ಬಹುಮತವನ್ನು ಬಿಜೆಪಿ ಹೇಗೆ ಸಾಬೀತುಪಡಿಸುತ್ತದೆ? ದಾರಿಗಳೇನು?
ಬೆಂಗಳೂರು, ಮೇ 17 : ಪ್ರಮಾಣವಚನ ಸ್ವೀಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನಡುರಾತ್ರಿ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಭಾರತೀಯ ಜನತಾ ಪಕ್ಷ ಮತ್ತು ಯಡಿಯೂರಪ್ಪ ನಿರಾಳರಾಗಿದ್ದಾರೆ. ದಿನಬೆಳಗಾಗುತ್ತಲೇ ಯಡಿಯೂರಪ್ಪನವರ ಪ್ರಮಾಣವಚನ ಸ್ವೀಕಾರ ಸಮಾರಂಭವೂ ಮುಗಿದುಹೋಗಿದೆ.
ಆದರೆ, ನಿಜವಾದ ಸವಾಲು ಇದೀಗ ಆರಂಭವಾಗಲಿದೆ. ಬಹುಮತಕ್ಕೆ ಬೇಕಾಗಿರುವ 112 ಮತಗಳ ಬದಲಾಗಿ ಕೇವಲ 104 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಹೇಗೆ ಬಹುಮತ ಸಾಬೀತುಪಡಿಸುತ್ತದೆ? ಈಬಾರಿ ಆಪರೇಶನ್ ಕಮಲ ಮಾಡುವುದಿಲ್ಲವೆಂದು ಕೂಡ ಹೇಳಿದೆ. ಹೀಗಿದ್ದ ಮೇಲೆ ಬಹುಮತ ಹೇಗೆ ಸಾಧ್ಯ?
ತೆರೆಯ ಹಿಂದೆ ಭಾರೀ ಚಟುವಟಿಕೆಗಳು, 'ಲೆಕ್ಕಾಚಾರ'ಗಳು ನಡೆಯುತ್ತಿವೆ. ರೆಡ್ಡಿ ಸಹೋದರರು ಮತ್ತೆ ಚುರುಕಾಗಿದ್ದಾರೆ. ಶ್ರೀರಾಮುಲು ಮುಂದಾಳತ್ವ ವಹಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿದ್ದ ಕೆಲ ಶಾಸಕರು ಇದ್ದಕ್ಕಿದ್ದಂತೆ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

ಒನ್ಇಂಡಿಯಾಗೆ ತಿಳಿದುಬಂದ ಮಾಹಿತಿ ಏನೆಂದರೆ, ಯಡಿಯೂರಪ್ಪನವರ ಪ್ರಮಾಣವಚನ ಸಮಾರಂಭ ಮುಗಿಯುತ್ತಿದ್ದಂತೆ ಕೆಲ ಶಾಸಕರು, ಕಮಲದ ದಳವನ್ನು ಹಿಡಿಯಲಿದ್ದಾರೆ. ವಿರೋಧಿಗಳ ಬಲವನ್ನು ತಗ್ಗಿಸಿ, ಬಿಜೆಪಿ ಬೆಂಬಲಿಗ ಶಾಸಕರು ಬಹುಮತದ ಸಮಯದಲ್ಲಿ ವಿರೋಧಿಗಳ ಪರ ಮತ ಹಾಕದಂತೆ ತಡೆಯುವುದೇ ಪ್ಲಾನ್.
ಮೊದಲಿಗೆ, 2008ರಲ್ಲಿ ನಡೆಸಿದಂತೆ 'ಆಪರೇಶನ್ ಕಮಲ' ನಡೆಸುವ ಯೋಜನೆ ರೂಪಿಸಿತ್ತು. ಆದರೆ, ಕೇಂದ್ರ ನಾಯಕತ್ವದಿಂದ ವಿರೋಧ ಬಂದ ಕಾರಣ, ಅದನ್ನು ಕೈಬಿಡಲಾಗಿಯಿತು. ಈ ಕಗ್ಗಂಟನ್ನು ನೀವು ವಿಧಾನಸೌಧದ ಗೋಡೆಗಳ ನಡುವೆಯೇ ಬಗೆಹರಿಸಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಅಮಿತ್ ಶಾ.
224ರಲ್ಲಿ 222 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿರುವುದರಿಂದ ಬಹುಮತ ಸಾಬೀತುಪಡಿಸಲು ಬೇಕಿರುವುದು 112 ಸ್ಥಾನಗಳು ಮಾತ್ರ. ಬಲ್ಲ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಆಡಳಿತದಿಂದ ಬೇಸರಗೊಂಡಿದ್ದ ಕೆಲ ಲಿಂಗಾಯತ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಅಲ್ಲದೆ, ಸುಮಾರು 15 ಎಂಎಲ್ಎಗಳು ಮತ ಚಲಾವಣೆಯಿಂದ ಹೊರಗುಳಿಯಲಿದ್ದಾರೆ. ಯಡಿಯೂರಪ್ಪನವರಿಗೆ ಬಹುಮತ ಸಾಬೀತುಪಡಿಸಲು ಈಗಾಗಲೆ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು 15 ದಿನಗಳ ಕಾಲಾವಕಾಶ ನೀಡಿದ್ದಾರೆ.
ಆಪರೇಶನ್ ಕಮಲ ಮಾಡಿ ಶಾಸಕರನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವು ಕಷ್ಟಸಾಧ್ಯ. ಏಕೆಂದರೆ, ಪಕ್ಷಾಂತರ ಕಾಯ್ದೆ ಅಡ್ಡ ಬರುವುದರಿಂದ ಅದರ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಆ ಕಾರಣದಿಂದಾಗಿ ಬಿಜೆಪಿಯನ್ನು ಬೆಂಬಲಿಸುವ ಶಾಸಕರು ಬಹುಮತ ಸಾಬೀತುಪಡಿಸುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಪರವಾಗಿ ಮತ ಹಾಕದಿದ್ದರೆ ಆಯಿತು.
ಮತ್ತೊಂದು ಸಾಧ್ಯತೆಯೆಂದರೆ, ನಾಲ್ಕೈದು ಶಾಸಕರನ್ನು ರಾಜೀನಾಮೆ ನೀಡಲು ಹೇಳುವುದು. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಬಲ ಬಹುಮತಕ್ಕಿಂತ ಕೆಳಗೆ ಬರಲಿದೆ. ಆಗ ಬಹುಮತ ಸಾಬೀತುಪಡಿಸುವುದು ಬಿಜೆಪಿಗೆ ಸಲೀಸು. ಆದರೆ, ಇದೀಗ ತಾನೆ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಿಂದ ರಾಜೀನಾಮೆ ನೀಡಿಸುವುದು ಸ್ಪಲ್ಪ ಕಷ್ಟದ ಕೆಲವೇ. ಆದ್ದರಿಂದ, ಮತ ಹಾಕದಂತೆ ಹೊರಗುಳಿಯುವುದು ಸದ್ಯದ ಸುಲಭದ ಮಾರ್ಗವಾಗಿದೆ. ಇನ್ನೂ ಏನೇನಾಗುತ್ತೆ ಕಾದು ನೋಡಿ.











Click it and Unblock the Notifications