ವೀರಣ್ಣ ಚಿರಂತಿಮಠ ಮನೆ ಮೇಲೆ ಐಟಿ ದಾಳಿ

ಗುರುವಾರ ಬೆಳಗ್ಗೆ ಬಾಗಲಕೋಟೆ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ವೀರಣ್ಣ ಚಿರಂತಿಮಠ ಅವರ ಹಳೇ ಬಾಗಲಕೋಟೆ ನಿವಾಸ, ಚಿರಂತಿಮಠ ಅಧ್ಯಕ್ಷರಾಗಿರುವ ಗುರುಬಸವ ಸಹಕಾರ ಸಂಘದ ಮೇಲೆ ದಾಳಿ ನಡೆಸಿದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಗುರುಬಸವ ಸಹಾಕಾರ ಸಂಘಕ್ಕೆ ವೀರಣ್ಣ ಚಿರಂತಿಮಠ ಅಧ್ಯಕ್ಷರಾಗಿದ್ದಾರೆ. ಈ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು 2012ರಲ್ಲಿ ದೂರು ದಾಖಲಾಗಿತ್ತು. ಸಹಕಾರಿ ಸಂಘಗಳ ನಿಬಂಧಕರು ಈ ಕುರಿತು ತನಿಖೆ ನಡೆಸಿದ್ದರು.
ಈ ತನಿಖೆಯ ಆಧಾರದ ಮೇಲೆಯೇ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರಬಹುದು ಎಂದು ತಿಳಿದು ಬಂದಿದೆ. ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಉಳಿದಂತೆ ವೀರಣ್ಣ ಚಿರಂತಿಮಠ ಅವರ ಕಾರ್ಖನೆ, ವಿದ್ಯಾಸಂಸ್ಥೆಗಳ ಮೇಲೆಯೂ ದಾಳಿ ನಡೆದಿದೆ.
ಚಿರಂತಿಮಠ ಅವರಿಗೆ ಸೇರಿದ ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಾಶುಂಪಾಲ ಓಂಕಾರ್ ಮತ್ತು ಚಿರಂತಿಮಠ ಅವರ ಗಿನ್ನಿಂಗ್ ಕಾರ್ಖನೆ ನೋಡಿಕೊಳ್ಳುತ್ತಿರುವ ಶಿವಾನಂದ್ ಅವರ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
2008ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ವೀರಣ್ಣ ಚಿರಂತಿಮಠ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ವಿರುದ್ಧ ಸೋಲು ಅನುಭವಿಸಿದ್ದರು.












Click it and Unblock the Notifications