ರೆಡ್ಡಿಗೆ ಕರ್ನಾಟಕ ಎಲ್ಲಾ ಪ್ರಕರಣದಲ್ಲಿ ಜಾಮೀನು ಸಿಕ್ತು
ಬೆಂಗಳೂರು, ಡಿ.6 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ 10 ಆರೋಪಿಗಳಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಜನಾರ್ದನ ರೆಡ್ಡಿ ಅವರ ವಿರುದ್ಧ ಕರ್ನಾಟಕದಲ್ಲಿ ದಾಖಲಾಗಿದ್ದ ಐದು ಕೇಸ್‌ಗಳಲ್ಲಿಯೂ ಅವರಿಗೆ ಜಾಮೀನು ದೊರಕಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿತ್ತು. ಜನಾರ್ದನ ರೆಡ್ಡಿ, ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್‌ಬಾಬು, ಆನಂದ್‌ಸಿಂಗ್ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 18 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಶನಿವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿ, ಕೂಡ್ಲಿಗಿ ಶಾಸಕ ನಾಗೇಂದ್ರ, ರೆಡ್ಡಿ ಆಪ್ತ ಅಲಿಖಾನ್, ಖಾರದಪುಡಿ ಮಹೇಶ ಸೇರಿದಂತೆ 10 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಬೇಲೇಕೇರಿ ಅದಿರು ನಾಪತ್ತೆ, ಅಧಿಕಾರಿಗಳಿಗೆ ಲಂಚ ನೀಡಿರುವುದು ಸೇರಿದಂತೆ ರೆಡ್ಡಿ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಈಗ ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಸಿಕ್ಕಿದೆ. [ಗಾಲಿ ರೆಡ್ಡಿಗೆ ಇನ್ನೊಂದು ಕೇಸಲ್ಲಿ ಜಾಮೀನು ಸಿಕ್ತು]
ಜೈಲಿನಿಂದ ಹೊರಬರಲು ಒಂದೇ ಮೆಟ್ಟಿಲು : ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಅವಿಭಜಿತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ರಾಯದುರ್ಗ ತಾಲೂಕಿನ ಓಬಳಾಪುರಂ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿ ಸಾಕಷ್ಟು ಅಕ್ರಮ ನಡೆಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಆ ಪ್ರಕರಣದಲ್ಲಿ ಜಾಮೀನು ಸಿಕ್ಕರೆ ರೆಡ್ಡಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. [ಎಎಂಸಿ ಪ್ರಕರಣದಲ್ಲಿ ರೆಡ್ಡಿಗೆ ಜಾಮೀನು]
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿ ಸೆಪ್ಟೆಂಬರ್ 5ಕ್ಕೆ ಮೂರು ವರ್ಷಗಳು ಕಳೆದಿವೆ. ಸದ್ಯ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಕರ್ನಾಟಕದ ಎಲ್ಲಾ ಕೇಸ್‌ಗಳಲ್ಲಿಯೂ ಜಾಮೀನು ದೊರೆತಿದೆ. ರೆಡ್ಡಿ ಪರ ವಕೀಲರು ಮನವಿ ಸಲ್ಲಿಸಿದರೆ, ಅವರನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರ ಮಾಡಬಹುದಾಗಿದೆ.

ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳು
* ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಅವಿಭಜಿತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ರಾಯದುರ್ಗ ತಾಲೂಕಿನ ಓಬುಳಾಪುರಂ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿ ಸಾಕಷ್ಟು ಅಕ್ರಮ ನಡೆಸಿತ್ತು. ಈ ಬಗ್ಗೆ ಆಂಧ್ರಪ್ರದೇಶದಲ್ಲಿ ಪ್ರಕರಣ ದಾಖಲಾಗಿದ್ದು, ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ.
* 2012ರ ಅಸೋಸಿಯೇಟೆಡ್ ಮೈನಿಂಗ್ ಕಂಪನಿ, ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಗಳಲ್ಲೂ ಜನಾರ್ದನ ರೆಡ್ಡಿ ಅವರು ಪ್ರಮುಖ ಆರೋಪಿಯಾಗಿದ್ದರು ಇದರಲ್ಲಿ ಈಗಾಗಲೇ ಜಾಮೀನು ಸಿಕ್ಕಿದೆ.
* ಜನಾರ್ದನ ರೆಡ್ಡಿಯವರನ್ನು ಆಂಧ್ರಪ್ರದೇಶದ ಸಿಬಿಐ ವಶದಿಂದ ಬಿಡಿಸಲು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಕಂಪ್ಲಿಯ ಶಾಸಕ ಸುರೇಶ್‌ಬಾಬು ಸಿಬಿಐ ನ್ಯಾಯಾಧೀಶ ಚಲಪತಿರಾವ್ ಅವರಿಗೆ ಕೋಟ್ಯಂತರ ರೂ.ಗಳ ಲಂಚ ನೀಡಿದ ಪ್ರಕರಣದಲ್ಲೂ ಅವರು ಪ್ರಮುಖ ಆರೋಪಿಯಾಗಿದ್ದರು.
ಅಂದಹಾಗೆ 2011ರ ಸೆಪ್ಟೆಂಬರ್ 5ರಂದು ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮೀನಾರಾಯಣ ಅವರು, ಜನಾರ್ದನ ರೆಡ್ಡಿ ಹಾಗೂ ಓಎಂಸಿಯ ಎಚ್.ಡಿ. ಶ್ರೀನಿವಾಸ ರೆಡ್ಡಿ ಅವರನ್ನು ಮುಂಜಾನೆ ಬಂಧಿಸಿ ಹೈದ್ರಾಬಾದ್ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.












Click it and Unblock the Notifications