ಸಿದ್ದರಾಮಯ್ಯ ಸಂಪುಟ ಸೇರ್ತಾರಾ ಜಗದೀಶ್ ಶೆಟ್ಟರ್?
ಬೆಂಗಳೂರು, ಮೇ 19; ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಜೊತೆ 20 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ದೆಹಲಿಯಲ್ಲಿ ಅಂತಿಮ ತೀರ್ಮಾನವಾಗಲಿದೆ.
ಶುಕ್ರವಾರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದೆಹಲಿಗೆ ತೆರಳಿದರು. ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಅವರು ತೆರಳಿದ್ದು, ಸಂಜೆ ಅಥವ ಶನಿವಾರ ಬೆಳಗ್ಗೆ ವಾಪಸ್ ಆಗುವ ನಿರೀಕ್ಷೆ ಇದೆ.

ಸಿದ್ದರಾಮಯ್ಯ ಸಂಪುಟ ಸೇರುವವರು ಯಾರು? ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆ ವಿಧಾನಸಭೆ ಚುನಾವಣೆಯಲ್ಲಿ ಸೋತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ಸಿದ್ದರಾಮಯ್ಯ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಶೆಟ್ಟರ್ ಹೇಳಿಕೆ; ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, "ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲು ಬಂದಿದ್ದೆ. ಬೇರೆ ಯಾವುದೇ ಚರ್ಚೆ ಮಾಡಿಲ್ಲ" ಎಂದರು.

ನೀವು ಸಂಪು ಸೇರುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಕಾಂಗ್ರೆಸ್ ಪಕ್ಷ, ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ" ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದಿದ್ದರು. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿಯೇ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಬಿಜೆಪಿಯ ಮಹೇಶ್ ಟೆಂಗಿನಕಾಯಿ ಶೆಟ್ಟರ್ ಎದುರಾಳಿಯಾಗಿದ್ದರು. ಚುನಾವಣೆಯಲ್ಲಿ ಶೆಟ್ಟರ್ 60775 ಮತಗಳನ್ನು ಪಡೆದು ಸೋಲು ಕಂಡಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಭಾರೀ ಸದ್ದು ಮಾಡಿದ್ದು ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ ಎಂಬ ಮಾತು. ಇಂತಹ ಸಂದರ್ಭದಲ್ಲಿಯೇ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಲಕ್ಷ್ಮಣ ಸವದಿ ಅಥಣಿಯಲ್ಲಿ ಗೆಲುವು ಸಾಧಿಸಿದ್ದು, ಬೆಳಗಾವಿ ಕೋಟಾದಡಿ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಆದರೆ ಜಗದೀಶ್ ಶೆಟ್ಟರ್ ಸಂಪುಟಕ್ಕೆ ಸೇರಿಸಿಕೊಳ್ಳಲು ತಾಂತ್ರಿಕ ಸಮಸ್ಯೆಗಳೂ ಇವೆ. ಶೆಟ್ಟರ್ ಸಂಪುಟ ಸೇರಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಬಹುದು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲು ಕಂಡಿರುವ ಅವರು ಸಚಿವರಾದ ಆರು ತಿಂಗಳಿನಲ್ಲಿ ಶಾಸಕರು ಅಥವ ವಿಧಾನ ಪರಿಷತ್ ಸದಸ್ಯರಾಗಬೇಕು. ಸದ್ಯ ರಾಜ್ಯದಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇಲ್ಲ. ಆದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಎಂಎಲ್‌ಸಿ ಮಾಡಬೇಕಿದೆ.
ಲೋಕಸಭೆ ಸ್ಪರ್ಧೆ; ಮತ್ತೊಂದು ಕಡೆ ಜಗದೀಶ್ ಶೆಟ್ಟರ್ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಗೆ 10 ತಿಂಗಳು ಬಾಕಿ ಇದೆ. ಧಾರವಾಡ ಕ್ಷೇತ್ರದಿಂದ ಅವರು ಬಿಜೆಪಿಯ ಪ್ರಹ್ಲಾದ್ ಜೋಶಿ ಎದುರಾಳಿಯಾಗಿಗ ಕಣಕ್ಕಿಳಿಯಬಹುದು ಎಂದು ಅಂದಾಜಿಸಲಾಗಿದೆ.
ಆದರೆ ಜಗದೀಶ್ ಶೆಟ್ಟರ್ ರಾಜ್ಯ ರಾಜಕಾರಣದಲ್ಲಿಯೇ ಇರಲು ಬಯಸಿದ್ದಾರೆ. ಬಿಜೆಪಿ ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುವಾಗ ಅವರಿಗೆ ಕೇಂದ್ರ ಸಚಿವ ಸ್ಥಾನದ ಆಫರ್ ನೀಡಿತ್ತು. ಇದಕ್ಕೆ ಶೆಟ್ಟರ್ ಒಪ್ಪಿಗೆ ನೀಡದೇ ಪಕ್ಷವನ್ನು ತೊರೆದಿದ್ದರು.












Click it and Unblock the Notifications