"36ಕ್ಕೂ ಹೆಚ್ಚು ಶಾಸಕರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದಂತಲ್ಲ"
ಜೆಡಿಎಸ್ ಕಾರ್ಯಕರ್ತರು ಸಮಯ ವ್ಯರ್ಥ ಮಾಡದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಡ್ಯ ಕಾರ್ಯಕ್ರಮದಲ್ಲಿ ಕರೆ ನೀಡಿದ್ದರು. ಈ ವಿಚಾರವಾಗಿ ಜೆಡಿಎಸ್ ಪಕ್ಷವು ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದೆ. ಡಿಕೆ ಶಿವಕುಮಾರ್ ಅವರು ಜೆಡಿಎಸ್ ಕಾರ್ಯಕರ್ತರನ್ನು ಸೆಳೆಯುವ ಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದ್ದು, ಇದೇ ವೇಳೆ ಶಾಸಕರ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿರುವ ವಿಚಾರವನ್ನು ಕೂಡ ಜೆಡಿಎಸ್ ಪ್ರಸ್ತಾಪಿಸಿ ತಿರುಗೇಟು ನೀಡಿದೆ. ಈ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದೆ.
ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಸೆಳೆಯುವುದು ಮಸಾಜ್ ಪಾರ್ಲರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು 36ಕ್ಕೂ ಹೆಚ್ಚು ಶಾಸಕರ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿ, ಬ್ಲ್ಯಾಕ್ ಮೇಲ್ ಮಾಡಿದಷ್ಟು ಸುಲಭವಲ್ಲ. ಮಿಸ್ಟರ್ ಸಿಡಿ ಡಿಕೆ ಶಿವಕುಮಾರ್ ಎಂದು ತಿರುಗೇಟು ನೀಡಿದೆ. ಮಣ್ಣಿನಮಗ ಹೆಚ್.ಡಿ.ದೇವೇಗೌಡರು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ, ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಕಟ್ಟಿ ಬೆಳೆಸಿರುವ ಕನ್ನಡಿಗರ ಹೆಮ್ಮೆಯ ಪ್ರಾದೇಶಿಕ ಪಕ್ಷ ಜೆಡಿಎಸ್ ಎಂದು ಹೇಳಿದೆ.

ಪೂರ್ಣ ಬಹುಮತದ ಸರ್ಕಾರವಿದ್ದಾಗಲೂ, ಜೆಡಿಎಸ್ ಪಕ್ಷದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಿಗೆ ಯಾಕಿಷ್ಟು ಭಯ? ಪ್ರಸ್ತುತ ಕಾಂಗ್ರೆಸ್‌ನಲ್ಲಿ ನಿಮ್ಮ ರಾಜಕೀಯ ಬೇಳೆ ಬೇಯುತ್ತಿಲ್ಲವೇ ಪೆನ್ನು ಪೇಪರ್ ನಾಯಕರೇ? ದೇಶದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕಥೆ ಮುಗಿದು ಹೋಗಿದೆ. ಅದರ ಬಗ್ಗೆ ಚಿಂತಿಸಿದರೇ ಲಾಭವಾದೀತು ಎಂದು ಟಾಂಗ್ ನೀಡಿದೆ.
ಗುಪ್ತಚರ, ಗೃಹ ಇಲಾಖೆ ನಿದ್ರೆಗೆ ಜಾರಿದೆ
ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿರುವುದು ರಾಜ್ಯವೇ ತಲೆತಗ್ಗಿಸುವ ಘಟನೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಗುಪ್ತಚರ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ? ಇಂಟಲಿಜೆನ್ಸ್ ನಿಷ್ಕ್ರಿಯವಾಗಿರುವುದಕ್ಕೆ ಈ ಡ್ರಗ್ಸ್ ತಯಾರಿಕಾ ಕಾರ್ಖಾನೆಯ ಬಗ್ಗೆ ಕಿಂಚಿತ್ತು ಸುಳಿವು ಸಹ ಇಲ್ಲದಿರುವುದು ಸೂಕ್ತ ನಿದರ್ಶನ ಎಂದು ಹೇಳಿದೆ.
ರಾಜ್ಯದಲ್ಲಿ ಡ್ರಗ್ಸ್ ಧಂದೆ ಎಗ್ಗಿಲ್ಲದೇ ನಡೆಯುತ್ತಿದ್ದು, ಮಾದಕ ವಸ್ತುಗಳ ಹಾವಳಿ ಯುವಜನತೆಯ ಬದುಕನ್ನು ಸರ್ವನಾಶ ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಾಂಗ್ರೆಸ್ ಕಾರ್ಯಕರ್ತನನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಮಾದಕ ದ್ರವ್ಯ ಸಾಗಾಟ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಕಾರ್ಖಾನೆ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಜೊತೆಗೆ ಗೃಹ ಇಲಾಖೆಯೂ ಸಂಪೂರ್ಣ ಗಾಢನಿದ್ರೆಗೆ ಜಾರಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಸಮರ್ಥ ಗೃಹ ಸಚಿವ ಜಿ.ಪರಮೇಶ್ವರ್ ಮೊದಲು ರಾಜೀನಾಮೆ ಕೊಟ್ಟು ನಿಮ್ಮ ನೈತಿಕತೆ ಉಳಿಸಿಕೊಳ್ಳಿ ಎಂದು ಒತ್ತಾಯಿಸಿದೆ.












Click it and Unblock the Notifications