Jan Ki Baat Pre Poll Survey: ಹಳೆ ಮೈಸೂರು ಭಾಗದಲ್ಲಿ ಹಸ್ತಕ್ಕೆ ಅಸ್ತು ಎಂದ ಮತದಾರರು
ರಾಜ್ಯ ರಾಜಕೀಯದಲ್ಲಿ ವಿಧಾನಸಭಾ ಚುನಾವಣೆಯ ಕಿಚ್ಚು ಹೆಚ್ಚಾಗುತ್ತಿದೆ. ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಮುನ್ನವೇ ಹಲವಾರು ಸಮೀಕ್ಷೆಗಳು ನಡೆದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದೇ ಘೋಷಣೆ ಮಾಡಿದ್ದವು. ಆದರೀಗ ಬಿಡುಗಡೆಗೊಂಡ ಸಮೀಕ್ಷೆ ಭಾರೀ ಕುತೂಹಲವನ್ನು ಮೂಡಿಸಿದೆ. ಇಂದು (ಏಪ್ರಿಲ್ 14) ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ವರದಿಯನ್ನು ಸುವರ್ಣ ನ್ಯೂಸ್ ಬಿಡುಗಡೆ ಮಾಡಿದೆ.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲ ಪೈಪೋಟಿ ನೀಡೆಸಲಿವೆ. ಬಹುತೇಕ ಕ್ಷೇತ್ರಗಳಲ್ಲಿ ಅಳೆದು ತೂಗಿ ಅಭ್ಯರ್ಥಿಗಳನ್ನು ಮೂರು ಪ್ರಬಲ ಪಕ್ಷಗಳು ಆಯ್ಕೆ ಮಾಡಿವೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆನ್ನುವ ಕುತೂಹಲ ಹೆಚ್ಚಾಗಿದೆ.

ಜನ್ ಕಿ ಬಾತ್ ಸಮೀಕ್ಷೆಯ ವರದಿ ಪ್ರಕಾರ ಹಳೆ ಮೈಸೂರು ಭಾಗದ ಒಟ್ಟು 57 ಸ್ಥಾನಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 23, ಜೆಡಿಎಸ್ 22 ಕ್ಷೇತ್ರಗಳಲ್ಲಿ ಗೆಲುವುದು ಸಾಧಿಸಲಿದೆ. ಸಮೀಕ್ಷೆಯಂತೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಟಫ್ ಕಾಂಪಿಟೇಷನ್ ನೀಡಲಿದೆ. ಜೊತೆಗೆ ಬಿಜೆಪಿ ಹೀನಾಯ ಸೋಲು ಕಾಣಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಹುತೇಕ ಸ್ಥಾನಗಳಲ್ಲಿ ಗೆದ್ದು ಬೀಗಲಿದೆ ಎಂದು ಸಮೀಕ್ಷೆ ಹೇಳುತ್ತದೆ.
ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 98-109 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಕಾಂಗ್ರೆಸ್ 89-97 ಸೀಟುಗಳನ್ನು ಪಡೆಯಲಿದೆ. ಸಮೀಕ್ಷೆ ಪ್ರಕಾರ ಈ ಬಾರಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಸಮೀಕ್ಷೆಯ ವರದಿ ಭಾರೀ ಕುತೂಹಲವನ್ನು ಮೂಡಿಸಿದೆ.
ಜನ್ ಕಿ ಬಾತ್ ಪ್ರಧಾನ ಸಂಪಾದಕ ಪ್ರದೀಪ್ ಭಂಡಾರಿ ದೇಶದ ಅತ್ಯುತ್ತಮ ಚುನಾವಣಾ ತಜ್ಞರಲ್ಲಿ ಒಬ್ಬರು. ದೇಶದ ಚುನಾವಣಾ ಪೂರ್ವ ಸಮೀಕ್ಷೆಗಳಾಗಲಿ, ಮತಗಟ್ಟೆ ಸಮೀಕ್ಷೆಗಳಾಗಲಿ, ವಸ್ತು ನಿಷ್ಠವಾಗಿ ಜನರ ನಾಡಿ ಮಿಡಿತವನ್ನ ಸಮರ್ಥವಾಗಿ ಗ್ರಹಿಸಿ ಫಲಿತಾಂಶಕ್ಕೆ ಹತ್ತಿರದ ಸಂಖ್ಯೆಗಳನ್ನ ಕೊಡುವ ಹೆಗ್ಗಳಿಗೆ ಜನ್ ಕಿ ಬಾತ್ ಸಂಸ್ಥೆಯದ್ದು.
2018ರ ಜನ್ ಕಿ ಬಾತ್ ಸಮೀಕ್ಷೆ ವರದಿಯಂತೆ ಪಕ್ಷಗಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಬಿಜೆಪಿ 102 ರಿಂದ 108 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಕಳೆದ ಬಾರಿ 2018ರ ಚುನಾವಣೆಯಲ್ಲಿ ಜನ್ ಕಿ ಬಾತ್ ಸಮೀಕ್ಷೆ ವರದಿ ಹೇಳಿತ್ತು. ಕಾಂಗ್ರೆಸ್ 72-74, ಜೆಡಿಎಸ್ 42-44 ಹಾಗೂ ಇತರೆ 2-4 ಸೀಟ್‌ಗಳನ್ನು ಗೆಲ್ಲಲಿವೆ ಎಂದು ಸಮೀಕ್ಷೆ ವರದಿ ಬಹಿರಂಗಪಡಿಸಿತ್ತು. ಸಮೀಕ್ಷೆಯಂತೆಯೇ ಬಿಜೆಪಿ 104, ಕಾಂಗ್ರೆಸ್ 81, ಜೆಡಿಎಸ್ 37 ಹಾಗೂ ಇತರೆ 2 ಸೀಟ್‌ಗಳನ್ನು ಪಡೆದುಕೊಂಡಿವೆ. ಈ ಬಾರಿಯೂ ಜನ್ ಕಿ ಬಾತ್ ಸಮೀಕ್ಷೆ ವರದಿಯಂತೆಯೇ ಫಲಿತಾಂಶ ಹೊರಬೀಳಲಿದೆಯೇ ಎಂದು ಕಾದು ನೋಡಬೇಕಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications