ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ಜೂ.27ಕ್ಕೆ ಮುಂದೂಡಿಕೆ
ಬೆಂಗಳೂರು ಮೇ 30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜೂ.27ಕ್ಕೆ ಮುಂದೂಡಿದೆ. ಸಂತ್ರಸ್ತ ಯುವತಿ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದಮಂಡನೆಗೆ ಸಮಯ ಕೋರಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.
ಯುವತಿ ಎಸ್ಐಟಿ ತನಿಖೆ ಪ್ರಶ್ನಿಸಿ ಸಲ್ಲಿಸಿರುವ ಮತ್ತು ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ, ಶ್ರವಣ್ ವಿರುದ್ಧದ ಕೇಸ್ ರದ್ದು ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರೆಡೂ ಸೋಮವಾರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದವು. ಹೈಕೋರ್ಟ್ ಈ ಹಿಂದೆ, ಈಗಾಗಲೇ ಎಸ್ಐಟಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ, ಹಾಗಾಗಿ ಎಸ್ಐಟಿ ರಚನೆ ಕಾನೂನುಬದ್ದತೆ ಬಗ್ಗೆ ತೀರ್ಮಾನಿಸುವಂತೆ ಸೂಚಿಸಿತ್ತು. ಜೊತೆಗೆ ಸುಪ್ರೀಂಕೋರ್ಟ್, ಬಿ ರಿಪೋರ್ಟ್ ಆಧರಿಸಿ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ ಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಏಕಸದಸ್ಯಪೀಠ ಏನು ಹೇಳಿತ್ತು?
ಕಳೆದ ಮಾ. 28ರಂದು ಹೈಕೋರ್ಟ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ವಿಶೇಷ ನ್ಯಾಯಪೀಠಕ್ಕೆ ವರ್ಗಾಯಿಸಿತ್ತು. ಹಾಗಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಾರಕಿಹೊಳಿ ಜನಪ್ರತಿನಿಧಿಯಾಗಿರುವುದರಿಂದ ಮತ್ತು ಅವರ ಮೇಲೆಯೇ ನೇರ ಆರೋಪ ಇರುವುದರಿಂದ ವಿಶೇಷ ಕೋರ್ಟ್ ವಿಚಾರಣೆ ನಡೆಸುವುದು ಸೂಕ್ತವೆಂದು ಏಕಸದಸ್ಯಪೀಠ ಹೇಳಿದೆ.

ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಆದೇಶ ಪ್ರಶ್ನಿಸಿ ಮತ್ತು ರಮೇಶ್ ಜಾರಕಿಹೊಳಿ ಕಬ್ಬನ್ ಪಾರ್ಕ್ ಠಾಣೆಗೆ ನೀಡಿದ್ದ ಬ್ಲಾಕ್‌ಮೇಲ್ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಎರಡು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆಗ ಪ್ರಕರಣದ ವಿವರಗಳನ್ನು ಗಮನಿಸಿದ ನ್ಯಾಯಮೂರ್ತಿಗಳು, ಸಿಡಿ ಪ್ರಕರಣದಲ್ಲಿ
ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಲಿ ಶಾಸಕರಾಗಿದ್ದಾರೆ. ಹೈಕೋರ್ಟ್‌ನಲ್ಲಿ ಮಾಜಿ-ಹಾಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಪೀಠವಿದೆ. ಹಾಗಾಗಿ, ಆ ನ್ಯಾಯಪೀಠದ ಮುಂದೆ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿ ಆದೇಶಿಸಲು ಕಡತವನ್ನು ಸಿಜೆ ಮುಂದೆ ಮಂಡಿಸುವಂತೆ ರಿಜಿಸ್ಟ್ರಾರ್ ಜನರಲ್ ಗೆ ಸೂಚಿಸಿದರು.

ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಎಸ್‌ಐಟಿ ರಚನೆ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಪ್ರಮುಖ ಕೋರಿಕೆಗಳಿವೆ. ಆ ಕುರಿತು ನಿಮ್ಮಪೀಠವೇ ವಾದ ಆಲಿಸಬೇಕೆಂದರು.
ಆದರೆ ಜಡ್ಜ್, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ಆಲಿಸಲು ವಿಶೇಷ ಪೀಠ ರಚಿಸಿ ಈ ಹಿಂದೆಯೇ ಮುಖ್ಯ ನ್ಯಾಯಮೂರ್ತಿಗಳ ಆದೇಶ ಮಾಡಿದ್ದಾರೆ. ಹೀಗಾಗಿ, ನಾವು ಆ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪಿಐಎಲ್ ವಿಲೇವಾರಿ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ
ಆದೇಶ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಮಾ.10ರಂದು ವಿಲೇವಾರಿ ಮಾಡಿತ್ತು. ಆದರೆ ಎಸ್ ಐ ಟಿ ರಚನೆ ಪ್ರಶ್ನಿಸಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಏಕಸದಸ್ಯಪೀಠಕ್ಕೆ ವರ್ಗಾಯಿಸಿದೆ.












Click it and Unblock the Notifications