Congress Guarantees: ಗ್ಯಾರಂಟಿ ಸಮಿತಿ ಅಧ್ಯಕ್ಷನ ಕಾರಿನ ಮೇಲೆ ಸರ್ಕಾರದ ಹೆಸರು, ಲಾಂಛನ ದುರ್ಬಳಕೆ ಆರೋಪ
ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾವಾರು ಸಮಿತಿಗಳನ್ನು ರಚಿಸಿ, ಅವರಿಗೆ ಪ್ರತಿ ತಿಂಗಳು ಸರ್ಕಾರ ಕೋಟಿಗಟ್ಟನೆ ಗೌರವಧನ ನೀಡುತ್ತಿದೆ. ಇದಕ್ಕೆ ರಾಜ್ಯದ ಜನರಿಂದ ವಿರೋಧವೂ ವ್ಯಕ್ತವಾಗಿದೆ. ಗ್ಯಾರಂಟಿ ಯೋಜನೆಗಳ ಹಣ ಇತ್ತೀಚೆಗೆ ಸಕಾಲಕ್ಕೆ ಫಲಾನುಭವಿಗಳ ಕೈಸೇರುತ್ತಿಲ್ಲ ಎನ್ನುವ ದೂರಿನ ನಡುವೆ, ಈ ಅನುಷ್ಠಾನ ಸಮಿತಿಗೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಗ್ಯಾರಂಟಿ ಸಮಿತಿಯ ಅಧ್ಯಕ್ಷರೊಬ್ಬರು ತನ್ನ ಕಾರಿನ ಮೇಲೆ ಸರ್ಕಾರದ ಹೆಸರು, ಲಾಂಛನ ಹಾಕಿಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಜೆಡಿಎಸ್ ಫೋಟೋಗಳನ್ನು ಹಂಚಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ವಿಜಯಪುರ ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್ನಲಾದ ಕುರಿ ಶಿವಮೂರ್ತಿ ಎಂಬುವವರ ಮೇಲೆ ಈ ಆರೋಪ ಕೇಳಿಬಂದಿದೆ. ಇವರು ತಮ್ಮ ಖಾಸಗಿ ವಾಹನದ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪುಡಾರಿಗಳ ಕಾರುಬಾರು ಜೋರಾಗಿದೆ. ಗ್ಯಾರಂಟಿ ಅನುಷ್ಠಾನ, ಮೌಲ್ಯಮಾಪನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ಕಾನೂನು ಬಾಹಿರವಾಗಿ ನೇಮಿಸಿಕೊಂಡು, ಅವರಿಗೆ ಸಂಬಳ, ಭತ್ಯೆಗಾಗಿ ವರ್ಷಕ್ಕೆ 72 ಕೋಟಿ ರೂ. ಸರ್ಕಾರದ ಬೊಕ್ಕಸದ ಹಣ ಪೋಲು ಮಾಡಲಾಗುತ್ತಿದೆ. ಲೂಟಿಕೋರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರದ ಒಡ್ಡೋಲಗದಲ್ಲಿ ಕಾರ್ಯಕರ್ತರಿಗೆ ಬಿಟ್ಟಿ ಸಂಬಳ ನೀಡಿ ಕೊಬ್ಬಿಸಲಾಗುತ್ತಿದೆ ಎಂದು ಆರೋಪಿಸಿದೆ.
ಗ್ಯಾರಂಟಿ ಸಮಿತಿಗೆ ನೇಮಕವಾಗಿರುವ ಬರಗೆಟ್ಟ ಕಾಂಗ್ರೆಸ್ ಪುಡಾರಿಗಳು ಜನರಿಂದ ಆಯ್ಕೆಯಾದ ಶಾಸಕರಿಗಿಂತಲೂ ಹೆಚ್ಚು ಮೆರೆಯುತ್ತಿದ್ದಾರೆ. ಜನರ ಬೆವರಿನ ತೆರಿಗೆ ಹಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಾತ್ರೆ ಮಾಡುತ್ತಿದ್ದಾರೆ. ವೈಯಕ್ತಿಕ ಬಳಕೆಯ ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರದ ಹೆಸರು, ಚಿಹ್ನೆ ಮತ್ತು ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಪೊಲೀಸರು ಅನಧಿಕೃತವಾಗಿ ಸರ್ಕಾರದ ಚಿಹ್ನೆ, ಹೆಸರು, ಲಾಂಛನವನ್ನು ಬಳಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಸತ್ಯ ಹೊತ್ತವನು ಕೆರೆಗೆ ಹೋದ, ಸುಳ್ಳು ಹೊತ್ತವನು ಅರಮನೆಗೆ ಹೋದಂತೆ ಬರಿ ಕಾಕಾ ಪಾಟೀಲ್ ಮತ್ತು ಮಹದೇವಪ್ಪನಿಗೆ ಸರಕಾರದ ಬೊಕ್ಕಸದಿಂದ ಸಂಬಳ ಫ್ರೀ! ಗ್ಯಾರಂಟಿ ಸಮಿತಿ ಸದಸ್ಯರಿಗೆ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಂಬಳ, ಆದರೆ ಫಲಾನುಭವಿಗಳಿಗೆ ಇನ್ನು ಗ್ಯಾರಂಟಿ ಹಣ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರಿಗೆ ಬಿಜೆಪಿ ದೂರು
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಿಗೆ ವೇತನ ನೀಡುವುದಾದರೆ, ತಹಶೀಲ್ದಾರ್, ಇಎಒ ಅವರೆಲ್ಲಾ ಇರುವುದೇಕೆ? ಎಂದು ಬಿಜೆಪಿ ನಾಯಕರು ಸದನದಲ್ಲಿ ಆಕ್ರೋಶ ಹೊರಹಾಕಿದ್ದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ವೇತನ ನೀಡುವುದಾದರೆ, ಸರ್ಕಾರಿ ಅಧಿಕಾರಿಗಳ ಅವರ ವೇತನ ಕಡಿತ ಮಾಡಲಿ. ತೆರಿಗೆ ಹಣವನ್ನು ಗ್ಯಾರಂಟಿ ಅನುಷ್ಠಾನ ಸಮಿತಿಗೆ ವ್ಯಯಿಸುವುದು ಸರಿಯಲ್ಲ ಎಂದು ವಿರೋಧಿಸಿದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿರುವ ಕಾಂಗ್ರೆಸ್ ಸರ್ಕಾರದ ಅಸಂವಿಧಾನಿಕ ನಡೆಯನ್ನು ಖಂಡಿಸಿ ಮತ್ತು ಕಾನೂನುಬಾಹಿರವಾಗಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುರಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ದೂರು ಕೂಡ ಸಲ್ಲಿಸಿದ್ದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಶಾಸಕರ ಹಕ್ಕುಗಳ ಹರಣವಾಗಿದೆ. ಕಾಂಗ್ರೆಸ್ ಸರ್ಕಾರವು ಅಸಾಂವಿಧಾನಿಕವಾಗಿ ಶಾಸಕರ ಹಕ್ಕುಗಳನ್ನು ಕಡಿತ ಮಾಡುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ನೇಮಕಾತಿ ಜನಪ್ರತಿನಿಧಿಗಳ ಅಧಿಕಾರವನ್ನು ದೋಷಪೂರಿತವಾಗಿ ನಿರ್ಬಂಧಿಸುವ ಕ್ರಮವಾಗಿದೆ. ಇದು ಪ್ರಜಾಪ್ರಭುತ್ವದ ತಾತ್ತ್ವಿಕ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಆರೋಪಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರನ್ನು ಭೇಟಿಯಾಗಿ ಜನರ ತೆರಿಗೆ ಹಣದ ದುರುಪಯೋಗವನ್ನು ತಕ್ಷಣ ನಿಲ್ಲಿಸಲು ಮತ್ತು ಸಂವಿಧಾನಬದ್ಧ ಆಡಳಿತವನ್ನು ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು.
ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸವಾಗುತ್ತಿರುವ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ. ಗ್ಯಾರಂಟಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಿದ್ದು, ರಾಜ್ಯದ ಜನರ ತೆರಿಗೆ ಹಣದ ದುರುಪಯೋಗವಾಗಲಿದೆ. ಇದು ಸಂಪೂರ್ಣವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಅಸಂವಿಧಾನಿಕ ನಡೆ ಎಂಬುದನ್ನು ಗೌರವಾನ್ವಿತ ರಾಜ್ಯಪಾಲರ ಗಮನಕ್ಕೆ ತರಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದರು.
ಗ್ಯಾರಂಟಿ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ಸಿಎಂ
ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಜಾರಿ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಶಾಸಕರ ಕಚೇರಿಗೂ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದಾರೆ. ಗ್ಯಾರಂಟಿ ಸಮಿತಿಗಳಿಂದ ತಾಲ್ಲೂಕುಗಳಲ್ಲಿ ಶಾಸಕರ ಘನತೆಗೆ, ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿವೇಶನ ಮುಗಿಯುತ್ತಿದ್ದಂತೆ ಈ ಬಗ್ಗೆ ಸಭೆ ಕರೆದು ತಕರಾರುಗಳನ್ನು ಪರಿಹರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ, ಮೊದಲು ಗ್ಯಾರಂಟಿ ನಡೆಯುವುದಿಲ್ಲ ಎಂದು ಹೇಳಿದರು, ನಾವು ಗ್ಯಾರಂಟಿ ಕೊಟ್ಟೆವು. ಈಗ ಗ್ಯಾರಂಟಿ ಅನುಷ್ಠಾನ ಸಮಿತಿ ಬಗ್ಗೆ ಮಾತನಾಡುತ್ತಿದ್ದಾರೆ. ಸಮಿತಿ ರಚನೆಯಾಗಿ ಒಂದೂವರೆ ವರ್ಷವಾಗಿದೆ, ಇಲ್ಲಿಯವರೆಗೂ ನಿದ್ದೆ ಮಾಡುತ್ತಿದ್ರಾ? ಇಲ್ಲಿಯವರೆಗೂ 3 ಸದನಗಳು ನಡೆದಿವೆ. ಈಗ ಜ್ಞಾನೋದವಾಯ್ತಾ? ಬಿಜೆಪಿಯವರಿಗೆ ಎಲ್ಲದಕ್ಕೂ ನೆಪ ಬೇಕು. ಅದಕ್ಕಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದರು.












Click it and Unblock the Notifications