9 ಚಿನ್ನದ ಪದಕ ಮುಡಿಗೇರಿಸಿಕೊಂಡ ಜಯಶ್ರೀ, ಧಾರವಾಡ ಮಣ್ಣಿಗೆ ಋಣಿ ಎಂದಿದ್ಯಾಕೆ
ಧಾರವಾಡದಲ್ಲಿ ಆಶಾಕಾರ್ಯಕರ್ತೆಯೊಬ್ಬರ ಪುತ್ರಿ ಅಮೋಘ ಸಾಧನೆ ಮಾಡಿದ್ದಾರೆ. ಜಯಶ್ರೀ ತಳವಾರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬರೋಬ್ಬರಿ 9 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನನ್ನ ಈ ಸಾಧನೆಗೆ ತಾಯಿಯ ಪರಿಶ್ರಮವೇ ಕಾರಣ ಎಂದು ಜಯಶ್ರೀ ಅವರು ಹೇಳಿದ್ದಾರೆ. ಬಡ ಕುಟುಂಬದ ಹಾಗೂ ಫಸ್ಟ್ ಡಿಗ್ರಿ ತಲೆಮಾರಿನ ಜಯಶ್ರೀ ಅವರು 9 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಧಾರವಾಡದ ಮಣ್ಣಿನ ನಾನು ಋಣಿ ಎಂದಿದ್ದಾರೆ.
ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯಿತಿಯ ಸಹಾಯಕರ ಪುತ್ರಿ ಜಯಶ್ರೀ ತಳವಾರ ಅವರು 9 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಅವರು ಪ್ರವೇಶ ಪಡೆದಿದ್ದರು. 2023-24ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ. ಮಂಗಳವಾರ ( ಸೆ.24ರಂದು) ಧಾರವಾಡದ ಗಾಂಧೀ ಭವನದಲ್ಲಿ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ಪದಕ ಪ್ರದಾನ ಮಾಡಿದ್ದಾರೆ.

ಧಾರವಾಡ ಮಣ್ಣಿಗೆ ಋಣಿ
ಈ ನನ್ನ ಸಾಧನೆಗೆ ಧಾರವಾಡ ಮಂದಿಯ ಸಹಕಾರ ತುಂಬಾ ಇದೆ. ನನ್ನ ಸಾಧನೆಗೆ ಸದಾಕಾಲ ಒತ್ತಾಸೆಯಾಗಿ ನಿಂತ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ. ಹಳ್ಳಿಯ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂಥವರಿಗೆ ಓದಿನ ರುಚಿ ಹತ್ತಿಸಿದ ಧಾರವಾಡ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ನಮ್ಮಂಥ ಬಡ ಹುಡುಗಿಯರಿಗೆ ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎಂದು ಭಾವುಕರಾಗಿ ಮಾತನಾಡಿದ್ದಾರೆ ಜಯಶ್ರೀ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ ತಳವಾರ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಜಯಶ್ರೀ ಅವರ ತಾಯಿ ಮಂಜುಳಾ ಮಹಾಂತೇಶ ತಳವಾರ ಆಶಾ ಕಾರ್ಯಕರ್ತೆಯಾಗಿದ್ದಾರೆ. ತಂದೆ ಮಹಾಂತೇಶ ಹುನಗುಂದ ತಾಲ್ಲೂಕಿನ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯತನ ಗ್ರೂಪ್ ಡಿ ದರ್ಜೆಯ ಸಹಾಯಕರಾಗಿದ್ದಾರೆ.
ಬಡ ಕುಟುಂಬದಿಂದ ಬಂದ ಜಯಶ್ರೀ
ಜಯಶ್ರೀ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾರೆ. ನನ್ನ ವಿದ್ಯಾಭ್ಯಾಸಕ್ಕೆ ನನ್ನ ಅಕ್ಕ ಜ್ಯೋತಿ ತಳವಾರ ಅವರು ಬೆನ್ನೆಲುಬಾಗಿ ನಿಂತಿದ್ದರು. ಅವರು ಸಹ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸೈನ್ಸ್ ಮುಗಿಸಿದ್ದಾರೆ. ಅವರು ನನ್ನ ವಿದ್ಯಾಭ್ಯಾಸ ಮಾಡುವಾಗ ಸಹಾಯ ಮಾಡುತ್ತಿದ್ದರು. ತಂದೆ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಸಿಪಾಯಿ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಆಶಾ ಕಾರ್ಯಕರ್ತೆಯಾಗಿದ್ದಾರೆ.
ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಜಯಶ್ರೀ ಅವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡಿರುವ ಸಾಧನೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಜಯಶ್ರೀ ತಳವಾರ ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಪೂರೈಸಿದ್ದಾರೆ. ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದಿದ್ದಾರೆ. ನನ್ನ ತಾಯಿಯ ದುಡಿಮೆ, ಅವರು ರೂಢಿಸಿಕೊಂಡ ಪ್ರಾಮಾಣಿಕತೆ ಹಾಗೂ ಒಳ್ಳೆಯವರಾಗಿ ಬಾಳಬೇಕು ಎನ್ನುವ ಅವರ ಆದರ್ಶ ವಿಚಾರಗಳೇ ನನಗೆ ಹಾಗೂ ನನ್ನ ಓದಿಗೆ ಸದಾಕಾಲ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications