Breaking; ಜನಾರ್ದನ ರೆಡ್ಡಿಗೆ ಬಿಗ್ ಶಾಕ್ ನೀಡಿದ ಬಿಜೆಪಿ ಸರ್ಕಾರ!
ಬೆಂಗಳೂರು, ಜನವರಿ 12; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಕರ್ನಾಟಕದ ಬಿಜೆಪಿ ಸರ್ಕಾರ ಬಿಗ್ ಶಾಕ್ ನೀಡಿದೆ. ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಸರ್ಕಾರ ಈ ಕ್ರಮ ಕೈಗೊಂಡಿದೆ.
ಗುರುವಾರ ಕರ್ನಾಟಕ ಸರ್ಕಾರ ಜನಾರ್ದನ ರೆಡ್ಡಿಗೆ ಸೇರಿದ 219 ಹೆಚ್ಚುವರಿ ಆಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಕ್ಕೆ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದೆ. ರಾಜ್ಯ ಗೃಹ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಜನಾರರ್ದನ ರೆಡ್ಡಿಗೆ ಸೇರಿದ ಆಸ್ತಿ ಜಪ್ತಿ ಪ್ರಕ್ರಿಯೆ ಆರಂಭಿಸಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಕರ್ನಾಟಕ ಸರ್ಕಾರದ ಮುಖ್ಯ ಕಾಯದರ್ಶಿಗೆ 2022ರ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಅನುಮತಿ ನೀಡಿರಲಿಲ್ಲ.

ಆದ್ದರಿಂದ ಸಿಬಿಐ ತಾನು ಸಲ್ಲಿಕೆ ಮಾಡಿರುವ ಅರ್ಜಿಗೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಏನಿದು ಪ್ರಕರಣ?; ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಆರೋಪಿ. ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕಾಗಿ 2022ರ ಆಗಸ್ಟ್‌ನಲ್ಲಿ ಸಲ್ಲಿಸಿರುವ ಮನವಿಯನ್ನು ಶೀಘ್ರದಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಕ್ರಮವಾಗಿ ಗಳಿಸಿರುವ ಆಸ್ತಿಗಳನ್ನು ಕ್ರಿಮಿನಲ್ ಕಾನೂನುಗಳ (ತಿದ್ದುಪಡಿ) ಸುಗ್ರೀವಾಜ್ಞೆ ಕಾಯಿದೆ 1994ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕು.
ಈ ಸಂಬಂಧ ವಿಶೇಷ ನ್ಯಾಯಲದಲ್ಲಿ ಮನವಿ ಮಾಡಬೇಕಾಗಿದೆ. ಆದ್ದರಿಂದ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಸಿಬಿಐ ಅರ್ಜಿಯಲ್ಲಿ ಹೇಳಿತ್ತು.
ಅನುಮತಿ ನೀಡಲು ವಿಳಂಬ: ಸುಪ್ರಿಂಕೋರ್ಟ್ ನಿರ್ದೇಶನದಂತೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಸರ್ಕಾರದ ಬೊಕ್ಕಸಕ್ಕೆ 198 ಕೋಟಿ ರೂ. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಮತ್ತಿತರ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಸಿಬಿಐ ಜನಾರ್ದನ ರೆಡ್ಡಿಗೆ ಸೇರಿದ 65 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಳ್ಳಲು ಸಿಬಿಐ ಗುರುತಿಸಿತ್ತು. ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ನ್ಯಾಯಾಲಯದಿಂದ ಪ್ರಕ್ರಿಯೆ ಆರಂಭಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿತ್ತು.
ನಂತರ ಹೆಚ್ಚುವರಿ ತನಿಖೆ ನಡೆಸಿ ಸಿಬಿಐ 19 ಕೋಟಿ ರೂ. ಮೌಲ್ಯದ 214 ಹೆಚ್ಚುವರಿ ಆಸ್ತಿ ಗುರುತಿಸಲಾಗಿದೆ. ಅದನ್ನು ಜಪ್ತಿ ಪ್ರಕ್ರಿಯೆ ಆರಂಭಿಸಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರದ ಮುಖ್ಯ ಕಾಯದರ್ಶಿಗೆ ಸಿಬಿಐ ಪತ್ರ ಬರೆದಿತ್ತು.












Click it and Unblock the Notifications