎಸ್ ಮನೆಗೆ ದ್ರೋಹ ಬಗೆಯುವುದು ಅಲ್ಲದೆ, ಅಪಪ್ರಚಾರ ಮಾಡುವ ನೀಚ ಬುದ್ಧಿಯನ್ನು ಬಿಡಿ ಸಿದ್ದರಾಮಯ್ಯ ಅವರೇ ಎಂದು ಹರಿಹಾಯ್ದಿದೆ. ನೀವು ಈ ಮಟ್ಟಕ್ಕೆ ಬೆಳೆಯಲು ಕಾರಣ ಜೆಡಿಎಸ್ ಪಕ್ಷ ಹಾಗೂ ಹೆಚ್.ಡಿ.ದೇವೇಗೌಡರು ಎನ್ನುವುದನ್ನು ಮರೆಯಬೇಡಿ ಎಂದು ಹೇಳಿದೆ.
ನೀವು ಮುಖ್ಯಮಂತ್ರಿ ಆಗಲು ಖರ್ಗೆ, ಪರಮೇಶ್ವರ್ ಅವರಂತಹ ಹಿರಿಯ ದಲಿತನಾಯಕರನ್ನು ತುಳಿದ ಮನೆಹಾಳು ಬುದ್ಧಿಯನ್ನು ಬಿಡಿ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದೆ. ಚುನಾವಣೆಗಳಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಹಳ್ಳ ತೋಡಿ, ಅಧಿಕಾರದ ಪರಮ ಸುಖ ಅನುಭವಿಸುತ್ತಿರುವ ಮಜಾವಾದಿಯ ಭಸ್ಮಾಸುರ ಗುಣ ಈಗ ಮೂಲ ಕಾಂಗ್ರೆಸ್ಸಿಗರಿಗೆ ಅರ್ಥವಾಗಿ ಸಿಡಿದೆದ್ದಿದ್ದಾರೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ನಾನು ಜೆಡಿಎಸ್‌ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಅವರ ಮಕ್ಕಳು ನನ್ನನ್ನು ಸಿಎಂ ಮಾಡಲು ಬಿಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದರು. ನಾನು ಚಾಮರಾಜನಗರಕ್ಕೆ ಅನೇಕ ಬಾರಿ ಬಂದಿದ್ದೇನೆ. ಈ ಜಿಲ್ಲೆಗೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತೆ ಅನ್ನೋ ಮೌಢ್ಯ ಇದೆ. ಆದರೆ ನಾನು ಇಲ್ಲಿಗೆ ಬಂದು ಹೋದಾಗಲೆಲ್ಲ ನನ್ನ ಸಿಎಂ ಸ್ಥಾನ ಮಾತ್ರವಲ್ಲ, ನಮ್ಮ ಪಕ್ಷದ ಅಧಿಕಾರವೂ ಪದೇ ಪದೇ ಗಟ್ಟಿಯಾಗಿದೆ ಎಂದಿದ್ದರು.
ನಾನು ಮುಖ್ಯಮಂತ್ರಿ ಆದ ನಂತರ ಎಲ್ಲ ಜಾತಿ, ಎಲ್ಲ ಧರ್ಮದವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲಾಗಿದೆ. ಅದರಂತೆ ಚಾಮರಾಜನಗರ ಜಿಲ್ಲೆಯ ಸರ್ವರೂ ನನಗೆ ಸಹಕಾರ ಕೊಟ್ಟಿದ್ದು, ಈ ಜಿಲ್ಲೆಯನ್ನ ನಾನು ಯಾವತ್ತೂ ಮರೆಯಲ್ಲ ಎಂದಿದ್ದರು. ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಅವರ ಟೀಕೆಗೆ ಇದೀಗ ಎಕ್ಸ್‌ನಲ್ಲಿ ತಿರುಗೇಟು ನೀಡಿದೆ.
ಜೆಡಿಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರ ನಿದ್ದೆಗೆಡಿಸಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿಯುವುದಿಲ್ಲ. ಇನ್ನೊಂದು ಪಕ್ಷವನ್ನು ಲಘುವಾಗಿ ತೆಗಳುವುದು, ಅವಹೇಳನ ಮಾಡುವುದನ್ನು ಬಿಡಬೇಕು. ಇನ್ನಾದರು ಕಾಂಗ್ರೆಸ್ ಪಕ್ಷದ ನಾಯಕರು ಜನರ ಮುಂದೆ ತಗ್ಗಿ ಬಗ್ಗಿ ನಡೆಯುವುದನ್ನು ಕಲಿಯಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications