Jagadish Shettar Resigns: ಬಿಜೆಪಿ ವರಿಷ್ಠರು ಶೆಟ್ಟರ್ ಗೆ ನೀಡಿದ 5 ಆಯ್ಕೆಗಳು
ಹುಬ್ಬಳ್ಳಿ, ಏಪ್ರಿಲ್ 16: ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಭಾನುವಾರ (ಏ 16) ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.
ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ ಅವರಿಗೆ ಟಿಕೆಟ್ ಘೋಷಣೆಯಾಗಿರಲಿಲ್ಲ. ಅವರು ಎರಡು ಡೆಡ್ಲೈನ್ ಅನ್ನು ಹೈಕಮಾಂಡಿಗೆ ನೀಡಿದ್ದರು. ಇದರ ಹಿನ್ನಲೆಯಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಶೆಟ್ಟರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.

ಜಗದೀಶ್ ಶೆಟ್ಟರ್ ಜೊತೆಗಿನ ಸಾಲುಸಾಲು ಮಾತುಕತೆಗಳು ಫಲಪ್ರದವಾಗಲಿಲ್ಲ. ಆ ಹಿನ್ನೆಲೆಯಲ್ಲಿ ಶೆಟ್ಟರ್ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದಾಗಿ ಶೆಟ್ಟರ್ ಹೇಳುವ ಮೂಲಕ, ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್ ಕೂಡಾ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
ಬಿಜೆಪಿ ಹೈಕಮಾಂಡ್ ಕೊಟ್ಟ ಆಯ್ಕೆಗಳನ್ನ ಜಗದೀಶ್ ಶೆಟ್ಟರ್ ತಿರಸ್ಕರಿಸಿದ್ದಾರೆ. ಶೆಟ್ಟರ್ ಟಿಕೆಟ್ ಕಗ್ಗಾಂಟಾದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸರ್ವತಂತ್ರ, ಸ್ವತಂತ್ರ ಆಯ್ಕೆಗಳನ್ನು ಜಗದೀಶ್ ಶೆಟ್ಟರ್ ಮುಂದಿಟ್ಟಿತ್ತು. ಆದರೆ ಆ ಎಲ್ಲಾ ಆಫರ್ ಗಳನ್ನು ಶೆಟ್ಟರ್ ತಿರಸ್ಕರಿಸಿದ್ದಾರೆ.
ಹೈಕಮಾಂಡ್ ನೀಡಿದ ಆಯ್ಕೆಗಳು:
1. ರಾಜ್ಯದ ಎಲ್ಲಾ ಪ್ರಮುಖ ಸ್ಥಾನಮಾನಗಳನ್ನು ಅಲಂಕರಿಸಿರುವ ಜಗದೀಶ್ ಶೆಟ್ಟರ್ ಗೆ ತಕ್ಷಣವೇ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್.
2. ರಾಜ್ಯಸಭೆ ಗೆ ಶೆಟ್ಟರ್ ಅವರನ್ನು ಆಯ್ಕೆ ಮಾಡಿ ಕೇಂದ್ರದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಆಫರ್.
3. ದೇಶದ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡುವ ಭರವಸೆ.
4. ಹು-ಧಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಅವರ ಕುಟುಂಬದ ಸದಸ್ಯರಿಗೆ ನೀಡುವ ಬಗ್ಗೆಯೂ ಶೆಟ್ಟರ್ ಗೆ ಆಯ್ಕೆ.
5. ಒಂದು ವೇಳೆ ತಮ್ಮ ಕುಟುಂಬದವರಿಗೆ ಬೇಡ ಎನ್ನುವುದಾದರೆ ಅವರು ಸೂಚಿಸುವ ಪಕ್ಷದ ಯಾವುದೇ ಕಾರ್ಯಕರ್ತಗೆ ಟಿಕೆಟ್
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನಿರ್ದೇಶನದ ಮೇರೆಗೆ, ಈ ಆಯ್ಕೆ ನೀಡಿರುವುದಾಗಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದರು.

ಆದರೆ ಜಗದೀಶ್ ಶೆಟ್ಟರ್ ಅವರು ಈ ಎಲ್ಲಾ ಆಯ್ಕೆಗಳನ್ನ ತಿರಸ್ಕರಿಸಿದ್ದಾರೆ. ಆರು ಬಾರಿ ಶಾಸಕರಾಗಲು, ಸಚಿವರಾಗಲು, ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಪಕ್ಷ ತೊರೆಯುವ ತೀರ್ಮಾನದತ್ತ ಮುಖ ಮಾಡಿರುವ ಶೆಟ್ಟರ್ ನಡೆಗೆ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ನೀಡಿದ ಅವಕಾಶದ ಪರಿಣಾಮ ಆರು ಬಾರಿ ಶಾಸಕರಾಗಿ, ಪ್ರಮುಖ ಖಾತೆಗಳ ಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ, ಸಭಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಎಲ್ಲಾ ಪ್ರಮುಖ ಸ್ಥಾನಮಾನಗಳನ್ನು ಜಗದೀಶ್ ಶೆಟ್ಟರ್ ಅಲಂಕರಿಸಿದವರು.
ಈ ಬಾರಿ ಚುನಾವಣೆಗೆ ಟಿಕೆಟ್ ವಿಚಾರದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಹಲವು ಆಯ್ಕೆಗಳನ್ನು ಭಾರತೀಯ ಜನತಾ ಪಕ್ಷ ಮುಂದಿಟ್ಟಿರೂ, ಶೆಟ್ಟರ್ ಪಕ್ಷದ ನಡೆಯನ್ನ ತಿರಸ್ಕರಿಸಿದ್ದಾರೆ ಇದು ಬಿಜೆಪಿ ಹೈಕಮಾಂಡ್ ಬೇಸರಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications