ಲೋಕಸಭಾ ಚುನಾವಣೆಯಲ್ಲಿ ಫಲ ಕೊಡುತ್ತಾ ರಾಹುಲ್ ಗಾಂಧಿ ತಂತ್ರ: ಕಾಂಗ್ರೆಸ್ ನಾಯಕರು ಮಾಡಬೇಕಿರುವುದೇನು..?
ಮೈಸೂರು, ಫೆಬ್ರವರಿ 20: ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಚುನಾವಣೆಗೆ ಮುನ್ನವೇ ಗೆಲುವಿನ ವಿಶ್ವಾಸದಲ್ಲಿದ್ದರೆ, ಅತ್ತ ನರೇಂದ್ರಮೋದಿಯನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಲೇ ಬೇಕೆಂಬ ಪಣ ತೊಟ್ಟು ಐಎನ್ ಡಿಐಎ ಒಕ್ಕೂಟ ರಚಿಸಿದ್ದ ಕಾಂಗ್ರೆಸ್ ಸದ್ಯಕ್ಕೆ ಮಂಕಾದಂತೆ ಗೋಚರಿಸುತ್ತಿದೆ. ಹೀಗಾಗಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಿ ನಾಯಕ ರಾಹುಲ್ ಗಾಂಧಿ ಸರ್ಕಸ್ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ.
ಕೇರಳದ ವಯನಾಡ್ ನಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ನ್ಯಾಯ್ ಯಾತ್ರೆಯನ್ನು ಮೊಟಕುಗೊಳಿಸಿ ರಾಹುಲ್ ಗಾಂಧಿ ಓಡಿ ಬಂದಿರುವುದು ಮತ್ತು ಕೇರಳದ ಸರ್ಕಾರದ ಮೂಲಕ ಪರಿಹಾರದ ಹಣ ಕೊಡಿಸದೆ ಕರ್ನಾಟಕ ಸರಕಾರದ ಮೂಲಕ 15ಲಕ್ಷ ಪರಿಹಾರ ಕೊಡಿಸಿರುವುದು ಕ್ಷೇತ್ರದ ಜನರ ಬಗ್ಗೆ ಇರುವ ಕಳಕಳಿಯಾ ಅಥವಾ ರಾಜಕೀಯ ತಂತ್ರನಾ ಎಂಬ ಚರ್ಚೆಗಳು ಆರಂಭವಾಗಿವೆ.

ಇವತ್ತಿನ ಪರಿಸ್ಥಿತಿಯಲ್ಲಿ ಜನರ ಮನಗೆಲ್ಲುವುದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಗೆ ಅನಿವಾರ್ಯವಾಗಿದೆ. ಅದರಲ್ಲೂ ಅವರು ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸುವುದು ಅವರ ಕರ್ತವ್ಯವೂ ಹೌದು. ಆದರೆ ತಮ್ಮದೇ ಇಂಡಿಯಾ ಒಕ್ಕೂಟದೊಂದಿಗೆ ಕೇರಳದಲ್ಲಿ ಅಧಿಕಾರದಲ್ಲಿರುವ (ಸಿಪಿಐ(ಎಂ) ಸರ್ಕಾರವೂ ಸೇರಿಕೊಂಡಿರುವುದರಿಂದ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೂಲಕ ಪರಿಹಾರ ಕೊಡಿಸಬಹುದಿತ್ತು. ಆದರೆ ಕರ್ನಾಟಕ ಸರ್ಕಾರದ ಮೂಲಕ ಪರಿಹಾರ ಕೊಡಿಸಿರುವುದು ಚರ್ಚೆಗೆ ಕಾರಣವಾಗಿದೆ.
ಎನ್‌ಡಿಎಗೆ ಪರ್ಯಾಯ ಶಕ್ತಿ ಸ್ಥಾಪನೆ
ಹಾಗೆನೋಡಿದರೆ ಕಳೆದ ವರ್ಷ ಈ ವೇಳೆಗೆಲ್ಲ ಕಾಂಗ್ರೆಸ್ ಹುಮ್ಮಸ್ಸಿನಲ್ಲಿತ್ತು. ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ ಸಂಭ್ರಮದಲ್ಲಿದ್ದರು. ಅಷ್ಟೇ ಅಲ್ಲದೆ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ಹೆಚ್ಚಿನ ನಿಗಾವಹಿಸಿದ್ದರು. ಜತೆ ಜತೆಗೆ ಕೇಂದ್ರಮಟ್ಟದಲ್ಲಿ ಬಿಜೆಪಿಯನ್ನು ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಪ್ರತಿಪಕ್ಷಗಳ ನಾಯಕರನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದರು.
ಕಳೆದೊಂದು ವರ್ಷದ ಹಿಂದೆ ರಾಹುಲ್ ಗಾಂಧಿ ಅವರು ಏನಾದರಾಗಲೀ ದೇಶದಾದ್ಯಂತ ಇರುವ ಎಡಪಕ್ಷಗಳ ನಾಯಕರ ಸಹಕಾರ ಪಡೆದು ಒಕ್ಕೂಟ ರಚಿಸಿ ಎನ್ ಡಿಎಗೆ ಪರ್ಯಾಯ ಶಕ್ತಿಯನ್ನು ದೇಶದಲ್ಲಿ ಹುಟ್ಟು ಹಾಕಿ ನರೇಂದ್ರಮೋದಿಯನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂಬ ಕನಸು ಕಾಣುತ್ತಿದ್ದರಲ್ಲದೆ, ಅದಕ್ಕಾಗಿ ತಮ್ಮ ಕಾರ್ಯ ಚಟುವಟಿಕೆಯನ್ನು ಆರಂಭಿಸಿದ್ದರು. ಆರಂಭದಲ್ಲಿ ಇದಕ್ಕೆ ಉತ್ತಮ ವೇಗ ಸಿಕ್ಕಿತ್ತು.

ಅದು ಆರಂಭದ ಶೂರತನವೇ
ಘಟಾನುಘಟಿ ಪಕ್ಷವಾಗಿರುವ ಎಎಪಿ, ಟಿಎಂಸಿ, ಎಡಪಕ್ಷಗಳು ಸೇರಿದಂತೆ ಸುಮಾರು ಇಪ್ಪತ್ತೆಂಟು ಪಕ್ಷಗಳ ನಾಯಕರು ಕಾಂಗ್ರೆಸ್ ಜೊತೆ ಬರಲು ಒಪ್ಪಿಗೆ ಸೂಚಿಸಿದ್ದರು. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕವಂತು ಕಾಂಗ್ರೆಸ್ ಗೆ ಆನೆ ಬಲ ಬಂದಿತ್ತು. ಆರಂಭದ ಶೂರತನ ಎನ್ನುವಂತೆ ಎಲ್ಲ ಪಕ್ಷಗಳ ನಾಯಕರು ಹುಮ್ಮಸ್ಸಿನಿಂದಲೇ ಒಟ್ಟಾಗಿ ಸಭೆ ನಡೆಸಿದ್ದರು.
ಆರಂಭದ ಸಭೆಗಳಲ್ಲಿ ಒಗ್ಗಟ್ಟಿನ ಪ್ರದರ್ಶನ ಕಂಡು ಬಂದಿತ್ತಾದರೂ ಯಾವಾಗ ಕಾಂಗ್ರೆಸ್ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ತೋರಿಸಲು ಆರಂಭಿಸಿತೋ ಎಎಪಿಯ ಅರವಿಂದ್ ಕೇಜ್ರಿವಾಲ್ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ಹಿಂದೇಟು ಹಾಕಲು ಆರಂಭಿಸಿದ್ದರು. ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಒತ್ತಡ ಹೇರಿದ್ದರು.

ಭಾರತ್ ಜೋಡೋ ನ್ಯಾಯ್ ಯಾತ್ರೆ ವಿಘ್ನ
ಇದಾದ ನಂತರ ಐಎನ್ ಡಿಐಎ (ಇಂಡಿಯಾ) ಒಕ್ಕೂಟ ಚಾಲ್ತಿಯಲ್ಲಿದ್ದಾಗಲೇ ಒಕ್ಕೂಟದ ಘಟಾನುಘಟಿ ನಾಯಕರ ಸಲಹೆ, ಒಪ್ಪಿಗೆ ಪಡೆಯದೆ ಎರಡನೇ ಬಾರಿಗೆ ಭಾರತ್ ನ್ಯಾಯ್ ಯಾತ್ರೆ ಆರಂಭಿಸಿದ್ದು, ಇಂಡಿಯಾ ಒಕ್ಕೂಟದ ಇತರೆ ನಾಯಕರ ಅಸಮಾಧಾನಕ್ಕೂ ಕಾರಣವಾಯಿತು. ಹೀಗಾಗಿ ಅವರಿಗೆ ಅವರು ನಡೆಸಿದ ರಾಜ್ಯಗಳಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಯಾವುದೇ ಬೆಂಬಲ ವ್ಯಕ್ತವಾಗದಿರುವುದು, ಮತ್ತು ವಿರೋಧಗಳು ಎದುರಾಗುವಂತಾಯಿತು.
ರಾಹುಲ್ ಗಾಂಧಿ ಅವರು ನನಗೆ ನ್ಯಾಯ್ ಯಾತ್ರೆ ವೇಳೆ ತೊಂದರೆ ನೀಡಲಾಗಿದೆ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಅವರ ಬೆಂಬಲಕ್ಕೆ ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳ ನಾಯಕರು ಬೆಂಬಲಕ್ಕೆ ಬಾರದಿರುವುದು ಮತ್ತು ನ್ಯಾಯ್ ಯಾತ್ರೆ ನಡೆಯುತ್ತಿರುವಾಗಲೇ ಎಎಪಿ, ಟಿಎಂಸಿ, ಜೆಡಿಯು ಮೊದಲಾದ ಪಕ್ಷಗಳು ದೂರ ಸರಿದಿವೆ. ಅದರಲ್ಲೂ ಅಯೋಧ್ಯೆಯಲ್ಲಿ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕಾರ ಮಾಡಿರುವುದು ರಾಜಕೀಯದಲ್ಲಿ ಒಂದಷ್ಟು ಬೆಳವಣಿಗೆಗೆ ಕಾರಣವಾಗಿದೆ.

ಎಲ್ಲಿಂದ ರಾಹುಲ್ ಗಾಂಧಿಯ ಸ್ಪರ್ಧೆ?
ಮೇಲ್ನೋಟಕ್ಕೆ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ನ್ಯಾಯ್ ಯಾತ್ರೆ ಅಂತಹ ಯಶಸ್ಸು ತಂದುಕೊಟ್ಟಂತೆ ಕಾಣಿಸುತ್ತಿಲ್ಲ. ಜತೆಗೆ ಕಳೆದ ಬಾರಿ ಅಮೇಥಿ ಮತ್ತು ವಯನಾಡ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ ವಯನಾಡ್ ನಲ್ಲಿ ಮಾತ್ರ ಗೆಲುವು ಕಾಣುವಂತಾಯಿತು. ಈ ಬಾರಿ ಅವರು ಮತ್ತೆ ಇದೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರಾ? ಗೊತ್ತಿಲ್ಲ.
ಕಳೆದ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡರೂ ಕೇರಳದ ವಯನಾಡ್ ಜನ ರಾಹುಲ್ ಗಾಂಧಿ ಅವರ ಕೈಹಿಡಿದಿದ್ದರು. ಈ ಬಾರಿಯೂ ವಯನಾಡ್ ಜನರೇ ಅವರನ್ನು ಗೆಲ್ಲಿಸಿ ದೆಹಲಿ ಕಳುಹಿಸಿಕೊಡಬೇಕಾಗಿದೆ. ಹೀಗಾಗಿ ವಯನಾಡ್ ಜನರ ಗಮನಸೆಳೆಯುವ ಕೆಲಸವನ್ನು ಮಾಡಲೇ ಬೇಕಾಗಿದೆ. ಹೀಗಾಗಿ ಅವರು ನ್ಯಾಯ್ ಯಾತ್ರೆಯನ್ನು ಮೊಟಕುಗೊಳಿಸಿ ಬಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಏನೇ ಮಾಡಿದರೂ ರಾಜಕೀಯಕ್ಕೆ ತಳಕು ಹಾಕಿಕೊಳ್ಳತ್ತದೆ.
ರಾಹುಲ್ ಗಾಂಧಿಯತ್ತ ದೃಷ್ಟಿ ನೆಟ್ಟ ಜನ
ರಾಜಕೀಯ ಆರೋಪ ಪ್ರತ್ಯಾರೋಪಗಳು ಏನೇ ಇರಲಿ. ಈ ಬಾರಿ ಮತ್ತೆ ವಯನಾಡಿನಿಂದಲೇ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರಾ? ಅಥವಾ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುತ್ತಾರಾ? ಗೊತ್ತಿಲ್ಲ. ಎಲ್ಲದಕ್ಕೂ ಉತ್ತರ ಸಿಗುವ ಕಾಲಕ್ಕಾಗಿ ಜನ ಕಾಯುತ್ತಿದ್ದು, ಒಕ್ಕೂಟದಿಂದ ದೂರ ಸರಿಯುತ್ತಿರುವ ನಾಯಕರ ನಡುವೆ ಉಳಿದ ಪಕ್ಷಗಳ ನಾಯಕರನ್ನು ಜತೆಗೆ ಕರೆದುಕೊಂಡು ಹೇಗೆ ಚುನಾವಣೆ ಎದುರಿಸುತ್ತಾರೆ ಎಂಬುದೇ ಎಲ್ಲರ ಕುತೂಹಲವಾಗಿದೆ.












Click it and Unblock the Notifications